Advertisement
ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆ ಸೌಲಭ್ಯ ಪಡೆದುಕೊಂಡಿದ್ದು, ನಗರಾಡಳಿತಗಳಿಗೆ ಆರಂಭಿಕ ಗುರಿಯನ್ನು ನೀಡಲಾಗಿತ್ತು. ಈ ಪೈಕಿ ಉಡುಪಿ ಕುಂದಾಪುರ, ಕಾರ್ಕಳ, ಕಾಪು, ಸಾಲಿಗ್ರಾಮ ನಗರಾಡಳಿತಗಳು ನಿಗದಿತ ಗುರಿಗಿಂತಲೂ ಮೀರಿದ ಸಾಧನೆಯನ್ನು ಮಾಡಿವೆ.
ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಬೀದಿ ಬದಿ ವ್ಯಾಪಾರಿಗಳ ಪುನಶ್ಚೇತನಕ್ಕೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಯೋಜನೆಯನ್ನು ಕೇಂದ್ರ ಸರಕಾರ ಕಳೆದ ಜೂನ್ 1ರಿಂದ ದೇಶಾದ್ಯಂತ ಜಾರಿಗೆ ತಂದಿತ್ತು. 10 ತಿಂಗಳಿಂದ ಸಾಲ ವಿತರಣೆ ನಡೆಯುತ್ತಿದ್ದು, 2020ರ ಮೇ ತನಕ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. 2ನೇ ಬಾರಿಯೂ ಪಡೆಯಬಹುದು
ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕಾಗುತ್ತದೆ. ಈಗಾಗಲೇ 10 ತಿಂಗಳು ಕಂತು ಸಕಾಲದಲ್ಲಿ ತುಂಬಿರುವ ವ್ಯಾಪಾರಿಗಳು ಮತ್ತೆ ಸಾಲ ಬಯಸಿದಲ್ಲಿ ಬಾಕಿ ಇರುವ ಮೊತ್ತವನ್ನು ತುಂಬಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆ. 2020ರ ಮಾ.24ರ ವೇಳೆಯಲ್ಲಿ ಹಾಗೂ ಅದಕ್ಕೂ ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ.
Related Articles
ನಗರ ಕೇಂದ್ರಿತ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ. ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇನ್ನು ಒಂದಷ್ಟು ವಿತರಣೆಗೆ ಬಾಕಿಯಿದ್ದು, ಅದನ್ನು ಮಾಡುತ್ತೇವೆ. ಯೋಜನೆಯಿಂದ ವ್ಯಾಪಾರಿಗಳಿಗೆ ಸಾಕಷ್ಟು ಪ್ರಯೋಜನವಾಗಿದೆ.
-ಭಾಸ್ಕರ ಅಮೀನ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ
Advertisement
ಯೋಜನೆಯಲ್ಲಿ ಯಾರೆಲ್ಲ ಒಳಪಡುತ್ತಾರೆ?ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ತಳ್ಳು ಬಂಡಿ, ಆಟೋಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಮನೆಗಳ ಬಳಿ ತೆರಳಿ ತರಕಾರಿ, ಹೂ, ಕಾಯಿ ಮಾರುವವರು ಹಾಗೂ ರಸ್ತೆ ಬದಿಗಳಲ್ಲಿ ಬಿಡಿ ವ್ಯಾಪಾರಿಗಳು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ದುರಸ್ತಿ ಹಾಗೂ ಮಾರಾಟ ಮಾಡುವವರು, ಆಟದ ಸಾಮಾನು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರೂ ಈ ಯೋಜನೆಯಲ್ಲಿ ಒಳಪಡುತ್ತಾರೆ.