Advertisement
ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಶುಕ್ರವಾರ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
Related Articles
Advertisement
ನಂತರ ಶ್ರೀಗಳು, ನಿತ್ಯ ನಿಮ್ಮ ಬದುಕಿನಲ್ಲಿ ಕಾಡುವ ಒಂದು ಪ್ರಶ್ನೆ ಏನು? ಎಂದು ಕೇಳಿದ್ದಕ್ಕೆ ವಿದ್ಯಾರ್ಥಿನಿ ಐಶ್ವರ್ಯ ನಿದ್ದೆ ಎಂದು ಉತ್ತರಿಸಿದರು. ನಿಮಗೆ ಯಾವ್ಯಾವ ವಿಷಯ ಓದುವಾಗ ನಿದ್ದೆ ಹೆಚ್ಚು ಬರುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ಒಬ್ಬ ವಿದ್ಯಾರ್ಥಿ ಹಿಂದಿ ಎಂದರೆ ಮತ್ತೂಬ್ಬ ವಿಜ್ಞಾನ, ಇನ್ನೋರ್ವ ಸಮಾಜಶಾಸ್ತ್ರ ಎಂದುತ್ತರಿಸಿದರು.
ಆಗ ಶ್ರೀಗಳು ಮಾತನಾಡಿ, ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಪ್ರಮಾಣಕ್ಕನುಗುಣವಾಗಿ ಮಾಡಿ. ಬೆಳಗ್ಗೆಯಿಂದ ಪಾಠ ಕೇಳಿ ಆಯಾಸಗೊಂಡಿರುವಾಗ ಮಧ್ಯಾಹ್ನ ಊಟದ ನಂತರ ನಿದ್ದೆ ಬಂದರೆ ಗೋಡಂಬಿ, ದ್ರಾಕ್ಷಿ, (ಡ್ರೈಪ್ರೂಟ್ಸ್) ಸೇವಿಸಿ ಎಂದರಲ್ಲದೇ, ಹಿಂದಿ ವಿಷಯ ಅರ್ಥ ಆಗದಿದ್ದರೆ ಮನೇಲಿ ಹಿಂದಿ ನ್ಯೂಸ್ ಚಾನೆಲ್ ವೀಕ್ಷಿಸಿ, ಭಾಷೆ ಬಲ್ಲ ಸ್ನೇಹಿತರೊಂದಿಗೆ ಚರ್ಚಿಸಿ. ಏಕೆಂದರೆ, ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿದೆ. ಈ ಭಾಷೆ ಕಲಿತರೆ ಸಾಕಷ್ಟು ಸಂಘ, ಸಂಸ್ಥೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದರು.
ಬೋಧಕ ವರ್ಗವದರು ಕೂಡ ಮಕ್ಕಳು ನಿದ್ರೆಗೆ ಜಾರದಂತೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಏನು ಮಾಡಬೇಕು? ಎಂದು ಶ್ರೀಗಳು ಕೇಳಿದ ಪ್ರಶ್ನೆಗೆ ಮಹಿಳಾ ಸಮಾಜ ಶಾಲೆಯ ವಿದ್ಯಾರ್ಥಿ ರಮೇಶ್ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು ಎಂದರು. ವಿದ್ಯಾರ್ಥಿನಿ ಅನುಷಾ ಉತ್ತರಿಸುತ್ತ, ಶಾಲೆಯಲ್ಲಿ ಶಿಕ್ಷಕರು ಪಠ್ಯದ ಜೊತೆಗೆ ನಮ್ಮ ಭವಿಷ್ಯಕ್ಕಾಗಿ ವಿಶೇಷ ತರಗತಿಗಳನ್ನು ಮಾಡುತ್ತಾ ಹೆಚ್ಚಿನ ಜವಾಬ್ದಾರಿ ನಿರ್ವಹಿಸುತ್ತಾರೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಿತ್ಯ ಎಷ್ಟು ಹೊತ್ತು ಓದು ಮತ್ತು ಆಟವಾಡುತ್ತೀರಿ? ಎಂದು ಶ್ರೀಗಳು ಕೇಳಿದಾಗ, ವಿದ್ಯಾರ್ಥಿಯೊಬ್ಬ ಸಂಜೆ ಹೊತ್ತು ಕತ್ತಲಾಗುವ ತನಕ ಕ್ರಿಕೆಟ್ ಆಟವಾಡುತ್ತೇವೆ ಎಂದು ಉತ್ತರಿಸಿದ. ಶ್ರೀಗಳು ನಂತರ ಮನೇಲಿ ಎಷ್ಟು ಹೊತ್ತು ಟಿವಿ ನೋಡುತ್ತೀರಿ ಎಂದಿದ್ದಕ್ಕೆ ಸುಮ್ಮನಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಿದ್ದೆ ಬರುವ ತನಕ ಟಿವಿ, ಮೊಬೈಲ್ ಗೇಮ್ ಆಡುವುದನ್ನು ಬಿಟ್ಟು ಆಸಕ್ತಿಯಿಂದ ಓದಿ ಎಂದರು.
