Advertisement
ಹತ್ತಿರ ಹೋಗಿ ಮಾತನಾಡಿಸಿಯೇ ಬಿಟ್ಟೆ. “ಹೆಸರು ಕಮಲಾ. ಹತ್ತಿರದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ 8 ಗಂಟೆಗೆ ಕ್ಲಾಸ್ ಇದೆ. ಅದಕ್ಕೆ ಅವಸರದಲ್ಲಿ ತೆರಳುತ್ತಿದ್ದೇನೆ’ ಎಂದಳು. “ಅರೇ, ಅಷ್ಟೊಂದು ಅವಸರ ಇದ್ದರೆ ಬಸ್ ಅಥವಾ ಆಟೋಗೆ ತೆರಳಬೇಕಿತ್ತು’ ಎಂದಾಗ ನಿರಾಶಾಭಾವದ ನಗೆಯ ಉತ್ತರ. ಅರೆಕ್ಷಣ ಇಬ್ಬರಲ್ಲೂ ಮೌನ. ಮಾತು ಮುಂದುವರೆಸಿದೆ. ಏನಾಯಿತು ಎಂದು ಕೇಳಿದಾಗ, “ಹರಕಲು ಮನೆ, ಮುರುಕಲು ಚಾಪೆ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಜತೆಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದೊಂದಿಗೆ ಊರು ಬಿಟ್ಟು ಬಂದು ಖಾಸಗಿ ಕಾಲೇಜು ಸೇರಿಕೊಂಡಿದ್ದೇನೆ. ಪ್ರತಿ ತಿಂಗಳು 10 ಸಾವಿರ ಸಂಬಳ ನಿಗದಿ ಮಾಡಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಯಾವತ್ತೂ ಸಂಬಳ ಬಂದಿಲ್ಲ. ಈಗ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಬದುಕು ನಡೆಸುವುದೇ ದುಸ್ತರವಾಗಿದೆ.
Related Articles
Advertisement
ನಗರ ಪ್ರದೇಶಗಳಲ್ಲಿ ಪ್ರತಿ ವರ್ಷ ಮನೆ ಬಾಡಿಕೆ ಏರಿಯಾಗುತ್ತಿದೆ, ಆದರೂ ಅತಿಥಿ ಉಪನ್ಯಾಸಕರ ಸಂಬಳದಲ್ಲಿ ಒಂದು ರೂಪಾಯಿ ಕೂಡ ಏರಿಕೆಯಾಗಿಲ್ಲ. ಇಂದಿನ ದಿನಗಳಲ್ಲಿ ಬರುವ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಇಲ್ಲಿ ದೇವರಾದ ಸರ್ಕಾರ ಮಾತ್ರ ಇದನ್ನೆಲ್ಲ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದೆ. ವೃತ್ತಿ ಬದುಕಿನೊಂದಿಗೆ ಅವರ ದೊಡ್ಡ ಹೋರಾಟವೇ ಶುರುವಾಗಿದೆ. ಪ್ರತಿ ಕಾಲೇಜಿನಲ್ಲೂ ಕಾಯಂ ಶಿಕ್ಷಕರ ಸಂಖ್ಯೆಕಡಿಮೆ ಇದೆ. ಒಂದು ಪ್ರತ್ಯೇಕ ವಿಭಾಗಕ್ಕೆ ಒಬ್ಬ ಕಾಯಂ ಶಿಕ್ಷಕ, ಮೂರು- ನಾಲ್ಕು ಜನ ಅತಿಥಿ ಉಪನ್ಯಾಸಕರಿರುತ್ತಾರೆ. ಕಾಯಂ ಶಿಕ್ಷಕರು ಬಡಪಾಯಿ ಅತಿಥಿ ಉಪನ್ಯಾಸಕರ ಮೇಲೆ ತಮ್ಮ ದರ್ಪ ತೋರಿಸುತ್ತಾರೆ. ಆಯಾ ವಿಭಾಗದ ಕೆಲಸ ಮಾಡುವ ಅತಿಥಿ ಉಪನ್ಯಾಸಕರು ವಿಭಾಗದ ಏಳಿಗೆಗೆ ಸಹಕರಿಸುವಂತೆ ಚರ್ಚಿಸಿ ದರೆ ಸಹಕರಿಸುವುದಕ್ಕಿಂತ ಹೆಚ್ಚಾಗಿ ಕಾಲೆಳೆಯುವ ಕೆಲಸಗಳೇ ಹೆಚ್ಚಾಗಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎನ್ನುತ್ತಾರೆ. ಆದರೆ ಇಲ್ಲಿ
