Advertisement
ಸಾರಿಗೆ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ, ವಾಯುಮಾಲಿನ್ಯ ಮಾಪನ, ಸಂಚಾರ ನಿರ್ವಹಣೆ ಹೀಗೆ ಎಲ್ಲವನ್ನೂ ಏಕಸೂತ್ರದಲ್ಲಿ ಹಿಡಿದಿಡುವ ಒಟ್ಟು 149 ಕೋ.ರೂ. ವೆಚ್ಚದ ಯೋಜನೆ ಇದು. ಪ್ರಥಮ ಹಂತದಲ್ಲಿ 39 ಕೋ.ರೂ. ವೆಚ್ಚದ ಯೋಜನೆಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮನಪಾ ಕಟ್ಟಡದ 3ನೇ ಮಹಡಿಯಲ್ಲಿ 2,500 ಚದರ ಅಡಿ ಜಾಗದಲ್ಲಿ ಈ ಕೇಂದ್ರ ಸಿದ್ಧಗೊಳ್ಳಲಿದೆ. ಇಲ್ಲಿ ವಿಶ್ವದರ್ಜೆಯ ತಂತ್ರಾಂಶ ಸಹಿತ ಎಲ್ಲ ಬಗೆಯ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಕೇಂದ್ರಕ್ಕೆ ಲಿಂಕ್ ಆಗಿರುವ ವಿವಿಧ ವ್ಯವಸ್ಥೆಗಳ ಮೇಲೆ ನಿಗಾ ಇರಿಸಿ ನಿರ್ದೇಶನಗಳನ್ನು ನೀಡಲಾಗುತ್ತದೆ.
ನಗರದ ಸುಮಾರು 66,000 ಬೀದಿ ದೀಪಗಳನ್ನು ಇದರಡಿ ತರಲಾಗುತ್ತಿದೆ. ಅವುಗಳನ್ನು ಬೆಳಗುವುದು, ಆರಿಸುವುದು ಕೇಂದ್ರೀಯ ವ್ಯವಸ್ಥೆಗೊಳಪಡಲಿದೆ. ಪ್ರಕಾಶವನ್ನು ಹೆಚ್ಚು ಕಡಿಮೆ ಮಾಡಬಹುದು, ಬೇಕಾದಷ್ಟನ್ನೇ ಉರಿಸಿ ವಿದ್ಯುತ್ಛಕ್ತಿ ಉಳಿತಾಯ ಮಾಡಬಹುದು. ಸಾರಿಗೆ ವ್ಯವಸ್ಥೆಯ ನಿಯಂತ್ರಣದಲ್ಲೂ ನೆರವಾಗಲಿದೆ. ವೃತ್ತಗಳಲ್ಲಿ ಶಕ್ತಿಶಾಲಿಯಾದ 360 ಡಿಗ್ರಿ ತಿರುಗುವ ಸಿಸಿ ಕೆಮರಾ ಅಳವಡಿಸಲಾಗುತ್ತದೆ. ಒಟ್ಟು 176 ಕೆಮರಾ ಅಳವಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದಲ್ಲಿ ಮುಖ್ಯ 15 ವೃತ್ತಗಳಲ್ಲಿ 60 ಕೆಮರಾ ಸ್ಥಾಪನೆಗೊಳ್ಳಲಿವೆ. ಸಾರಿಗೆ ಕಚೇರಿಯ ಮಾಹಿತಿ ವ್ಯವಸ್ಥೆಯ ಜತೆ ಲಿಂಕ್ ಆಗಿರುವ ಇದರಿಂದ ನಿಯಮ ಉಲ್ಲಂಘಿಸಿದ ವಾಹನ ಮಾಲಕರನ್ನು ಪತ್ತೆ ಮಾಡಿ ನೋಟಿಸ್ ರವಾನಿಸಬಹುದು. ಬಸ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಇದರಲ್ಲಿ ಇರುತ್ತದೆ. ಸ್ಮಾರ್ಟ್ ಬಸ್ ನಿಲ್ದಾಣಗಳಲ್ಲಿ ರಿಯಲ್ ಟೈಮ್ ಫಲಕಗಳು ಬೆಳಗಲಿದ್ದು, ರೂಟ್ ನಂಬರ್, ಬರುವ ಬಸ್ ಗಳ ಸಮಯ, ಪ್ರಸ್ತುತ ಅವು ಎಲ್ಲಿವೆ ಎಂಬ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗುತ್ತದೆ.
