Advertisement

ನಗರದಲ್ಲಿ ತೀವ್ರಗೊಂಡ ಕಂಬಳ ಕಹಳೆ

12:06 PM Jan 26, 2017 | |

ಬೆಂಗಳೂರು: ರಾಜ್ಯದಲ್ಲಿ ಕಂಬಳ ಕ್ರೀಡೆ ನಿಷೇಧ ವಿರುದ್ಧ ಹೋರಾಟ ತೀವ್ರಗೊಂಡಿದ್ದು, ಎನ್‌ಎಸ್‌ಯುಐ ಕಂಬಳ ನಿಷೇಧ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಬುಧವಾರ ನಗದಲ್ಲಿ ವಿನೂತನ ಪ್ರತಿಭಟನೆ ನಡೆಸಿದೆ. ಇನ್ನೊಂದೆಡೆ ಹಲವು ಸಂಘಟನೆಗಳು ಬೃಹತ್‌ ಮಟ್ಟದ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿವೆ.

Advertisement

ಕಂಬಳಕ್ಕೆ ಹೇರಿರುವ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಸಂಘಟನೆ ನಗರದ ಮೌರ್ಯ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿತು. ಕೋಣವನ್ನೇ ಕರೆತಂದು ಅಣಕು ಪ್ರದರ್ಶನ ಮಾಡಿದರು. ಅಷ್ಟೇಅಲ್ಲ, ಕಂಬಳ ಸ್ಪರ್ಧೆಯಲ್ಲಿ ಕೋಣ ಓಡಿಸಿ ಚಿನ್ನದ ಪದಕ ಪಡೆದುಕೊಂಡಿರುವ ಶ್ರೀಧರ್‌ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಈ ವೇಳೆ ಮಾತನಾಡಿದ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌, “”ಕಂಬಳ ಕರಾವಳಿಯ ಸಂಪ್ರದಾಯಿಕ ಕ್ರೀಡೆ. ಈ ಭಾಗದಲ್ಲಿ ರೈತರು ಕೃಷಿ ಚಟುವಟಿಕೆ ಮುಗಿಸಿದ ಬಳಿಕ ಮನರಂಜನೆಗಾಗಿ ಕಂಬಳ ಕ್ರೀಡೆ ಆಯೋಜಿಸುತ್ತಾರೆ. ಈ ಕ್ರೀಡೆಯಲ್ಲಿ ಪ್ರಾಣಿಗಳ ಹಿಂಸೆ ಆಗುವುದಿಲ್ಲ. ಕಂಬಳಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ “ಪೆಟಾ’ ಪ್ರಾಣಿದಯಾ ಸಂಘದವರು ಮೊದಲು ಕುದುರೆ ರೇಸ್‌ ಅನ್ನು ನಿಷೇಧಿಸಲಿ.

ಈ ಕುದುರೆ ರೇಸ್‌ನಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಯುಐ ಜ.27ರಿಂದ ರಾಜ್ಯದೆಲ್ಲೆಡೆ ನಿರಂತರ ಹೋರಾಟ ಹಮ್ಮಿಕೊಂಡಿದೆ,” ಎಂದು ಹೇಳಿದರು. ಇನ್ನೊಂದೆಡೆ, ಕಂಬಳ ಕ್ರೀಡೆ ಬಗೆಗಿನ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಒಕ್ಕೂಟವು ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಬುಧವಾರ ರಾಜಭವನ ಮುತ್ತಿಗೆ ಹಾಕಲು ಯತ್ನಿಸಿತು.

ನಿಷೇಧಕ್ಕೆ ಒಳಗಾಗಿದ್ದ ಜಲ್ಲಿಕಟ್ಟು ಪರವಾಗಿ ನಿಲ್ಲುವ ಮೂಲಕ ಕೇಂದ್ರ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ, ಕರ್ನಾಟಕದ ಗ್ರಾಮೀಣ ಕ್ರೀಡೆಯಾದ ಕಂಬಳವನ್ನು ವಿರೋಧಿಸುವ ಮೂಲಕ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ವಾಟಾಳ್‌ ನಾಗರಾಜ್‌ ಆರೋಪಿಸಿದರು. ಇದೇವೇಳೆ, ರಾಜಭವನ ಮುತ್ತಿಗೆಗೆ ಯತ್ನಿಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. 