ನಂತರ ಸೆಂಟ್ ಪಾಲ್ಸ್ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ಮಾತನಾಡಿ, ಪ್ರೀತಿ, ಆಸಕ್ತಿಯಿಂದ ಓದಿದರೆ ಯಾವುದೇ ವಿಷಯ ಕಷ್ಟ ಸಾಧ್ಯ ಅಲ್ಲ. ಎಲ್ಲಾ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಮನೆಯಲ್ಲಿ ಗಂಡು ಮಕ್ಕಳಿಗೆ ಅಪ್ಪ-ಅಮ್ಮ ಮೊಬೈಲ್, ಬೈಕ್ ಎಲ್ಲಾ ಕೊಡಿಸ್ತಾರೆ. ನಮಗೆ ಏನೂ ಕೊಡಿಸಲ್ಲ. ಹಾಗಾಗಿ ಗಂಡು ಮಕ್ಕಳು ಹೆಚ್ಚು ಓದಲ್ಲ. ನಾವು ಮದುವೆ ಆದ ಬಳಿಕ ಗಂಡನ ಮನೆಗೆ ಹೋಗುವವರು. ಜೊತೆಗೆ ಎಲ್ಲೂ ಹೊರಗಡೆ ಹೋಗದೇ ಮನೇಲಿ ಕೂತು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತೇವೆ. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸ್ಯಾಧ್ಯವಾಗುತ್ತದೆ ಎಂದು ಎಂದರು. ಇದಕ್ಕೆ ಶ್ರೀಗಳು ನಗುತ್ತಲೇ ನೀವೂ ಸಮಾನ ಹಕ್ಕು ಕೇಳಿ ಮನೇಲಿ ಎಂದು ಹಾಸ್ಯ ಚಟಾಕಿ ಸಿಡಿಸಿದರು.
ನಂತರ ಶಿಕ್ಷಕರೊಬ್ಬರು ಮಾತನಾಡಿ, ನಿತ್ಯ ವಿದ್ಯಾರ್ಥಿಗಳು ಬೆಳಿಗ್ಗೆ 5ಗಂಟೆಗೆ ಎದ್ದು ಓದಬೇಕು. ರಾತ್ರಿ 11.30ರವರೆಗೆ ಓದು, ಬರಹ ರೂಢಿಸಿಕೊಳ್ಳಬೇಕು. ಪ್ರತಿದಿನ 6 ಗಂಟೆಗಳ ಕಾಲ ಟಿವಿ, ಮೊಬೈನಿಂದ ದೂರವಿದ್ದು, ಶ್ರದ್ಧೆಯಿಂದ ಓದಬೇಕು. ಆಗ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.
ದೊಡ್ಡಪೇಟೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಸೇರಿದಂತೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.