ನವದೆಹಲಿ: ಉಗ್ರ ಬುರ್ಹಾನ್ ವಾನಿಯನ್ನು ಹತ್ಯೆಗೈದು ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸುತ್ತಿದ್ದಾರೆ ಎಂದು ಗುಪ್ತಚರ ದಳಗಳು ವರದಿ ನೀಡಿವೆ. 2016 ಜುಲೈ 8 ರಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಅನಂತ್‌ನಾಗ್ ಜಿಲ್ಲೆಯಲ್ಲಿ ಹತ್ಯೆ ಗೈಯಲಾಗಿತ್ತು. ಪುಲ್ವಾಮಾದಲ್ಲಿ ಚೇಚಿಕೋಟ್ ಹೆದ್ದಾರಿಯಲ್ಲಿನ ಟೋಲ್ ಪ್ಲಾಜಾ ಬಳಿ ದಾಳಿ ನಡೆಸುವ ಗುರಿಯನ್ನು ಉಗ್ರರು ಹೊಂದಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಆರರಿಂದ ಎಂಟು ಉಗ್ರರು ಪುಲ್ವಾಮಾಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಒಬ್ಬ ಸ್ನೈಪರ್ ಕೂಡ ಇದ್ದಾನೆ. ಪುಲ್ವಾಮಾದಲ್ಲಿ ಉಗ್ರರ ಉಪಟಳ ಮೊದಲಿನಿಂದಲೂ ಹೆಚ್ಚಿದ್ದು, ವಾನಿಯ ಊರು ತ್ರಾಲ್ ಕೂಡ ಸಮೀಪದಲ್ಲೇ ಇದೆ. ಹೀಗಾಗಿ ಈ ಭಾಗದಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ .ಈ ಹಿನ್ನೆಲೆಯಲ್ಲಿ ಸೇನೆ ಬಿಗಿ ಭದ್ರತೆ ಕೈಗೊಳ್ಳಲು ನಿರ್ಧರಿಸಿದೆ. ಪುಲ್ವಾಮಾದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲೂ ಸೇನೆ ನಿಯೋಜನೆ ಮಾಡುವುದರ ಜೊತೆಗೆ, ಹೆಚ್ಚುವರಿ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗುತ್ತಿದೆ.