Advertisement

ವಿಧಾನ-ಕದನ 2023: ಚುರುಕುಗೊಂಡ ತಪಾಸಣೆ-ಹೆಚ್ಚಿದ ಪೊಲೀಸರ ನಿಗಾ

11:51 PM Mar 28, 2023 | Team Udayavani |

ಮಂಗಳೂರು: ಚುನಾವಣೆಯ ಕಾವು ಏರಿಕೆಯಾಗುತ್ತಿರುವಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಅಕ್ರಮಗಳನ್ನು ತಡೆಯಲು ಪೊಲೀಸ್‌ ಇಲಾಖೆ ಸನ್ನದ್ಧಗೊಂಡಿದೆ.
ಅಂತರ್‌ಜಿಲ್ಲಾ, ಅಂತರ್‌ರಾಜ್ಯ ಗಡಿಗಳಲ್ಲಿ ವಿಶೇಷ ನಿಗಾ ಇಡ ಲಾಗಿದ್ದು, ವಾಹನಗಳ ತಪಾಸಣೆ ಬಿಗಿಗೊಳಿಸಲಾಗಿದೆ. ಸಮರ್ಪಕ ದಾಖಲಾತಿ ಇಲ್ಲದೆ ನಗದು ಮತ್ತಿತರ ಸೊತ್ತುಗಳ ಸಾಗಣೆ ಪತ್ತೆ ಹಚ್ಚಲು ಪೊಲೀಸ್‌ ತಂಡಗಳನ್ನು ನಿಯೋಜಿಸಲಾಗಿದೆ.

Advertisement

ದ.ಕ ಜಿಲ್ಲಾ ಪೊಲೀಸ್‌ ವ್ಯಾಪ್ತಿ ಯಲ್ಲಿ 9 ಹಾಗೂ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಯಲ್ಲಿ 7 ಸೇರಿದಂತೆ ಒಟ್ಟು 16 ಅಂತಾರಾಜ್ಯ ಚೆಕ್‌ಪೋಸ್ಟ್‌ ಗಳನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 4 ಅಂತರ್‌ ಜಿಲ್ಲಾ, 7 ಜಿಲ್ಲಾ ಚೆಕ್‌ಪೋಸ್ಟ್‌ಗಳಿವೆ. ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 7 ಅಂತಾರಾಜ್ಯ ಚೆಕ್‌ ಪೋಸ್ಟ್‌ ಗಳನ್ನು ಹೊರತುಪಡಿಸಿ 11 ಚೆಕ್‌ಪೋಸ್ಟ್‌ಗಳಿವೆ. ದಿನದ 24 ಗಂಟೆಗಳ ಕಾಲ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲದೆ ಇತರೆ ಸ್ಥಳಗಳಲ್ಲಿ ದಿಢೀರ್‌ ತಪಾಸಣೆಯನ್ನೂ ನಡೆಸಲಾಗುತ್ತಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಪಿಎಸ್‌ಐ ದರ್ಜೆ ಅಧಿಕಾರಿ ಸಹಿತ ಸಿಬಂದಿಯನ್ನು ಎರಡು ಪಾಳಿಗೆ ನಿಯೋಜಿಸಲಾಗಿದೆ. ಖುದ್ದು ಎಸ್‌ಪಿಯವರು ಸ್ಥಳಕ್ಕೆ ತೆರಳಿ ಅಧಿಕಾರಿ, ಸಿಬಂದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಗೆ ಆಗಮಿಸುವ ಅರೆಸೇನಾ ಪಡೆಗಳಿಗೆ ಬೇಕಾದ ಮೂಲ ಸೌಕರ್ಯಗಳ ಪರಿಶೀಲನೆಯೂ ನಡೆದಿದೆ. ಸದ್ಯ 163 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇದರಲ್ಲಿ 64 ನಕ್ಸಲ್‌ಪೀಡಿತ ಪ್ರದೇಶದ ಮತಗಟ್ಟೆಗಳಿವೆ.

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಹುದಾದ 2,000 ಮಂದಿಯಿಂದ ಬಾಂಡ್‌ ಬರೆಸಲಾಗಿದೆ. ಅಪರಾಧ ಹಿನ್ನೆಲೆಯುಳ್ಳ 12 ಮಂದಿಯನ್ನು ಈಗಾಗಲೇ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದ್ದು ಇನ್ನೂ 11 ಮಂದಿಯ ಗಡೀ ಪಾರಿಗೆ ಜಿಲ್ಲಾಧಿಕಾರಿಗೆ ಪೊಲೀಸರು ಶಿಫಾರಸು ಮಾಡಿದ್ದಾರೆ.

ಸಿಸಿ ಕ್ಯಾಮರಾ ನಿಗಾ
ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ವತಿಯಿಂದ ಅಳವಡಿಸ ಲಾದ 98 ಸಿಸಿಟಿವಿ ಕೆಮರಾಗಳು ಕಾರ್ಯಾಚರಿಸುತ್ತಿವೆ. ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳ ಅಳವಡಿಕೆ, ನಿರ್ವಹಣೆ ನಡೆಸಲಾಗಿದೆ.

Advertisement

ಬ್ರೀಫಿಂಗ್‌ ಸಭೆ
ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ, ಪ್ರಮುಖ ಸ್ಥಳಗಳಲ್ಲಿಯೇ ಪೊಲೀಸ್‌ ಅಧಿಕಾರಿ, ಸಿಬಂದಿಯ ಬ್ರಿàಫಿಂಗ್‌ ಸಭೆ ನಡೆಸಿ ಚುನಾ ವಣೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ. ಆಯಾ ಪ್ರದೇಶಗಳಲ್ಲಿಯೇ ಪೊಲೀಸ್‌ ಬ್ರೀಫಿಂಗ್‌ ಸಭೆ ನಡೆಸುವುದರಿಂದ ಜನರಲ್ಲಿ ವಿಶ್ವಾಸ ಮೂಡಿ ಸುವುದೂ ಸಾಧ್ಯ ಎಂಬುದು ಪೊಲೀಸ್‌ ಅಧಿಕಾರಿಗಳ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next