Advertisement

29ಕ್ಕೆ ಬೃಹತ್‌ ಪ್ರತಿಭಟನೆ: ಬೆಂಗಳೂರಿನಲ್ಲಿ ನೆಲೆಸಿರುವ ಕಂಬಳ ಕ್ರೀಡಾಭಿಮಾನಿಗಳು, ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಜ.29ರಂದು ನಗರದ ಫ್ರೀಡಂಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜಧಾನಿ ಕಂಬಳ ಕ್ರಿಯಾ ಸಮಿತಿ ಹೆಸರಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಂಬಳ ಕ್ರೀಡಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಲ್ಲದೆ, ಬೆಳಗ್ಗಿನಿಂದ ಸಂಜೆ ತನಕ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮೈಸೂರು ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಬೈಕ್‌ ರ್ಯಾಲಿ ಕೂಡ ಹಮ್ಮಿಕೊಳ್ಳಲಾಗಿದೆ.

ಕಂಬಳ ನಿಷೇಧ ತೆರವಾಗದಿದ್ದರೆ ಹೋರಾಟ
ಕೆ.ಆರ್‌.ಪುರ
: ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಮತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ರಾಮಮೂರ್ತಿನಗರದ ಎನ್‌.ಆರ್‌. ಐ ಬಡಾವಣೆಯಲ್ಲಿ ನಾಡಪ್ರಭು¸‌ಕೆಂಪೇಗೌಡ ಯುವಕರ ಅಯೋಜಿ ಸಿದ್ದ “ಕನ್ನಡ ನುಡಿಸಂಗಮ’ ಉದ್ಘಾಟಿ ಸಿದ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ, “ಕಂಬಳ ಮೇಲಿರುವ ನಿಷೇದ ವನ್ನು ಕೂಡಲೆ ತೆರವುಗೊಳಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು.

ನಿಷೇಧ ವಿವಾದ ಸದ್ಯ ಹೈಕೊರ್ಟ್‌ ನಲ್ಲಿದೆ. ಹೈಕೊರ್ಟ್‌ನಲ್ಲಿ ವಿರುದ್ಧ  ತೀರ್ಪು ಬಂದರೆ ಸುಗ್ರೀವಾಜ್ಞೆ ಜಾರಿಗೆ ತರಲು ರಾಜ್ಯಸರ್ಕಾರ ಸಿದ್ಧವಾಗಬೇಕು. “ನಿಷೇಧ ತೆರವಾಗದಿದ್ದರೆ, ರಾಜಾಧ್ಯಾಂತ ಕರವೇ ವತಿಯಿಂದ ಹೋರಾಟ ಮಾಡಲಾಗುವುದು,” ಎಂದು ಎಚ್ಚರಿಕೆ ನೀಡಿದರು. ರಾಜ್ಯದ ವಿಚಾರದಲ್ಲಿ ಕೇಂದ್ರದ ಸರ್ಕಾರಗಳು ಹಿಂದಿನಿಂದಲೂ ಮಲ ತಾಯಿ ಧೋರಣೆ ಅನುಸರುತ್ತಿರುವುದು ಗಮನಸಿದರೆ ಕರ್ನಾಟಕ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿದೆಯೋ ಇಲ್ಲವೋ ಎಂಬ ಭಾವನ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. 

“ಉದ್ಯೋಗ ಮೀಸಲಾತಿಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರ ಮುತವರ್ಜಿ ವಹಿಸಬೇಕು,” ಎಂದೂ ಆಗ್ರಹಿಸಿದರು.ಶಾಸಕ ಬೈರತಿ ಬಸವರಾಜ, ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ,  ಕಸಾಪ ಕ್ಷೇತ್ರ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಕರವೇ ಕಾರ್ಯಕರ್ತ ಮಂಜುನಾಥ್‌,ಲಕ್ಷ್ಮಣ್‌, ಮಾದೇಶ್‌ಗೌಡ ವೆಂಕಟೇಶ್‌ ಇದ್ದರು.

ಇಂದು ವಿಜಯನಗರದಲ್ಲಿ ಕ್ಯಾಂಡಲ್‌ಲೈಟ್‌ ಪ್ರತಿಭಟನೆ
ಕಂಬಳ ನಿಷೇಧ ತೆರವುಗೊಳಿಸಬೇಕು ಮತ್ತು ಕಂಬಳ ಆಚರಣೆಗೆ ರಾಜ್ಯ ಸರ್ಕಾರ ತಕ್ಷಣ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ಭಂಟರ ಸಂಘ, ಬೆಂಗಳೂರು ವತಿಯಿಂದ ಗುರುವಾರ (ಜ. 26) ಸಂಜೆ 7.30ಕ್ಕೆ ವಿಜಯನಗರ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್‌ ಬಳಿ ಇರುವ ಸಂಘದ ಆವರಣದಲ್ಲಿ ಮೊಂಬತ್ತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next