Advertisement
ಪುತ್ತೂರಿನಿಂದ 4 ಕಿ. ಮೀ. ದೂರದಲ್ಲಿರುವ ಕುಂಜೂರು ಪಂಜ ಸಮೀಪ ತಗ್ಗು ಮತ್ತು ತಿರುವು ಹೊಂದಿದ್ದ ರಸ್ತೆಯನ್ನು ಸಂಪೂರ್ಣ ಎತ್ತರಿಸಿ, ಇಕ್ಕೆಲಗಳಲ್ಲಿ 7 ಮೀ. ಎತ್ತರದ ಭದ್ರ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಸ್ಲ್ಯಾಬ್ ನ ಚರಂಡಿ ನಿರ್ಮಿಸಿ ಸುಮಾರು 100 ಮೀ. ಅಭಿವೃದ್ಧಿ ಮಾಡಲಾಗುತ್ತಿದೆ. ಕಾಮಗಾರಿ ನಡೆದರೆ ಇಲ್ಲಿನ ಅಪಘಾತ ವಲಯ ಹಣೆಪಟ್ಟಿಯೂ ದೂರವಾಗಲಿದೆ. ಜನವರಿಯಲ್ಲಿ ಆರಂಭಿಸಿದ ಕಾಮಗಾರಿಯನ್ನೂ ಜೂನ್ ಮೊದಲು ಮುಗಿಸದ ಕಾರಣ ಮತ್ತು ಮಳೆಯಲ್ಲೂ ಮಣ್ಣಿನ ಕೆಲಸ ಮುಂದುವರಿಸಿದ ಕಾರಣ ಕಾಮಗಾರಿ ಸ್ಥಳ ಸಂಪೂರ್ಣ ಕೆಸರುಮಯ, ಮಣ್ಣು ಕುಸಿತವೂ, ವಾಹನಗಳು ಓಡಾಡಲು, ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆದಾರರ ತಪ್ಪು…!
ಕುಂಜೂರು ಪಂಜದ ಅಭಿವೃದ್ಧಿ ಕಾಮಗಾರಿ ಮಾತ್ರ ಹೀಗಾಗಿದೆ. ಗುತ್ತಿಗೆದಾರರ ಕೆಲಸದ ಮೇಲೆ ಇಲಾಖೆ ನಿಗಾ ಇಡುತ್ತಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಮುಲಾಜಿಗೆ ಬಿದ್ದವರಂತೆ ವರ್ತಿಸುತ್ತಾರೆ. ಕಾಮಗಾರಿ ಅರ್ಧವಷ್ಟೇ ಮುಗಿದಿರುವುದರಿಂದ ಶಾಲಾ – ಕಾಲೇಜು ಮಕ್ಕಳ ಸಹಿತ ನೂರಾರು ಮಂದಿ ಪರ್ಯಾಯ ರಸ್ತೆಗಳನ್ನು ಅವಲಂಭಿಸಬೇಕಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ. ಜೂನ್‌ಗೆ ಮೊದಲೇ ಕಾಮಗಾರಿ ಸ್ಥಳದಲ್ಲಿ ಜಲ್ಲಿ ಹಾಸಿ ಕೆಲಸ ನಿಲ್ಲಿಸಬಹುದಿತ್ತು. ಅಥವಾ ಒಂದು ಪಾರ್ಶ್ವದಿಂದ ರಸ್ತೆಯನ್ನು ಸರಿ ಪಡಿಸಿಕೊಡಬಹುದಿತ್ತು ಎನ್ನುವುದು ಸಾರ್ವಜನಿಕರ ಆರೋಪ. ಕಳೆದೆ ಮೂರು ದಿನಗಳಿಂದ ಮಳೆಯಲ್ಲೇ ಜೆಸಿಬಿ ಮೂಲಕ ಕೆಲಸ ಮಾಡಿಸಲಾಗುತ್ತಿದೆ. ಈ ರೂಟಿನಲ್ಲಿ ಹೆಚ್ಚು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು, ಸಂಚಾರ ಸ್ಥಗಿತಗೊಳಿಸಿವೆ. ಬುಳೇರಿಕಟ್ಟೆ ಕಡೆಯ ಬಸ್‌ಗಳು ಬಲ್ನಾಡು, ಉಜುರುಪಾದೆ ಕಡೆಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ಪುತ್ತೂರಿಗೆ ಬಂದರೆ ಪಾಣಾಜೆ ಕಡೆಯ ಬಸ್ ಸಹಿತ ಇತರ ವಾಹನಗಳು ಸಂಟ್ಯಾರ್ ಮೂಲಕ ಬರುತ್ತಿವೆ. ರಸ್ತೆ ಸಂಚಾರ ದುಸ್ತರಗೊಂಡಿರುವ ಕುರಿತು ತಾಲೂಕು ಆಡಳಿತವಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಜನರಿಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಧಿಕೃತವಾಗಿ ಸಂಚಾರ ಬದಲಾವಣೆ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ. ಕೆಲವು ವಾಹನ ಸವಾರರು ಅನಿವಾರ್ಯವಾಗಿ ಸವಾಲಿನ ಸಂಚಾರ ಮಾಡುತ್ತಿದ್ದಾರೆ. ಸಂಚಾರ ಸಮಸ್ಯೆಯಾಗಿರುವ ಕುರಿತು ಉಪ ನ್ಯಾಸಕರೊಬ್ಬರು ಪುತ್ತೂರು ಸಹಾಯಕ ಕಮಿಷನರ್‌ಗೆ ದೂರು ನೀಡಿದ ಮೇಲೆ ಬಂದ ಸೂಚನೆಯ ಮೇರೆಗೆ ಕಾಮಗಾರಿಯನ್ನು ತಾತ್ಕಾಲಿಕ ವಾಗಿ ಸರಿಪಡಿಸಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
Related Articles
ಜಾಗ ಇದ್ದ ಸ್ಥಿತಿಯಲ್ಲಿ ವ್ಯತ್ಯಾಸ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿವೆಯೇ ಹೊರತು ಲೋಪವಾಗಿಲ್ಲ. ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅನಿವಾರ್ಯತೆಯೂ ಇತ್ತು. ಕಾಂಕ್ರೀಟ್ ಸ್ಲ್ಯಾಬ್ ನ ಕಾಲುವೆಯನ್ನೂ ನಿರ್ಮಿಸಲಾಗಿದೆ. ಇಷ್ಟೆಲ್ಲ ಕೆಲಸ ಮುಗಿದಾಗ ಮಳೆಗಾಲ ಆರಂಭವಾಗಿದೆ. ತತ್ ಕ್ಷಣಕ್ಕೆ ರಸ್ತೆ ಮೇಲಿನ ಕೆಸರು ಮಣ್ಣನ್ನು ತೆರವು ಮಾಡಿ 20 ಲೋಡ್ ನಷ್ಟು ಜಲ್ಲಿ ಹರಡಿ ಸಂಚಾರಕ್ಕೆ ಅನುಕೂಲ ಮಾಡಿ ಮಳೆಗಾಲ ಬಳಿಕ ಕಾಮಗಾರಿ ಮುಂದುವರಿಸಲಾಗುತ್ತದೆ.
– ಪ್ರಮೋದ್ ಕುಮಾರ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
Advertisement