ಮಂಗಳೂರು: ಕುಟುಂಬ ರಾಜಕಾರಣ ಎಂಬ ಉಲ್ಲೇಖ ಭಾರತದ ರಾಜಕೀಯ ರಂಗದಲ್ಲಿ ನಿರಂತರವಾಗಿ ಬಳಕೆಯಲ್ಲಿದೆ. ರಾಷ್ಟ್ರಮಟ್ಟದಿಂದ ಸ್ಥಳೀಯ ಮಟ್ಟದವರೆಗೆ ಇದು ಚಾಲ್ತಿಯಲ್ಲಿದೆ. ಆದರೆ ದಕ್ಷಿಣ ಕನ್ನಡ – ಉಡುಪಿ ಸಹಿತವಾದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಪರಂಪರೆ ಭಾರೀ ಎಂಬಂತೆ ಇಲ್ಲ ಅನ್ನುವುದು ವಿಶೇಷ. ಹಾಗೆಂದು ಇಲ್ಲವೇ ಇಲ್ಲ ಎಂದು ಹೇಳುವ ಹಾಗೆಯೇ ಇಲ್ಲ. ಕೆಲವು ನಿದರ್ಶನಗಳು ಇಲ್ಲಿನ ಚುನಾವಣಾ ದಾಖಲೆಗಳಲ್ಲಿ ಕಂಡುಬರುತ್ತವೆ. ಇಲ್ಲಿ ಕುಟುಂಬ ಅಥವಾ ಎರಡನೇ ತಲೆಮಾರು ಅಥವಾ ಸಮೀಪ ಬಂಧುಗಳು ಶಾಸಕರಾದ ನಿದರ್ಶನಗಳಿವೆ. ಆದರೆ ಇದು ವಂಶ ಪಾರಂಪರ್ಯ ಎಂಬ ಮುದ್ರೆಯನ್ನು ಹೊಂದಿಲ್ಲ. ವಿಜೇತರಾದ ಅಥವಾ ಸ್ಪರ್ಧಿಸಿದ ಅಭ್ಯರ್ಥಿಗಳ ಸಾಮರ್ಥ್ಯವನ್ನು ಆಧರಿಸಿದೆ ಎಂಬುದು ಗಮನಾರ್ಹ.
ಹೀಗೆ ಜಿಲ್ಲೆಯ ರಾಜಕೀಯ ರಂಗದಲ್ಲಿ ಸ್ಥಾನ ಪಡೆದ ಮತ್ತು ಈಗಲೂ ಸಕ್ರಿಯರಾಗಿರುವ ಕುಟುಂಬಗಳನ್ನು ಪರಿಗಣಿಸಿದರೆ ಉಡುಪಿ ಕ್ಷೇತ್ರದಿಂದ ಜಯಿಸಿದ ಮಧ್ವರಾಜ್ ಕುಟುಂಬಕ್ಕೆ ವಿಶೇಷ ಸ್ಥಾನ ಇದೆ. ಇಲ್ಲಿ ಉದ್ಯಮಿ ಎಂ. ಮಧ್ವರಾಜ್ ಅವರು ಮೊದಲಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಮುಂದೆ ಅವರ ಪತ್ನಿ ಮನೋರಮಾ ಮಧ್ವರಾಜ್ ಆಯ್ಕೆಯಾದರು ಮತ್ತು ಸಚಿವರೂ ಆದರು. ಈಗ ಈ ದಂಪತಿಯ ಪುತ್ರ ಪ್ರಮೋದ್ ಮಧ್ವರಾಜ್ ಶಾಸಕರೂ ಆಗಿದ್ದಾರೆ; ಸಚಿವರೂ ಆಗಿದ್ದಾರೆ.
ಇನ್ನು ಬೆಳ್ತಂಗಡಿ ಕ್ಷೇತ್ರದಿಂದ ಸಹೋದರರಾದ ಚಿದಾನಂದ ಕೆ., ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ ಅವರು ಶಾಸಕರಾಗಿರುವುದು ಇನ್ನೊಂದು ರೀತಿಯ ದಾಖಲೆ. ವಸಂತ ಬಂಗೇರ – ಪ್ರಭಾಕರ ಬಂಗೇರರರ ನಡುವೆ ಸಹೋದರರ ಸವಾಲ್ ಎಂಬಂತೆ ಸ್ಪರ್ಧೆಯೂ ನಡೆದಿತ್ತು. ಡಾ| ನಾಗಪ್ಪ ಆಳ್ವ- ಡಾ| ಜೀವರಾಜ್ ಆಳ್ವ (ತಂದೆ- ಮಗ) ಅವರು ಶಾಸಕರು- ಸಚಿವರಾಗಿದ್ದರು. ಜೀವರಾಜ್ ಅವರು ಬೆಂಗಳೂರಿನಿಂದ ಆಯ್ಕೆಯಾಗಿದ್ದರು. ಉಳ್ಳಾಲ (ಈಗ ಮಂಗಳೂರು) ಕ್ಷೇತ್ರವನ್ನು ಪ್ರತಿನಿಧಿಸಿದ್ದ ಯು.ಟಿ. ಫರೀದ್ ಮತ್ತು ಈಗ ಪ್ರತಿನಿಧಿಸುತ್ತಿರುವ ಸಚಿವ ಯು. ಟಿ. ಖಾದರ್ ಅವರು ತಂದೆ- ಮಗ.
