Advertisement

ಅಂತರ್ಜಾತಿ ವಿವಾಹ ಹೆಚ್ಚಾಗಬೇಕು: ಶ್ರೀನಿವಾಸಪ್ರಸಾದ್‌

12:07 PM Aug 11, 2017 | |

ನಂಜನಗೂಡು: ಸಮಾಜದಲ್ಲಿನ ತಾರತಮ್ಯತೆ ಹಾಗೂ ಅಸಮಾನತೆ ಕೊನೆಗಾಣಿಸಲು ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು ಎಂದು  ಮಾಜಿ ಸಚಿವ  ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.

Advertisement

ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 110ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ನಂಜನಗೂಡಿನ ಶ್ರೀಕ್ರಾಂತಿಕಾರಿ ವೀರಶೈವ ಬಳಗ ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ಕಲಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದರು.

ಜಾತಿ-ಜಾತಿಗಳಿಂದ ತುಂಬಿ ಕೊಂಡಿರುವ  ಸಮಾಜದ ಪುನರ್‌ ನಿರ್ಮಾಣದ ಕನಸು ಹೊತ್ತ ಬಸವಣ್ಣ  12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿದರು. ಇಂತಹ ವಿವಾಹಗಳು ಹೆಚ್ಚಾದಂತೆ ಸಮಾಜದಲ್ಲಿ ವೈಚಾರಿಕತೆ ಬೆಳೆಯುತ್ತದೆ ಎಂದರು.

ಸಮಾಜದಲ್ಲಿರುವ ಅಸಮಾನತೆ, ಅಸ್ಪಶ್ಯತೆ ಹೋಗಲಾಡಿಸಿ ಮಾನವೀಯ ಮೌಲ್ಯವನ್ನು ಭಿತ್ತಿ ಹೊಸ ಸಮಾಜ ನಿರ್ಮಿಸಲು ಬಸವಣ್ಣ ಶ್ರಮಿಸಿದ್ದರು. ಇಂತಹ ಸಾಮಾಜಿಕ ಮೌಲ್ಯಗಳ ಕಾರ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ಇಲ್ಲಿನ ಕ್ರಾಂತಿಕಾರಿ ವೀರಶೈವ ಬಳಗ ಮುಂದಾಗಿರುವುದು ಅತ್ಯಂತ ಶ್ಲಾಘನೀಯವಾಗಿದ್ದು ಇಂತಹ ಸಾಮೂಹಿಕ ಹಾಗೂ ಅಂತರ್ಜಾತಿ ಮದುವೆಗಳು ಹೆಚ್ಚಾದಷ್ಟು ನಮ್ಮಲ್ಲಿನ  ಅಸ್ಪೃಶ್ಯತೆ, ಜಾತೀಯತೆ ನಿರ್ಮೂಲನೆ  ಸಾಧ್ಯ ಎಂದು ತಿಳಿಸಿದರು.

ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಶ್ರೀಗಳು ಮಾತನಾಡಿ, ದಾಂಪತ್ಯ ಜೀವನಕ್ಕೆ ತನ್ನದೇ ಆದ ಪಾವಿತ್ರವಿದೆ  ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಎಲ್ಲರೂ ತಮ್ಮ ದಾಂಪತ್ಯ ಜೀವನದಲ್ಲಿ ನಿಷ್ಠರಾಗಿ, ಅನ್ನೋನ್ಯರಾಗಿ  ಜೀವನ ಪರ್ಯಂತ ಇರಬೇಕು ಎಂದರು.

Advertisement

94 ಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ವಧುವಿಗೆ ಸೀರೆ, ಬಾಸಿಂಗ, ಮಾಂಗಲ್ಯ ಹಾಗೂ ವರನಿಗೆ ಶ್ವೇತವಸ್ತ್ರ, ಪೇಟ, ಬಾಸಿಂಗವನ್ನು ಕ್ರಾಂತಿಕಾರಿ ಬಳಗ ಬಳಗದ ವತಿಯಿಂದ ಉಚಿತವಾಗಿ ನೀಡಲಾಯಿತು.

ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥಸ್ವಾಮೀಜಿ, ದೇವನೂರು ಮಠದ ಮಹಾಂತಸ್ವಾಮೀಜಿ, ಮಲ್ಲನಮೂಲೆ ಮಠದ ಚನ್ನಬಸವಸ್ವಾಮೀಜಿ, ಶಾಸಕ ಕಳಲೆ ಕೇಶವಮೂರ್ತಿ, ಬಳಗದ ಅಧ್ಯಕ್ಷ ಸಿ.ಜಗದೀಶ್‌, ಸಂಚಾಲಕರಾದ ಕೆ.ಕೆ.ಜಯದೇವ್‌, ಎನ್‌.ಸಿ.ಬಸವಣ್ಣ, ಎನ್‌.ವಿ.ವಿನಯಕುಮಾರ್‌, ಜಿ.ಮಹದೇವಪ್ರಸಾದ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಶೇಷ ಜೋಡಿಗಳು
ಹುಟ್ಟು ಕುರುಡರಾಗಿರುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದವಾಸಿ ಸೋಮಶೇಖರ್‌ ಹಾಗೂ ಗುಂಡ್ಲುಪೇಟೆ ತಾಲೂಕಿನ ಚಿಕ್ಕತಪ್ಪೂರು ಗ್ರಾಮದ ರೇಣುಕಾ ಅಂತರ್ಜಾತಿ ವಿವಾಹವಾದರು. ಎಚ್‌.ಡಿ.ಕೋಟೆ ತಾಲೂಕಿನ ಬಾವಿಕೊರೆಹುಂಡಿಯ ಹಿಂದೂ ಧರ್ಮದ ಸೀನಾನಾಯಕ್‌, ತಮಿಳುನಾಡಿನ ತಾಂಜಾವೂರ್‌ ಮೂಲದ ಮುಸ್ಲಿಂ ಯುವತಿ ಬತಾನಿಸಾಳನ್ನು ವರಿಸಿದರು.

ಎಚ್‌.ಡಿ.ಕೋಟೆಯ ವಡಕನಹಳ್ಳಿ ಕ್ರಿಶ್ಚಿಯನ್‌ ಧರ್ಮ ಸಂಜಾತ ಅಜಿತ್‌, ಎಚ್‌.ಡಿ.ಕೋಟೆಯ ಹಿಂದೂ ಯುವತಿ ಸಾವಿತ್ರಿ ವಿವಾಹವಾಗುವುದರ ಮೂಲಕ ಸಮಾಜಕ್ಕೆ ಮಾದರಿಯಾದರು. ರಾಜಸ್ಥಾನದ ಗೀತಾಂಜಲಿ ಮೆಡಿಸಿಟಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮೈಸೂರಿನ ದಟ್ಟಗಳ್ಳಿಯ ಶರತ್‌ ಹಾಗೂ ರಾಜಸ್ಥಾನದ ಚಿತ್ತಡ್ಕದ ದಿವ್ಯಾಸಿಂಗ್‌ ವಿವಾಹವಾದರು.

Advertisement

Udayavani is now on Telegram. Click here to join our channel and stay updated with the latest news.

Next