ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ನಡೆಯುತ್ತಿದ್ದರೂ ಪ್ರಧಾನಿ ಮೌನವಾಗಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಕಾರ್ಯಾಚರಣೆಗೆ ಮುಂದಾಗಿ ಅಲ್ಲಿನ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಆ.7ರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಮಾದರಿಯಲ್ಲಿ ಪ್ರಧಾನಿ ಮೋದಿ ಮೌನಿ ಬಾಬಾ ಆಗಿರುವುದು ಖಂಡನೀಯ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಮಂದಿರಗಳನ್ನು ಧ್ವಂಸ ಮಾಡಲಾಗುತ್ತಿದ್ದು, ರವೀಂದ್ರನಾಥ ಟಾಗೋರ್ ಅವರ ಪ್ರತಿಮೆ ಧ್ವಂಸ ಮಾಡಲಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಾಂಗ್ಲಾದಲ್ಲಿ ಶೇ.12ರಷ್ಟು ಇದ್ದ ಹಿಂದೂಗಳು ಶೇ.5 ಕ್ಕೆ ಕುಸಿದಿದ್ದಾರೆ. ಭಾರತ ನೀಡಿದ ಅಂಬ್ಯುಲೆನ್ಸ್ ಮೇಲೆ ಇದ್ದ ಭಾರತ-ಬಾಂಗ್ಲಾ ರಾಷ್ಟ್ರಧಜ್ವಗಳಲ್ಲಿ ಭಾರತ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದರು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಸಣ್ಣ ಘಟನೆ ಎಂದ ವಿದೇಶಾಂಗ ಸಚಿವರಿಗೆ ನಾಚಿಕೆಯಾಗಬೇಕು. ದೇಶ, ರಾಜ್ಯದಲ್ಲಿನ ಬಾಂಗ್ಲಾ ಅಕ್ರಮ ನಿವಾಸಿಗಳನ್ನು ತಕ್ಷಣವೇ ಒದ್ದು ಹೊರ ಹಾಕಬೇಕು. ರಾಜ್ಯದಲ್ಲಿರುವ ಬಾಂಗ್ಲಾ ಅಕ್ರಮ ವಾಸಿಗಳು, ರೋಹಿಂಗ್ಯಾಗಳ ಮಾಹಿತಿ ಸಂಗ್ರಹಕ್ಕೆ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಅವರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಸಮಿತಿ ವರದಿಯನ್ನು ರಾಜ್ಯ ಗೃಹ ಸಚಿವರಿಗೆ ಸಲ್ಲಿಸಲಾಗುವುದು. ಒಂದು ತಿಂಗಳೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ನಾವೇ ಕಾರ್ಯಾಚರಣೆಗೆ ಇಳಿಯುತ್ತೇವೆ ಎಂದರಲ್ಲದೆ, ಆ.12ರಂದು ಎಲ್ಲ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ಪತ್ರ ಸಲ್ಲಿಸಲಾಗುವುದು ಎಂದರು.