Advertisement

ಮೋದಿ ಸರ್ಕಾರದಿಂದ ರೈತ ಸಮುದಾಯಕ್ಕೆ ಅವಮಾನ: ಸಿದ್ದರಾಮಯ್ಯ

03:46 PM Dec 02, 2020 | keerthan |

ಬೆಂಗಳೂರು: ರೈತರ ಜೊತೆಗೆ ಗಂಭೀರವಾಗಿ ಮಾತುಕತೆಯನ್ನು ನಡೆಸದೆ, ರೈತ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳು ಎಂದೆಲ್ಲ ದೂಷಿಸುತ್ತಿರುವ ಬಿಜೆಪಿ ಸರ್ಕಾರ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಟ್ವೀಟ್ ಮಾಡಿರುವ ಅವರು, ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಸರ್ಕಾರ ಕಾಟಾಚಾರದ ಮಾತುಕತೆಯ ಮೂಲಕ ತನ್ನ ಸಹಜ ಸ್ವಭಾವವಾದ ಉದ್ದಟತನ ಮತ್ತು ಅಪ್ರಮಾಣಿಕತೆಯನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.

ದಲಿತರ ಪರ, ಮಾನವಹಕ್ಕುಗಳ ಪರವಾಗಿ ಹೋರಾಡುವವರನ್ನು ‘ಅರ್ಬನ್ ನಕ್ಸಲ್ ಗಳೆಂದು, ಕೋಮುವಾದದ ವಿರುದ್ಧ ಹೋರಾಡುವವರನ್ನು ದೇಶದ್ರೋಹಿಗಳೆಂದು ದೂಷಿಸುತ್ತ ಬಂದ ನರೇಂದ್ರ ಮೋದಿ ಸರ್ಕಾರ ಈಗ ಅನ್ನಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ ಎಂದಿದ್ದಾರೆ.

ಇದನ್ನೂ ಓದಿ:ಮಾಸ್ಕ್‌ ಧರಿಸಿ ಇಲ್ಲವೇ ಕೋವಿಡ್‌ ಕೇಂದ್ರದಲ್ಲಿ ಸೇವೆ ಸಲ್ಲಿಸಿ: ಗುಜರಾತ್‌ ಹೈಕೋರ್ಟ್

ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದೇವೆ ಎಂದು ಇಲ್ಲಿಯವರೆಗೆ ಬಡಾಯಿ ಬಿಡುತ್ತಾ ಬಂದ ಬಿಜೆಪಿ, ಈಗ ದೆಹಲಿಯಲ್ಲಿನ ರೈತ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಕಾಂಗ್ರೆಸ್ ಪಕ್ಷ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ ಎಂದರು.

Advertisement

ನರೇಂದ್ರ ಮೋದಿ ಸರ್ಕಾರ ರೈತ ಹೋರಾಟಗಾರರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಇಳಿಯದೆ, ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next