ಹೊಸದಿಲ್ಲಿ: ಪ್ರಸ್ತುತ ಭಾರತೀಯರು ಬಳಸುತ್ತಿರುವ 52 ಚೀನೀ ಅಪ್ಲಿಕೇಷನ್‌ಗಳನ್ನು ಕೂಡಲೇ ನಿರ್ಬಂಧಿಸಬೇಕು ಇಲ್ಲವೇ ಜನರಿಗೆ ಇವುಗಳ ಬಳಕೆ ನಿಲ್ಲಿಸುವಂತೆ ಸೂಚಿಸಬೇಕು ಎಂದು ಭಾರತೀಯ ಗುಪ್ತಚರ ಏಜೆನ್ಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಗುಪ್ತಚರ ಏಜೆನ್ಸಿಯು ಕೇಂದ್ರಕ್ಕೆ ನೀಡಿರುವ ಪಟ್ಟಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ಗೆ ನೆರವಾಗುವ ಝೂಮ್, ತುಣುಕು ವಿಡಿಯೊ ಆ್ಯಪ್ ಟಿಕ್‌ಟಾಕ್ ಹಾಗೂ ಕಂಟೆಂಟ್ ಆ್ಯಪ್‌ಗ್ಳೆಂದೇ ಕರೆಯಲ್ಪಡುವ ಯುಸಿ ಬ್ರೌಸರ್, ಶೇರ್‌ಇಟ್, ಕ್ಲೀನ್ ಮಾಸ್ಟರ್- ಇತ್ಯಾದಿ ಆ್ಯಪ್‌ಗಳಿವೆ.
ಗುಪ್ತಚರ ಸಂಸ್ಥೆಯ ಈ ಪಟ್ಟಿಯನ್ನು ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಭದ್ರತಾ ಮಂಡಳಿ ಪರಿಶೀಲಿಸಿತ್ತು. ‘ಈ ಆ್ಯಪ್‌ಗಳ ಬಳಕೆಯಿಂದ ಭಾರತದ ಭದ್ರತೆಗೆ ಆಪತ್ತು ಎದುರಾಗಬಹುದು’ ಎಂದು ಆತಂಕ ಸೂಚಿಸಿತ್ತು. ಕಳೆದ ಎಪ್ರಿಲ್‌ನಲ್ಲಿ ಗೃಹ ಸಚಿವಾಲಯ ಝೂಮ್ ಆ್ಯಪ್ ಬಳಸದಂತೆ ಆದೇಶಿಸಿತ್ತು.
ನಾವೇ ಮೊದಲಲ್ಲ: ಝೂಮ್ ಬಳಕೆಯನ್ನು ಈಗಾಗಲೇ ಸಾಕಷ್ಟು ದೇಶಗಳು ನಿರ್ಬಂಧಿಸಿವೆ. ತೈವಾನ್ ಸರಕಾರಿ ಸಂಸ್ಥೆಗಳು ಝೂಮ್ ಬಳಸುತ್ತಿಲ್ಲ. ಜರ್ಮನಿಯ ವಿದೇಶಾಂಗ ಸಚಿವಾಲಯ ವೈಯಕ್ತಿಕ ಕಂಪ್ಯೂಟರ್, ಅಧಿಕಾರಿಗಳ ಮೊಬೈಲ್‌ಗಳಲ್ಲಿ ಝೂಮ್ ಬಳಕೆ ನಿಲ್ಲಿಸಿದೆ. ಅಮೆರಿಕದ ಸಂಸದರು ಝೂಮ್‌ಗೆ ಪರ್ಯಾಯ ಆ್ಯಪ್ ಬಳಸುತ್ತಿದ್ದಾರೆ.
‘ಚೀನ ಆ್ಯಪ್ ಗಳಿಗೆ ಈಗಾಗಲೇ ಪಾಶ್ಚಿಮಾತ್ಯ ಭದ್ರತಾ ಸಂಸ್ಥೆಗಳು ನಿರ್ಬಂಧ ಹೇರಿವೆ. ಗಡಿಸಂಘರ್ಷದ ಸಂದರ್ಭದಲ್ಲಿ ಚೀನ ಇಂಥ ಆ್ಯಪ್‌ಗಳ ಮೂಲಕ ಭಾರತೀ ಯರ ವೈಯಕ್ತಿಕ ದಾಖಲೆಗಳನ್ನು ಕದಿಯುವುದು, ರಕ್ಷಣಾ ಕ್ಷೇತ್ರದ ಮಾಹಿತಿಗಳಿಗೆ ಕನ್ನ ಹಾಕುವ ಕೆಲಸ ಮಾಡಬಹುದು’ ಎಂದು ಗುಪ್ತಚರ ಏಜೆನ್ಸಿ ಎಚ್ಚರಿಸಿದೆ.