Advertisement
ಕಾರ್ಕಳ ಎಎನ್‌ಎಫ್ ಪಡೆಯ ಯೋಧರ ತಂಡವು ಶನಿವಾರವೂ ಸಕಲೇಶಪುರ ಮತ್ತು ದ.ಕ. ಗಡಿಭಾಗದಲ್ಲಿ ಶೋಧ ನಡೆಸಿತು. ಸಕಲೇಶಪುರಭಾಗದ ಬಿಸಿಲೆ ಘಾಟಿ, ಗಡಿ ಚಾಮುಂಡೇಶ್ವರಿ ಗುಡಿ ಹಾಗೂ ಪರಿಸರದ ಅರಣ್ಯದಲ್ಲಿ 12 ಮಂದಿಯ ಒಂದು ತಂಡ ಶೋಧ ಕಾರ್ಯ ನಡೆಸಿದರೆ ಇನ್ನೊಂದು ತಂಡವು ಸಂಪಾಜೆ, ಸುಬ್ರಹ್ಮಣ್ಯ, ಶಿರಾಡಿ ಮೊದಲಾದೆಡೆ ಶೋಧ ನಿರತವಾಗಿದೆ. ಈ ವೇಳೆ ನಕ್ಸಲರ ಚಲನವಲನ ಕುರಿತು ತಂಡಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ.
ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಕಾರ್ಮಿಕರು ಭೀತಿಗೆ ಒಳಗಾಗದಂತೆ ಧೈರ್ಯ ತುಂಬುವ ಕೆಲಸವನ್ನು ಎಎನ್‌ಎಫ್ ಯೋಧರು ಮತ್ತು ಪೊಲೀಸರು ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳ ಕುರಿತು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೇ ಕಾರ್ಮಿಕ ರಾಜು ಅವರಿಗೆ ಪಿಸ್ತೂಲ್‌ಧಾರಿಗಳಿಬ್ಬರು ಜು. 22ರಂದು ಬೆದರಿಕೆ ಹಾಕಿದ್ದರು. ಅವರು ಶಂಕಿತ ನಕ್ಸಲರು ಎಂಬ ಅನುಮಾನದ ಮೇರೆಗೆ ದ.ಕ. – ಸಕಲೇಶಪುರ – ಕೊಡಗು ಜಿಲ್ಲೆಗಳ ಗಡಿ ಭಾಗದ ಅರಣ್ಯ ಹಾಗೂ ಜನವಸತಿ ಪ್ರದೇಶಗಳ ಮೇಲೆ ಎಎನ್‌ಎಫ್ ಪಡೆ ಹದ್ದಿನ ಕಣ್ಣಿರಿಸಿದೆ.