ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ನಲ್ಲೀಗ ಹುದ್ದೆಗಳ ಬದಲಾವಣೆಯದ್ದೇ ಚರ್ಚೆ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿಯೂ ಪಕ್ಷದ ಹೀನಾಯ ಸೋಲಿನ ಪರಿಣಾಮ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರ ಹುದ್ದೆ ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ವಯ ಸಮಿತಿ ಜವಾಬ್ದಾರಿ ನೀಡಬೇಕೆಂಬ ಬೇಡಿಕೆ ಜೀವ ಪಡೆದುಕೊಳ್ಳುತ್ತಿದೆ.
ರಾಜ್ಯದಲ್ಲಿ ಕೇವಲ ಒಂದು ಸಂಸತ್ ಸ್ಥಾನ ಪಡೆದು ಹೀನಾಯ ಸೋಲು ಕಂಡಿರುವುದರಿಂದ, ಪಕ್ಷದ ಹಿರಿಯ ನಾಯಕರಾಗಿರುವ ಮಾಜಿ ಸಚಿವ ರೋಷನ್‌ಬೇಗ್ ಹಾಗೂ ರಾಮಲಿಂಗಾ ರೆಡ್ಡಿ ಬಹಿರಂಗವಾಗಿಯೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ. ರೋಷನ್ ಬೇಗ್ ಅವರಂತೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವನ್ನೇ ಪ್ರಶ್ನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ರನ್ನು ಕಟುವಾಗಿ ಟೀಕಿಸಿದ್ದರು.
ಆ ನಂತರ ಸಿದ್ದರಾಮಯ್ಯ ಅವರ ಬಳಿ ಇರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಬಿದ್ದಿದ್ದು, ಒಬ್ಬರಿಗೆ ಒಂದೇ ಹುದ್ದೆ ತತ್ವದಡಿ ಒಂದು ಹುದ್ದೆಯನ್ನು ಬೇರೆಯವರಿಗೆ ನೀಡಬೇಕೆಂದು ರೋಷನ್ ಬೇಗ್ ಹೈ ಕಮಾಂಡ್ ನಾಯಕರಾದ ಗುಲಾಂನಬಿ ಆಝಾದ್ ಹಾಗೂ ಅಹಮದ್ ಪಟೇಲ್ ಅವರ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರು ಮೈತ್ರಿ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಅಣತಿಯಂತೆ ಎಲ್ಲವೂ ನಡೆಯಬೇಕೆಂಬ ನಿಲುವು ಹೊಂದಿರುವುದರಿಂದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ, ಮೈತ್ರಿ ನಾಯಕರ ನಡುವೆ ಹೊಂದಾಣಿಕೆ ಮೂಡುತ್ತಿಲ್ಲ. ಅದು ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿಯೂ ಗುಂಪುಗಾರಿಕೆಯಿಂದ ಪಕ್ಷದ ಭವಿಷ್ಯದ ದೃಷ್ಠಿಯಿಂದಲೂ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವನ್ನು ಹೈ ಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಖರ್ಗೆ ಬಗ್ಗೆ ಒಲವು: ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಮೈತ್ರಿ ಸರ್ಕಾರದಲ್ಲಿ ಸಮನ್ವಯತೆಗಿಂತ ಗೊಂದಲವೇ ಹೆಚ್ಚಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸಂಬಂಧ ವೃದ್ಧಿಸಿಕೊಳ್ಳುವ ಬದಲು ಹಳೆಯ ದ್ವೇಷವನ್ನು ಮನಸ್ಸಲ್ಲಿಟ್ಟುಕೊಂಡೇ ಮುಂದುವರೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದೇ ಕಾರಣದಿಂದ ದೇವೇಗೌಡರು ಹಾಗೂ ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಪಕ್ಷದ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಗೆ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯದ ಕೆಲವು ಹಿರಿಯ ನಾಯಕರು ಹೊಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ವಯ ಸಮಿತಿಯ ಜವಾಬ್ದಾರಿ ನೀಡಿದರೆ, ಪಕ್ಷದಲ್ಲಿ ಕೇಳಿ ಬರುತ್ತಿರುವ ಬಂಡಾಯವೂ ತಣ್ಣಗಾಗಿ ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ ಎಂಬ ವಾದ ಹಿರಿಯ ನಾಯಕರದ್ದಾಗಿದೆ.
ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ?: ರಾಹುಲ್ ಗಾಂಧಿ ಈಗಾಗಲೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಪಕ್ಷದ ಎಲ್ಲ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಆದರೂ, ಅವರ ರಾಜೀನಾಮೆ ನಿರ್ಧಾರವನ್ನು ಇನ್ನೂ ಬದಲಾಯಿಸಿಲ್ಲ.
ಒಂದು ವೇಳೆ ರಾಹುಲ್ ಗಾಂಧಿ ತಮ್ಮ ನಿರ್ಧಾರ ಬದಲಾಯಿಸದೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯದಿದ್ದರೆ, ಆ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆಯವನ್ನು ನೇಮಿಸಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಎಐಸಿಸಿ ಅಧ್ಯಕ್ಷರ ಹುದ್ದೆಯ ಕುರಿತು ರಾಹುಲ್ ಗಾಂಧಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರ ಹುದ್ದೆಯ ಬದಲಾವಣೆಯ ಬಗ್ಗೆ ನಿರ್ಧಾರವಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಇಂದು ಹಿರಿಯರ ಸಭೆ ಸಾಧ್ಯತೆ
ಹಿರಿಯ ಶಾಸಕರ ವಿರೋಧದ ನಡುವೆಯೂ ಸಂಪುಟ ವಿಸ್ತರಣೆಗೆ ಮುಂದಾಗಿರುವುದು ಹಾಗೂ ಪಕ್ಷದಲ್ಲಿ ಹಿರಿ ಯರನ್ನು ಕಡೆಗಣಿಸುತ್ತಿರುವ ಬಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ರಾಜ್ಯದ ಹಿರಿಯ ನಾಯಕರು ಸೋಮವಾರ ಸಭೆ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಾಜಿ ಸಚಿವರಾದ ರೋಷನ್‌ಬೇಗ್, ರಾಮಲಿಂಗಾರೆಡ್ಡಿ, ತನ್ವೀರ್ ಸೇs್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಅನೌಪಚಾರಿಕ ಸಭೆ ಸೇರಿ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಹುದ್ದೆಯ ಬದಲಾವಣೆಯ ಕುರಿತು ಹೈ ಕಮಾಂಡ್‌ಗೆ ವರದಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.