ಬೆಂಗಳೂರು: ಗಾಂಜಾ ದಾಸ್ತಾನು ನೆಪದಲ್ಲಿ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ ಸೇರಿದಂತೆ ನಾಲ್ವರನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಗುಪ್ತಚರ ಇಲಾಖೆಯ ವಿಐಪಿ ವಿಭಾಗದ ಬುಲೆಟ್ ಪ್ರೂಫ್ ವಾಹನ ಚಾಲಕ ಬಾಬು, ಗೌತಮಪುರದ ಎಸ್.ಪೂವಾ(42), ಧೀನಬಂಧುನಗರದ ಗೋಪಿನಾಥ್(25), ಲಕ್ಷಿಪುರದ ಸೇಲ್ವಂ (45) ಬಂಧಿತರು. ಜ.20ರಂದು ಕೊಡಿಗೇಹಳ್ಳಿಯ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಅಮಿತ್ ಹಾಗೂ ಆತನ ಸ್ನೇಹಿತರು ತಂಗಿದ್ದ ಕೊಠಡಿಗೆ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿಗಳು ಗುಪ್ರಚರ ಇಲಾಖೆ ಪೇದೆ ಸ್ನೇಹಿತರ ಜತೆ ಸೇರಿ ದಾಳಿ ನಡೆಸಿದ್ದಾನೆ. ಬಳಿಕ ವಿದ್ಯಾರ್ಥಿಗಳ ಕೊಠಡಿಯಲ್ಲಿದ್ದ 200 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟಗಾರ ನೌಶಿನ್‌ನನ್ನು ವಶಕ್ಕೆ ಪಡೆದು ಬೆದರಿಸಿದ್ದಾರೆ.
ಬಳಿಕ ಮುಖ್ಯಪೇದೆ ಬಾಬು, ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ಹಣಕೊಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾನೆ. ಆತಂಕ ಗೊಂಡ ವಿದ್ಯಾರ್ಥಿಗಳು 50 ಸಾವಿರ ಕೊಡುವುದಾಗಿ ಒಪ್ಪಿಕೊಂಡಿದ್ದು, ಮುಂಗಡವಾಗಿ 15 ಸಾವಿರ ರೂ. ಕೊಟ್ಟಿದ್ದಾರೆ. ನಂತರ ಮಲ್ಲೇಶ್ವರಂನಲ್ಲಿರುವ ಸ್ನೇಹಿತರ ಬಳಿ ಇನ್ನುಳಿದ ಹಣ ಕೊಡಿಸುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ತಾವೇ ತಂದಿದ್ದ ಆಟೋ ರಿûಾದಲ್ಲಿ ಸದಾಶಿವನಗರದ ಬಿಇಎಲ್ ಬಳಿಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕರೆದೊಯ್ದು, ಸ್ನೇಹಿತರನ್ನು ಕರೆಸುವಂತೆ ವಿದ್ಯಾರ್ಥಿಗಳ ಮೂಲಕ ಕರೆ ಮಾಡಿಸಿದ್ದಾರೆ. ಬಳಿಕ ಅಮಿತ್ ಹಾಗೂ ಇತರೆ ವಿದ್ಯಾರ್ಥಿ ಗಳನ್ನು ಆಟೋದಲ್ಲೇ ಕೂರಿಸಿಕೊಂಡು ಹಲ್ಲೆ ನಡೆಸಿದ್ದು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.
ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೇದೆಗಳಾದ ಅಶ್ವತ್ಥರೆಡ್ಡಿ ಮತ್ತು ಕೃಷ್ಣಪ್ಪ ಗಲಾಟೆ ಕೇಳಿ ಆಟೋ ಬಳಿ ಹೋಗಿ ವಿಚಾರಿಸಿದ್ದಾರೆ. ಮುಖ್ಯಪೇದೆ ಬಾಬು ಇಲಾಖೆ ಗುರುತಿನ ಚೀಟಿ ತೋರಿಸಿ ಪೇದೆಗಳಿಗೆ ನಿಂದಿಸಿದ್ದಾನೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದ ಅಶ್ವತ್ಥ್ರೆಡ್ಡಿ ಮತ್ತು ಕೃಷ್ಣಪ್ಪ ನಾಲ್ವರು ಹಾಗೂ ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆರೋಪಿಗಳಿಂದ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರವಿಲ್ಲದಿದ್ದರೂ ದಾಳಿ!
ರಾಜ್ಯಗುಪ್ತಚರ ಇಲಾಖೆಯ ಸಿಬ್ಬಂದಿಗೆ ಯಾವುದೇ ದಾಳಿ ನಡೆಸುವ ಅಧಿಕಾರವಿಲ್ಲ. ಆದರೂ ದಾಳಿ ನಡೆಸಿದಲ್ಲದೇ, ವಿದ್ಯಾರ್ಥಿಗಳು ಹಾಗೂ ದಂಧೆಕೋರ ಮೇಲೆ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಆರೋಪದ ಮೇಲೆ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇದೇ ವೇಳೆ ಗಾಂಜಾ ಮಾರಾಟದ ಆರೋಪದ ಮೇಲೆ ದಂಧೆಕೋರ ನೌಶಿನ್ ಮತ್ತು ಈತನ ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.