ಆಗುತ್ತಿರುವುದು ಶಿಕ್ಷಕರ ಅಪಹಾಸ್ಯ. ಇದರಿಂದಾಗಿ ನೊಂದ ಎಷ್ಟೋ ಶಿಕ್ಷಕರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಪ್ರತಿಯೊಬ್ಬ ಅತಿಥಿ ಉಪನ್ಯಾಸಕರ ಕಥೆಯನ್ನು ಕೇಳಿದರೆ ಕರುಳು ಕಿವುಚಿದಂತಾಗುತ್ತದೆ. ರಾಜ್ಯದ ನೂರಾರು ಕಾಲೇಜುಗಳು ಅತಿಥಿ ಉಪನ್ಯಾಸಕ ರಿಲ್ಲದೇ ನಡೆಯುವುದೇ ಕಷ್ಟ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸು ತ್ತಿದ್ದರೂ ಇದುವರೆಗೂ ಸರ್ಕಾರ ಅವರ ಸೇವೆಯನ್ನು ಕಾಯಂ ಗೊಳಿಸದೆ ಇರುವುದು ದುರಂತ. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಕಾಲೇಜುಗಳಲ್ಲಿ ದ್ವಿತೀಯ ದರ್ಜೆ ಸಹಾಯಕನಿಗೆ ಕೊಡುವಂತಹ ಸಂಬಳಕ್ಕಿಂತಲೂ ಕಡಿಮೆ ಹಣವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ. ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆಯುತ್ತಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ. ಆದರೆ ಅವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಅನೇಕ ಹೋರಾಟಗಳ ಮೂಲಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಸರ್ಕಾರ ಮಾತ್ರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ವೇತನ ಹೆಚ್ಚಳದ ಜೊತೆಗೆ ಸೇವಾ ಭದ್ರತೆ ಒದಗಿಸಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ಜೊತೆಗೆ ವೇತನ ನೀಡಬೇಕು. ಸೇವಾ ಹಿರಿತನದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಪಿಎಚ್‌ಡಿ, ನೆಟ್, ಸೆಟ್ ಪದವಿಗಳಿಗೆ ಅನು ಗುಣವಾಗಿ ಆಂಧ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಾದರಿ ಯಲ್ಲಿ ಮಾಸಿಕ ವೇತನ 25 ಸಾವಿರ ನಿಗದಿಪಡಿಸಬೇಕೆಂಬುದು ಅತಿಥಿ ಉಪನ್ಯಾಸಕರ ಬೇಡಿಕೆ. ಆದರೆ, ಇದ್ಯಾವುದನ್ನೂ ಕೇಳುವ ಸೌಜನ್ಯತೆ ಕೂಡ ಸರ್ಕಾರಕ್ಕಿಲ್ಲ. ಹೋರಾಡಿ ಹಕ್ಕು ಪಡೆದುಕೊಳ್ಳುವ ಶಕ್ತಿಯೂ ಅತಿಥಿ ಉಪನ್ಯಾಸಕರಿಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅಮೂ ಲಾಗ್ರ ಬದಲಾವಣೆ ತರಲು ಹೊರಡುವ ಮುನ್ನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಿ. “ಪುಸ್ತಕಯುಕ್ತ ಪರೀಕ್ಷೆ’ಗೂ ಮುನ್ನ ಸಮರ್ಪಕ ಸಂಬಳ ನೀಡಲಿ. “ಉನ್ನತ’ ಬದಲಾವಣೆಯ ಶಿಕ್ಷಣಕ್ಕೆ ಆದ್ಯತೆಯ ಜತೆಗೆ ಅತಿಥಿಗಳ ಸತ್ಕಾರವೂ ನಡೆಯಲಿ. *ಶೃತಿ ಚಿನಗುಂಡಿ, ಉಪನ್ಯಾಸಕಿ