ಚಿಂತಾಮಣಿ: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಬಡವರಿಗೆ, ಹೈನೋದ್ಯಮಕ್ಕೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಲ ನೀಡುವುದರ ಜೊತೆಗೆ ಬೀದಿ ಬದಿಯ ವ್ಯಾಪಾರಸ್ಥರಿಗೆ ಬಡವರ ಬಂದು ಯೋಜನೆಯಡಿ 10 ಸಾವಿರ ಬಡ್ಡಿ ರಹಿತ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ನನ್ನ ಮುಖ್ಯ ಗುರಿ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್(ಡಿಸಿಸಿ) ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ತಿಳಿಸಿದರು.
ನಗರದ ಡಿ.ಸಿ.ಸಿ ಬ್ಯಾಂಕ್‌ಗೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿದ ಅವರು, ಸಹಕಾರಿ ಬ್ಯಾಂಕ್ ಇರುವುದು ಬಡವರಿಗಾಗಿ ಹಾಗೂ ಅವರ ಸೇವೆಗಾಗಿ, ರಾಷ್ಟ್ರೀಕೃತ ಬ್ಯಾಂಕ್ ಇರುವುದು ಶ್ರೀಮಂತರಿಗಾಗಿ ಎಂದರು. ಕಳೆದ ಅವಧಿಯಲ್ಲಿ ನನ್ನ ಕಾರ್ಯವೈಖರಿ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ನನ್ನನ್ನು ಎರಡನೇ ಬಾರಿ ಅಧ್ಯಕ್ಷರನಾಗಿ ಆಯ್ಕೆ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಬಡ್ಡಿ ರಹಿತ ಸಾಲ: ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅನೇಕ ಬೀದಿ ಬದಿಯ ವ್ಯಾಪಾರಸ್ಥರು ದಿನಕ್ಕೆ ಒಂದು ಸಾವಿರ ರೂ.ಗೆ 100 ರೂ ಬಡ್ಡಿ ಕೊಟ್ಟು ವ್ಯಾಪಾರ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಹಲವರಿಗೆ ಅವರು ಹಾಕಿದ ಬಂಡವಾಳವು ಕೈಸೇರದೆ ಕೇವಲ ಬಡ್ಡಿಕೋರರಿಗೆ ನೀಡುತ್ತಿದ್ದಾರೆ. ಇದನ್ನು ಗಮನಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ. ಸಾಲ ನೀಡಿ ಅವರ ವ್ಯಾಪಾರಕ್ಕೆ ನೆರವಾಗಲಾಗುವುದು ಎಂದರು.
ರಾಜ್ಯದಲ್ಲೇ ಹೆಚ್ಚು: ಚಿಂತಾಮಣಿ ತಾಲೂಕು ವಾಣಿಜ್ಯ ನಗರಿ ಎಂದು ಖ್ಯಾತಿ ಪಡೆಯುವುದರ ಜೊತೆಗೆ ರಾಜ್ಯದಲ್ಲೇ ಮೀಟರ್ ಬಡ್ಡಿ ವ್ಯವಹಾರ ಹೆಚ್ಚಾಗಿ ನಡೆಯುವ ತಾಲೂಕು ಎಂತಲೂ ಕುಖ್ಯಾತಿ ಪಡೆದಿದೆ.
ಪಿಗ್ನಿ ಪದ್ಧತಿಯಲ್ಲಿ ವಸೂಲಿ: ಬೀದಿ ಬದಿಯ ವ್ಯಾಪಾರಸ್ಥರಿಗೆ ನೀಡುವ ಬಡ್ಡಿ ರಹಿತ ಸಾಲವನ್ನು ದಿನಕ್ಕೆ 100 ರೂ.ರಂತೆ ಬ್ಯಾಂಕ್‌ನಿಂದಲೇ ವ್ಯಾಪಾರಸ್ಥರ ಬಳಿ ಹೋಗಿ ಪಿಗ್ನಿ ಪದ್ಧತಿಯಲ್ಲಿ ಕಟ್ಟಿಸಿಕೊಳ್ಳುತ್ತೇವೆ. ಇದರಿಂದ ಯಾರಿಗೂ ಬಡ್ಡಿ ಕಟ್ಟುವ ಅಗತ್ಯವಿರುವುದಿಲ್ಲ ಎಂದರು. ನಿರ್ದೇಶಕ ನಾಗಿರೆಡ್ಡಿ, ಕೊಚಿಮುಲ್ ನಿರ್ದೇಶಕ ಊಲವಾಡಿ ಅಶ್ವತ್ಥ ನಾರಾಯಣಬಾಬು, ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್, ವಿ.ಎಸ್.ಎಸ್.ಎನ್ ಅಧ್ಯಕ್ಷರು ಇದ್ದರು.