ಸೇಡಂ: ಸಾಧನೆ ಹಾದಿಯಲ್ಲಿ ಸಾಗುವ ಪ್ರತಿಯೊಬ್ಬರನ್ನು ಜನರು ಅನುಮಾನಿಸಿ ಅಪಮಾನಿಸುತ್ತಾರೆ. ಆದರೆ ಅಂತವರೇ ಮುಂದೆ ಸನ್ಮಾನಕ್ಕೆ ಭಾಜನರಾಗುತ್ತಾರೆ ಎಂದು ಮುಗಳನಾಗಾಂವನ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ವಿಶ್ವಗಂಗಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ
ಪಾಲಕರ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ ಸಾಧನೆ ಪಥದಲ್ಲಿ ಸಾಗಿದಾಗ ಅಡಚಣೆಗಳು ಬರುವುದು ಸಾಮಾನ್ಯ. ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಹಾದಿ ಸುಗಮವಾಗುತ್ತದೆ. ಕೈಚೆಲ್ಲಿ ಕುಳಿತರೆ ಜೀವನ ವ್ಯರ್ಥವಾಗುತ್ತದೆ.
ಇಂದಿನ ದಿನಗಳಲ್ಲಿ ಸಂಸ್ಕಾರಭರಿತ ಶಿಕ್ಷಣ ಪಡೆಯುವುದು ಅತ್ಯವಶ್ಯ. ಸಮಾಜಮುಖೀ ಕಾರ್ಯಗಳ ಮೂಲಕ ತಮ್ಮ ಕಷ್ಟಗಳನ್ನು ಬದಿಗೊತ್ತಿ ಶಿಕ್ಷಣ ಸಂಸ್ಥೆ ಸಂಘಟಿಸುತ್ತಿರುವ ಶಂಕರ ಬಿರಾದಾರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಾಹಿತಿ ಡಾ| ಘಾಳಪ್ಪ ಪೂಜಾರಿ ಮಾತನಾಡಿ, ವೈಚಾರಿಕ ಮನೋಭಾವದ ಮೂಲಕ ನೀಡುವ ಶಿಕ್ಷಣ ಗಟ್ಟಿಯಾಗಿರುತ್ತದೆ. ಮೌಡ್ಯ ವಿಚಾರಗಳನ್ನು ದೂರವಿರಿಸುವ ಮೂಲಕ ಪಾಲಕರು ಸಹ ಮಕ್ಕಳ ಉತ್ತಮ ಬೆಳವಣಿಗೆಗೆ ನೆಲೆ ಕಲ್ಪಿಸಿಕೊಡಬೇಕು ಎಂದು ಹೇಳಿದರು. ಬೆಳಗಾವಿಯ ನಾಗಭೂಷಣ ಸ್ವಾಮೀಜಿ, ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ, ಉಪನ್ಯಾಸಕ ನಾಗರಾಜ ಹೆಬ್ಟಾಳ ಇದ್ದರು. ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ ಹಾಸ್ಯ ಪ್ರಸ್ತುತಪಡಿಸಿದರು.
ಆಡಳಿತಾಧಿಕಾರಿ ರೇವಣಸಿದ್ದಯ್ಯ ಹಿರೇಮಠ, ಉಪನ್ಯಾಸಕ ಮಹೇಶ ಪಾಟೀಲ ಬಟಗೇರಾ, ಪ್ರಧಾನ ಅಧ್ಯಾಪಕರಾದ
ಪ್ರಭಾವತಿ ಹಿರೇಮಠ, ಇಂದುಮತಿ ತಡಕಲ್, ಶಂಕರ ಯಾದವ, ಶಿವಕುಮಾರ ದಸ್ತಾಪುರ ಸೇರಿದಂತೆ ಶಿಕ್ಷಕರು ಇದ್ದರು. ವೀರೇಶ ಹೂಗಾರ ಹಾಗೂ ಶರಣಯ್ಯ ಕಲಖಂ ಸಂಗೀತ ಸೇವೆ ಸಲ್ಲಿಸದರು. ಶಿಕ್ಷಕಿ ಮಲ್ಲಮ್ಮ, ವಿನೀತಾ, ಶ್ರೀದೇವಿ ಪ್ರಾರ್ಥಿಸಿದರು. ಮುಖ್ಯಶಿಕ್ಷಕ ಸಂಗಣ್ಣ ಅಲ್ದಿ ಸ್ವಾಗತಿಸಿದರು. ಪ್ರಾಚಾರ್ಯ ಡಿ.ಎಂ. ಹಿಪ್ಪರಗಿ ನಿರೂಪಿಸಿದರು. ದೈಹಿಕ ಶಿಕ್ಷಕ ಜೀವನಕುಮಾರ ನಿಂಗಮಾರಿ ವಂದಿಸಿದರು.