ಸೋದರ ಅಳಿಯಂದಿರು!
ಇನ್ನು ಕೆಲವು ಕುತೂಹಲಕರ ಅಂಶಗಳಿವೆ. ಬ್ರಹ್ಮಾವರ ಪ್ರತಿನಿಧಿಸಿದ್ದ ಜಗಜೀವನದಾಸ್ ಶೆಟ್ಟಿ ಮತ್ತು ಡಾ| ಬಿ.ಬಿ. ಶೆಟ್ಟಿ ಅವರು ಸಹೋದರರು. ಶಾಸಕರಾಗಿದ್ದ ಎಸ್.ಎಸ್. ಕೊಳ್ಕೆಬೈಲ್ ಅವರ ಸೋದರಳಿಯ ಕೆ. ಪ್ರತಾಪಚಂದ್ರ ಶೆಟ್ಟಿ ಕುಂದಾಪುರದ ಶಾಸಕರಾಗಿದ್ದರು. ಶಾಸಕರಾಗಿದ್ದ ಆನಂದ ಕುಂದ ಹೆಗ್ಡೆ ಅವರ ಸೋದರಳಿಯ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ. ಈ ಕುಟುಂಬಗಳ ಬಂಧು ಕೆ. ಜಯಪ್ರಕಾಶ್ ಹೆಗ್ಡೆ ಅವರು.
ಜಿಲ್ಲೆಯ ಕೆಲವು ಶಾಸಕರ ದೂರದ ಸಂಬಂಧಿಗಳೆ ಶಾಸಕರಾದ ನಿದರ್ಶನಗಳಿವೆ. ಇನ್ನು ಕೆಲವು ಶಾಸಕರ ಪುತ್ರರು ಚುನಾವಣೆಗಳಲ್ಲಿ ಸ್ಪರ್ಧಿಸಿದ ದೃಷ್ಟಾಂತಗಳಿವೆ: ಬೆಳ್ತಂಗಡಿಯ ಗಂಗಾಧರ ಗೌಡರ ಪುತ್ರ ರಂಜನ್ ಗೌಡ, ಸುರತ್ಕಲ್‌ನ ಎಂ. ಲೋಕಯ್ಯಶೆಟ್ಟಿ ಅವರ ಪುತ್ರ ಎಂ. ಸುರೇಶ್ಚಂದ್ರ ಶೆಟ್ಟಿ ಹೀಗೆ. ಕಾರ್ಕಳದಲ್ಲಿ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಚುನಾವಣಾಪೂರ್ವ ಸುದ್ದಿಯಲ್ಲಿದ್ದರು. ಈಗ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರ ಕುಟುಂಬದವರು ಚುನಾವಣಾ ರಾಜಕೀಯ ಕಣಗಳಲ್ಲಿ ಸಕ್ರಿಯರಾಗಿ ಕಾಣುತ್ತಿಲ್ಲ ಎಂಬುದು ಗಣನೀಯ ಸಂಗತಿ.
ಅಂದ ಹಾಗೆ…
ಜಿಲ್ಲೆಯ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಬೆಳ್ತಂಗಡಿಯ ಹಾಲಿ ಶಾಸಕ ಕೆ. ವಸಂತ ಬಂಗೇರ ಅವರು
ದಾಖಲೆಗಳ ಸರದಾರ! ಈ ಬಾರಿ ಅವರು 9ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ವಿಶೇಷವೆಂದರೆ: ಅವರು 1983ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಆಗಿನ ಕಾಂಗ್ರೆಸ್‌ನ ಅಭ್ಯರ್ಥಿ ಗಂಗಾಧರ ಗೌಡ ಅವರನ್ನು ಸೋಲಿಸಿದ್ದರು. ಇದೇ ಕ್ಷೇತ್ರದಲ್ಲಿ 2013ರಲ್ಲಿ ವಸಂತ ಬಂಗೇರ ಅವರು ಬಿಜೆಪಿಯ ರಂಜನ್ ಗೌಡರನ್ನು ಸೋಲಿಸಿದರು. ರಂಜನ್ ಗೌಡ ಅವರು ಗಂಗಾಧರ ಗೌಡ ಅವರ ಪುತ್ರ!
— ಮನೋಹರ ಪ್ರಸಾದ್