ಮೂಡುಬಿದಿರೆ: ಮೂಡು ಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಮಂಗಳೂರು ವಿ.ವಿ. ಆಶ್ರಯದಲ್ಲಿ ಸ್ವರಾಜ್ಯ ಮೈದಾನದ ಕ್ರೀಡಾಂಗಣದಲ್ಲಿ ನ. 24ರಿಂದ ನಡೆಯುತ್ತಿರುವ 79ನೇ ಅಖೀಲ ಭಾರತ ಅಂತರ್ ವಿ.ವಿ. ಕ್ರೀಡಾಕೂಟದ ಸಮಾರೋಪ ನ.28ರಂದು ನಡೆಯಲಿದೆ. ದೇಶದ ಸುಮಾರು 300 ವಿಶ್ವವಿದ್ಯಾಲಯಗಳಿಂದ 4,000ದಷ್ಟು ಕ್ರೀಡಾಳುಗಳು, ಸುಮಾರು 2,000ದಷ್ಟು ತಾಂತ್ರಿಕ ಮತ್ತು ಇತರ ಅಧಿಕಾರಿಗಳು ನ. 24ರಿಂದ ಇಲ್ಲಿ ಬೀಡು ಬಿಟ್ಟಿದ್ದಾರೆ.
ಇದೊಂದು ಹಬ್ಬದ ಸಂಭ್ರಮ ಅವರಿಗೆ ಮತ್ತು ವೀಕ್ಷಕರೆಲ್ಲರಿಗೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಪ್ರಥಮ ರೂ. 15,000, ದ್ವಿತೀಯ ರೂ. 10,000 ಮತ್ತು ತೃತೀಯ ಸ್ಥಾನಿಗೆ ರೂ. 5,000 ಅಲ್ಲದೆ ಕೂಟ ದಾಖಲೆ ಮಾಡಿದವರಿಗೆ ರೂ. 25,000 -ಇದು ಆಳ್ವಾಸ್ ಕೊಡುಗೆ. ಇದಲ್ಲದೆ, ಉಚಿತ ಊಟೋಪಹಾರ, ವಸತಿ ವ್ಯವಸ್ಥೆ ಕೂಡಾ ಆಳ್ವಾಸ್‌ನದ್ದೇ.
ಫೋಟೋ ಫಿನಿಶಿಂಗ್ ತೀರ್ಪು ಈ ಬಾರಿಯ ವಿಶೇಷ. ಹೊನಲು ಬೆಳಕು ಸಿಂಥೆಟಿಕ್ ಟ್ರಾಫಿಕ್ ಸಹಿತ ಇಡೀ ಮೈದಾನಕ್ಕೆ ತಿಂಗಳ ಬೆಳಕು ಚೆಲ್ಲುತ್ತಿದೆ. ತಾಂತ್ರಿಕ ಮಾಹಿತಿ ಕೇಂದ್ರ, ಪ್ರಥಮ ಚಿಕಿತ್ಸಾ ಕೇಂದ್ರ, ವಿವಿಧ ರಾಜ್ಯಗಳಿಂದ ಬಂದಿರುವ ಕ್ರೀಡಾಪೋಷಾಕು ಮತ್ತು ಇತರ ವಸ್ತುಗಳ ಮಾರಾಟ ಮಳಿಗೆ ಎಲ್ಲವೂ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ. ಕ್ರೀಡಾಂಗಣದಲ್ಲಿರುವ ಶಾಶ್ವತ ಗ್ಯಾಲರಿಯ ಅಕ್ಕ ಪಕ್ಕ ಹಾಗೂ ಪೂರ್ವಭಾಗದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗ್ಯಾಲರಿಗಳಲ್ಲಿ 3,000 ಮಂದಿ ವೀಕ್ಷಕರು ತುಂಬಿತುಳುಕುತ್ತಿದ್ದಾರೆ.
ಕನ್ನಡ ಭವನದ ತಳ ಅಂತಸ್ತಿ ನಲ್ಲಿ ಕ್ರೀಡಾಳುಗಳಿಗಾಗಿ ಫುಡ್ ಕೋರ್ಟ್ ವ್ಯವಸ್ಥೆ ಗೊಳಿಸಲಾಗಿದೆ. ಶುದ್ಧ, ಮಿನರಲ್ ಯುಕ್ತ ಎಲಿಕ್ಸರ್ ಘಟಕದ ಮೂಲಕ ಹರಿದು ಬರುವ ಕುಡಿಯುವ ನೀರು ಕೂಟದ ಆರೋಗ್ಯ ಕಾಳಜಿಯ ಮತ್ತೊಂದು ಅಂಶ.