ದಾವಣಗೆರೆ: ವಾರ್ಡ್‌ನಲ್ಲಿ ಪ್ರತಿ ನಿತ್ಯ ಸ್ವಚ್ಛತಾ ಕಾರ್ಯ ಮಾಡುವಂತಹ ಹದಿನಾಲ್ಕು ಜನ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿಕೊಡುವ ಮೂಲಕ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಮಗನ ಜನ್ಮದಿನ ಆಚರಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ 42ನೇ ವಾರ್ಡ್ ಸದಸ್ಯೆ ಗೌರಮ್ಮ ಗಿರೀಶ್ ತಮ್ಮ ಪುತ್ರ ಎಸ್.ಜಿ. ಸಚಿನ್ ಅವರ 28ನೇ ಜನ್ಮದಿನದ ಅಂಗವಾಗಿ ಈ ಪೌರ ಕಾರ್ಮಿಕರ ಮೂರು ವರ್ಷದವಿಮಾ ಪ್ರೀಮಿಯಂ ಪಾವತಿಸಿ ಪಾಲಿಸಿ ಪತ್ರ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾದ ನಂತರ ಗೌರಮ್ಮ ಮಗನ ಜನ್ಮದಿನದ ಅಂಗವಾಗಿ ಪೌರ ಕಾರ್ಮಿಕರಿಗೆ ಪ್ರತಿ ಬಾರಿ ಉಡುಗೊರೆ ನೀಡುತ್ತಿದ್ದರು.
ಮಹಾಮಾರಿ ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಒಂದೇ ಒಂದು ದಿನ ಪೌರ ಕಾರ್ಮಿಕರು ರಜೆ ತೆಗೆದುಕೊಳ್ಳದೆ ವಾರ್ಡ್ ಸ್ವಚ್ಛತೆ ಮಾಡುತ್ತಿದ್ದರು. ಯಾವುದೇ ಸಮಯದಲ್ಲೂ ಇಂತಹ ಕಡೆ ಕೆಲಸ ಇದೆ ಎಂದು ಹೇಳಿದರೆ ಸಾಕು ತಕ್ಷಣಕ್ಕೆ ಕೆಲಸ ಮುಗಿಸುತ್ತಿದ್ದರು. ಹೀಗಾಗಿ ಗೌರಮ್ಮ ಅವರಿಗೆ ಪೌರ ಕಾರ್ಮಿಕರು, ಕುಟುಂಬಕ್ಕೆ ಏನಾದರೂ ಶಾಶ್ವತವಾಗಿ ಉಪಯೋಗ ಆಗುವ ಉಡುಗೊರೆ ನೀಡಬೇಕು ಎಂಬ ಆಲೋಚನೆ ಮೂಡಿತು. ತಮ್ಮ ಪುತ್ರ ಸಚಿನ್, ಕುಟುಂಬದ ಸದಸ್ಯರು, ಇತರರೊಂದಿಗೆ ಚರ್ಚಿಸಿದ ನಂತರ ಎಲ್ಲ 14 ಜನ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿಕೊಡುವ ಯೋಚನೆ ಬಂದಿತು.
ಹೀಗೆ ಎಲ್ಲ ಪೌರ ಕಾರ್ಮಿಕರಿಂದ ಅಗತ್ಯ ದಾಖಲೆ ಸಂಗ್ರಹಿಸಿ, ಪ್ರತಿಯೊಬ್ಬರ ಹೆಸರಲ್ಲಿ 1200 ರೂಪಾಯಿಯಂತೆ ಮೂರು ವರ್ಷದ ಪ್ರೀಮಿಯಂ ಪಾವತಿಸಿದ್ದು, ಮಾತ್ರವಲ್ಲದೆ ಶುಕ್ರವಾರ ತಮ್ಮ ಮಗನ ಜನ್ಮದಿನ ಹಬ್ಬದ ದಿನವೇ ಸಿದ್ದವೀರಪ್ಪ ಬಡಾವಣೆಯಲ್ಲಿ ಸ್ವತ್ಛತೆ ಕೆಲಸ ಮಾಡುವಮಹಾಂತೇಶ್, ರಾಜು, ರವಿ ಒಳಗೊಂಡಂತೆ 14 ಜನ ಪೌರ ಕಾರ್ಮಿಕರಿಗೆ ಮೇಯರ್ ಎಸ್.ಟಿ.ವೀರೇಶ್, ಸದಸ್ಯೆ ಗೌರಮ್ಮ, ಸಚಿನ್ ಇತರರು ಬಾಂಡ್ ವಿತರಿಸಿದರು. ನನ್ನ ಅಧಿಕಾರ ಇರುವ ತನಕವೂ ಪ್ರೀಮಿಯಂನ್ನು ನಾವೇ ಕಟ್ಟುತೇವೆ.ಮುಂದೆ ಮತ್ತೆ ಕಾರ್ಪೋರೇಟರ್ ಆದರೆ ಅದನ್ನು ಕಂಟಿನ್ಯೂ ಮಾಡುತ್ತೇನೆ ಎನ್ನುತ್ತಾರೆ ಗೌರಮ್ಮ ಗಿರೀಶ್.
ಪೌರ ಕಾರ್ಮಿಕರಿಗೆ ಯಾವುದೇ ಇನ್ಸೂರೆನ್ಸ್ ಇರುವುದಿಲ್ಲ. ಹೀಗಾಗಿ ಕಾರ್ಪೋರೇಟರ್ ಗೌರಮ್ಮ ಅವರು ಒಳ್ಳೆಯ ಗಿಫ್ಟ್ ನೀಡಿದ್ದಾರೆ. ಏನಾದರೂ ಅವಘಡವಾದಲ್ಲಿಪೌರ ಕಾರ್ಮಿಕರ ಕುಟುಂಬಕ್ಕೆ ಐದು ಲಕ್ಷ ರೂ. ದೊರೆಯುತ್ತದೆ. ಎಲ್ಲಿಯೂ ಈ ರೀತಿಪೌರ ಕಾರ್ಮಿಕರಿಗೆ ಇನ್ಸೂರೆನ್ಸ್ ಮಾಡಿಸಿದ ಉದಾಹರಣೆ ಇಲ್ಲ. ನಿಜಕ್ಕೂ ಒಳ್ಳೆಯ ಕೆಲಸ.
–ಕೆ.ಆರ್. ಮಹಾಂತೇಶ್, ಆರೋಗ್ಯ ನಿರೀಕ್ಷಕರು
-ರಾ. ರವಿಬಾಬು