Advertisement

ಮನೆಬಾಗಿಲಿಗೆ ಸಮಗ್ರ ಕೃಷಿ ಮಾಹಿತಿ

12:22 PM Jun 02, 2019 | Suhan S |
ರಾಮನಗರ: ಜೂನ್‌ 10 ರಿಂದ 30ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡುವ ಅಭಿಯಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಜಿ.ಎಚ್.ಯೋಗೇಶ್‌ ತಿಳಿಸಿದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಜನಪರ ಮಾಹಿತಿ-ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ರೈತರ ಮನೆಬಾಗಿಲಿಗೆ ಬೆಳೆ ವೈದ್ಯಕೀಯ ಪರೀಕ್ಷೆ, ವ್ಯವಸಾಯ ವೆೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಮುಂತಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವುದು. ವ್ಯವಸಾಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ಸಲಹೆಗಳನ್ನು ನೀಡಲಾಗುವುದು ಎಂದರು.

Advertisement

ಅಭಿಯಾನದ ವೇಳೆ ಕೃಷಿ ವಸ್ತು ಪ್ರದರ್ಶನ, ಸ್ಥಬ್ಧ ಚಿತ್ರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಸುವುದಾಗಿ, ಕೃಷಿ ವಿಜ್ಞಾನಿಗಳು, ಮಾದರಿ ರೈತರು ಮತ್ತು ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ 2,71,448 ರೈತರು: ಜಿಲ್ಲೆಯಲ್ಲಿ 2,71,448 ರೈತರಿದ್ದಾರೆ. ಈ ಪೈಕಿ ಅತಿ ಸಣ್ಣ ರೈತರ ಸಂಖ್ಯೆ 2,09,458, ಸಣ್ಣ ರೈತರು 41,191, ಮಧ್ಯಮ ರೈತರು 20,524, ದೊಡ್ಡ ರೈತರು 275 ಮಂದಿ ಇದ್ದಾರೆ. ಪರಿಶಿಷ್ಟ ಜಾತಿಯ 25,866 ರೈತರು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 2,038 ರೈತರಿದ್ದು ಜಿಲ್ಲೆಯಾದ್ಯಂತ 18 ರೈತ ಸಂಪರ್ಕ ಕೇಂದ್ರಗಳು, 165 ಬಿತ್ತ‌ನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು, ನೂರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಒಂದು ಮಣ್ಣು ಪರೀಕ್ಷಾ ಪ್ರಯೋಗಾಲಯ ಮತ್ತು ಒಂದು ಕೃಷಿ ವಿಜ್ಞಾನ ಕೇಂದ್ರವಿದೆ ಎಂದು ತಮ್ಮ ಇಲಾಖೆಯ ಮಾಹಿತಿ ನೀಡಿದರು.

ರೈತರ ವಾಟ್ಸಪ್‌ ಗ್ರೂಫ್: ಜಿಲ್ಲೆಯಲ್ಲಿ ರೈತರಿಗಾಗಿ ವಿಶೇಷ ಕೃಷಿ ಚೇತನ ಅಭಿಯಾನದಡಿ ಗ್ರಾಮಪಂಚಾಯ್ತಿ ಮತ್ತು ಹೋಬಳಿ ಮಟ್ಟದಲ್ಲಿ ರೈತರು ಮತ್ತು ಅಧಿಕಾರಿಗಳನ್ನೊಳಗೊಂಡ ನೂರಕ್ಕೂ ಅಧಿಕ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಿದ್ದು 6500ರೈತರು ಗ್ರೂಪ್‌ನಲ್ಲಿದ್ದಾರೆ. ಈ ಎಲ್ಲಾ ರೈತರಿಗೆ ಗ್ರೂಪ್‌ನ ಮೂಲಕ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ರೈತರ ಸಹಾಯವಾಣಿ: ಜಿಲ್ಲೆಯ ರೈತರು ಯಾವುದೇ ಮಾಹಿತಿ, ಸಮಸ್ಯೆ ಅಥವಾ ಅಹವಾಲು ಸಲ್ಲಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸ ಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ 18004257919 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

29,112 ಮಣ್ಣು ಮಾದರಿ ಸಂಗ್ರಹ: ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಯೋಜನೆಯಡಿ 29112 ಮಾದರಿಗಳನ್ನು ಸಂಗ್ರಹಿಸಿದ್ದು 239053 ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೆಚ್ಚಿಸಲು ಸರಿಯಾದ ರಸಗೊಬ್ಬರದ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ದಕ್ಷಿಣ ಕರ್ನಾಟಕದ ಜಿಲ್ಲೆಗಳು 2-3 ವರ್ಷಕ್ಕೊಮ್ಮೆ ಬರ ಪೀಡಿತ ಪ್ರದೇಶಗಳಾಗುವುದರಿಂದ ಸರ್ಕಾರವು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫ‌ಸಲ್ ಬಿಮಾ (ವಿಮಾ) ಯೋಜನೆಯನ್ನು ರೂಪಿಸಿದ್ದು ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ನಿಗಧಿತ ಅರ್ಜಿಯೊಂದಿಗೆ ಭೂಮಿ ದಾಖಲೆಗಳಾದ ಪಹಣಿ, ಖಾತೆ, ಬ್ಯಾಂಕ್‌ ಪಾಸ್‌ಪುಸ್ತಕ, ಆಧಾರ್‌ ಕಾರ್ಡ್‌ನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್‌. ಶಂಕರಪ್ಪ ಸ್ವಾಗತಿಸಿ, ವಂದಿಸಿದರು

ಅನುದಾನ ಬಿಡುಗಡೆ, ಶೇ.98 ಗುರಿ ಸಾಧನೆ:

2018-19ನೇ ಸಾಲಿನಲ್ಲಿ ಜಿಲ್ಲೆಗೆ 26.39ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಶೇ.98ರಷ್ಟು ಗುರಿ ಸಾಧನೆಯಾಗಿದೆ. 197766 ರೈತರಿಗೆ 3290 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಕೃಷಿ ಹೊಂಡ, ಪಾಲಿಥೀನ್‌ ಹೊದಿಕೆ, ಡೀಸೆಲ್ ಪಂಪ್‌ ಸೆಟ್, ತುಂತುರು ನೀರಾವರಿ, ನೆರಳು ಪರದೆ, ಪಾಲಿಹೌಸ್‌ ಮುಂತಾದ ಸೌಲಭ್ಯಗಳಿಗೆ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ವಿವಿಧ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಮನಗರ ತಾಲೂಕಿನ ಕೈಲಾಂಚ, ಮಾಗಡಿ ತಾಲೂಕಿನ ಕುದೂರು, ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಹಾಗೂ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಹೋಬಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾುೕಣಾಭಿವೃದ್ದಿ ಸಂಸ್ಥೆವತಿಯಿಂದ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next