ಬೆಂಗಳೂರು: ಅಂತರ್ ನಿಗಮ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳ ಠೇವಣಿ ಹೂಡಿಕೆಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಇದರಿಂದ ಲಾಭದಲ್ಲಿರುವ ಸರಕಾರಿ ಸ್ವಾಮ್ಯದ ಉದ್ದಿಮೆಯೊಂದು ನಷ್ಟದಲ್ಲಿರುವ ಮತ್ತೂಂದು ಸರಕಾರಿ ಸ್ವಾಮ್ಯದ ಉದ್ದಿಮೆಗೆ ಸಾಲ ನೀಡಲು ಅವ ಕಾಶ ಕಲ್ಪಿಸಲಾಗಿದೆ. ಇದರಿಂದ ಉಳಿತಾಯ ಆಗಲಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ನಷ್ಟದಲ್ಲಿರುವ ನಿಗಮ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಆರ್ಥಿಕ ಒತ್ತಡ ಇರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುತ್ತವೆ. ಆದರೆ ಅಂತರ್ ನಿಗಮ ಠೇವಣಿ ಹೂಡಿಕೆಗೆ ಅವಕಾಶ ನೀಡುವುದರಿಂದ ಲಾಭದಲ್ಲಿರುವ ಮತ್ತೂಂದು ಸರಕಾರಿ ಸ್ವಾಮ್ಯದ ನಿಗಮ ಅಥವಾ ಉದ್ದಿಮೆಯಿಂದ ಸಾಲ ನೀಡುವ ವ್ಯವಸ್ಥೆಗೆ ಗುರುವಾರದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಠೇವಣಿ ಹೂಡಿಕೆ ಹೀಗೆ: ಅದರಂತೆ ಕರ್ನಾಟಕ ರಾಜ್ಯ ಖನಿಜ ನಿಗಮ (ಕೆಎಸ್‌ಎಂಎಲ್) 4,012 ಕೋ.ರೂ.ಗಳಷ್ಟು ಹೆಚ್ಚುವರಿ ಮೊತ್ತವನ್ನು ಹೊಂದಿದ್ದು, ಶೇ.7.9ರ ಬಡ್ಡಿದರದಲ್ಲಿ ಠೇವಣಿ ಇಡಲಾಗಿದೆ. ಅಂತರ್ ನಿಗಮ ಕರಡು ಸುತ್ತೋಲೆ ಪ್ರಕಾರ ಅದರ ಅರ್ಧದಷ್ಟು ಅಂದರೆ 2,006 ಕೋಟಿ ರೂ.ಗಳನ್ನು ಅಂತರ್ ನಿಗಮ ಠೇವಣಿಗಳಿಗೆ ನೀಡಬೇಕಾಗುತ್ತದೆ. ಇನ್ನು ನಷ್ಟದಲ್ಲಿರುವ ಬೆಸ್ಕಾಂ ಪಡೆದಿರುವ ಸಾಲದ ಮೇಲಿನ ಸರಾಸರಿ ಅಂದಾಜು ಬಡ್ಡಿದರ ಶೇ.9.3ರಷ್ಟಿದೆ. ಕೆಎಸ್‌ಎಂಸಿಎಲ್ ಮತ್ತು ಬೆಸ್ಕಾಂ ನಡುವೆ ಶೇ.8.7ರಷ್ಟು ಬಡ್ಡಿದರದಲ್ಲಿ ಅಂತರ್ ನಿಗಮ ಠೇವಣಿಯಿಂದ ಸಾಲ ಒದಗಿಸಿದರೆ, ಎರಡೂ ಸಂಸ್ಥೆಗಳಿಗೆ ಕ್ರಮವಾಗಿ 16 ಕೋಟಿ ಹಾಗೂ 12 ಕೋಟಿ ರೂ. ಉಳಿತಾಯ ಆಗಲಿದೆ ಎಂದು ಸರಕಾರ ಲೆಕ್ಕಹಾಕಿದೆ.
ಇದೇ ರೀತಿ, ಲಾಭದಲ್ಲಿರುವ ಆಯ್ದ 11 ಸಾರ್ವಜನಿಕ ವಲಯ ಉದ್ದಿಮೆಗಳನ್ನು ಸರಕಾರವು ಪಟ್ಟಿ ಮಾಡಿದೆ. ಅವುಗಳ ಬಳಿ ಮೀಸಲು ಮತ್ತು ಹೆಚ್ಚುವರಿ ಮೊತ್ತ 12,771 ಕೋಟಿ ಇದೆ. ಆ ಪೈಕಿ 6,385 ಕೋಟಿ ರೂ. ಅಂತರ್ ನಿಗಮ ಠೇವಣಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. ಈ ಸಂಸ್ಥೆಗಳು ಪ್ರಸ್ತುತ ನಿಶ್ಚಿತ ಠೇವಣಿಗಳ ಮೇಲೆ ಶೆ. 7.9ರಷ್ಟ ಬಡ್ಡಿಯನ್ನು ಗಳಿಸುತ್ತಿವೆ.
ಅಂತರ್ ನಿಗಮ ಠೇವಣಿ ವಹಿವಾಟುಗಳಲ್ಲಿ ಭಾಗವಹಿಸುವ ಮೂಲಕ ಶೇ.1ರಷ್ಟು ಹೆಚ್ಚುವರಿ (ಶೇ. 8.9) ದರದಲ್ಲಿ ಬಡ್ಡಿದೊರೆಯಲಿದ್ದು, ಅಂದಾಜು 67 ಕೋಟಿ ರೂ. ಲಾಭವಾಗಲಿದೆ.
ಅದೇ ರೀತಿ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸರಾಸರಿ ಅಂದಾಜು ಶೇ. 10.3ರ ಬಡ್ಡಿದರದಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿವೆ. ಅಂತರ್ ನಿಗಮ ಠೇವಣಿಗಳಲ್ಲಿ ಶೇ. 1.3ರಷ್ಟು ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯಲಿದೆ. ಇದರಿಂದ 83 ಕೋಟಿ ರೂ. ಉಳಿತಾಯ ಆಗಲಿದೆ. ಅಂದರೆ ಒಟ್ಟು ಎರಡೂ ಕಡೆ (ಸಾಲ ನೀಡುವವರು ಮತ್ತು ಪಡೆಯುವವರು) ಲೆಕ್ಕ ಹಾಕಿದರೆ, ವಾರ್ಷಿಕ 150ರಿಂದ 200 ಕೋಟಿ ರೂ. ಉಳಿತಾಯ ಆಗಲಿದೆ ಎಂಬ ಲೆಕ್ಕಾಚಾರ ಸರಕಾರದ್ದಾಗಿದೆ.