Related Articles
ಇದು ನೀರು ಸರಬರಾಜು ವ್ಯವಸ್ಥೆಯ ಮೇಲೂ ನಿಗಾ ಇರಿಸುತ್ತದೆ. ತುಂಬೆಯಿಂದ ಎಷ್ಟು ನೀರು ಶುದ್ಧೀಕರಣ ಘಟಕಕ್ಕೆ ಬಂದಿದೆ, ಎಷ್ಟು ಪಡೀಲ್, ಬೆಂದೂರು ನೀರು ಟ್ಯಾಂಕ್‌ಗಳಿಗೆ ಸರಬರಾಜು ಆಗಿದೆ; ಸೋರಿಕೆ ಅಥವಾ ಕಳವು ಆಗುತ್ತಿದೆಯೇ; ಎಷ್ಟು ಪ್ರಮಾಣದಲ್ಲಿ ಇತ್ಯಾದಿ ಮಾಹಿತಿ ನಿಖರವಾಗಿ ತಿಳಿದು ಬರಲಿದೆ. ಬಿಲ್ಲಿಂಗ್ ವ್ಯವಸ್ಥೆಯೂ ಸೇರಲಿದ್ದು, ಮೊದಲಿಗೆ ಕೆಲವು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ.
Advertisement
ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಜಿಪಿಎಸ್ ಅಳವಡಿಸಿ ಸಂಚಾರ, ಕಸ ಸಂಗ್ರಹದ ಮೇಲೆ ನಿಗಾವಹಿಸಿ ಅಗತ್ಯ ಸೂಚನೆ ನೀಡಲಾಗುತ್ತದೆ. ಇನ್ನೂ ಅನೇಕ ವ್ಯವಸ್ಥೆಗಳನ್ನು ‘ಸೆಂಟ್ರಲ್ ಕಮಾಂಡ್ ಸೆಂಟರ್’ ಅಧೀನಕ್ಕೆ ತರುವ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ.
ಕ್ರಾಂತಿಕಾರಿ ವ್ಯವಸ್ಥೆಇದು ಕ್ರಾಂತಿಕಾರಿ ವ್ಯವಸ್ಥೆ. ತ್ವರಿತ, ಗುಣಮಟ್ಟದ ಸೇವೆ ನೀಡಲು ಸಹಕಾರಿ. ಪಾಲಿಕೆಯ ಬಹುತೇಕ ಸೇವೆಗಳ ಮೇಲೆ ನಿಗಾ ಇರಿಸಿ ಸಮರ್ಪಕ ಜಾರಿ ಸಾಧ್ಯ ಎನ್ನುತ್ತಾರೆ ಸಚೇತಕ ಎಂ. ಶಶಿಧರ ಹೆಗ್ಡೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ನವೀನ್ ಡಿ’ಸೋಜಾ. ಸ್ಮಾರ್ಟ್‌ಪಾರ್ಕಿಂಗ್
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನೂ ಸೆಂಟ್ರಲ್ ಕಮಾಂಡ್‌ಗೆ ಜೋಡಿಸಲಾಗುತ್ತದೆ. ಇದಕ್ಕಾಗಿ ಸಿದ್ಧಗೊಳ್ಳುತ್ತಿರುವ ಆ್ಯಪ್ ಅನ್ನು ವಾಹನ ಮಾಲಕರು ಮೊಬೈಲ್‌ಗೆ ಡೌನ್‌ಲೋಡ್ ಮಾಡಬಹುದು. ಅದರ ಮೂಲಕ ಪಾರ್ಕಿಂಗ್ ಸ್ಥಳಾವಕಾಶದ ಮಾಹಿತಿ ಪಡೆಯಬಹುದು. ಟೆಂಡರ್ ಪ್ರಕ್ರಿಯೆ
ಸ್ಮಾರ್ಟ್‌ಸಿಟಿ ಯೋಜನೆಯ ಬಹುಮುಖ್ಯ ಅಂಶವಾಗಿರುವ ‘ಸೆಂಟ್ರಲ್ ಕಮಾಂಡ್ ಸೆಂಟರ್’ ನಿರ್ಮಾಣಕ್ಕೆ ಟೆಕ್ನಿಕಲ್ ಬಿಡ್ ಆಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 149 ಕೋ.ರೂ. ವೆಚ್ಚದ ಯೋಜನೆ ಇದು. ಪ್ರಥಮ ಹಂತದಲ್ಲಿ 39 ಕೋ. ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ.
– ಮಹಮ್ಮದ್ ನಝೀರ್
ಮನಪಾ ಆಯುಕ್ತ ಕೇಶವ ಕುಂದರ್