ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಶಾಸಕ ಹಾಲಪ್ಪ ಹರತಾಳು ಸರ್ಕಾರಿ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೆ ಹೋದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ನಗರ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಲಪ್ಪ, ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಸಚಿವ ಕಾಗೋಡು ಸಿಗರೇಟ್ ಮಾರುತ್ತಾರೆ, ಅದು ಕ್ಯಾನ್ಸರ್‌ಕಾರಕ. ಮದ್ಯ ಮಾರಾಟ ಮಾಡುತ್ತಾರೆ ಎಂದು ಹೇಳಿಕೆ ನೀಡಿರುವುದು ಅವರ ಪ್ರಬುದ್ಧತೆಗೆ ತಕ್ಕದ್ದಲ್ಲ. ಟೀಕೆ ಟಿಪ್ಪಣಿ ರಾಜಕೀಯದಲ್ಲಿ ಮಾಮೂಲಿ. ಅದರೆ ಕೀಳು ಮನಸ್ಸಿನ ಪ್ರದರ್ಶನ ಮಾಡಬಾರದು ಎಂದು ಹೇಳಿದರು.
ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಸೇರಲು ಕಾಗೋಡು ಮೊರೆ ಹೋಗಿದ್ದನ್ನು ಬಹುಶಃ ಹಾಲಪ್ಪಗೆ ಮರೆತು ಹೋಗಿದೆ. ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರ ಜೊತೆ ಹಾಲಪ್ಪ ಕಾಂಗ್ರೆಸ್ ಕಚೇರಿಗೂ ಹೋಗಿದ್ದರು. ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ ಎಂದರು.
ರಾಜ್ಯದಲ್ಲಿಯೇ ಅತಿಹೆಚ್ಚು ಬಡವರಿಗೆ, ದೀನದಲಿತರಿಗೆ ಭೂಮಿ ಹಕ್ಕು ನೀಡಿದವರೆಂದು ಕಾಗೋಡು ಅವರ ಹೆಸರು ದಾಖಲಾಗಿದೆ. ಕಾಗೋಡು ಅವರಾಗಲಿ, ಅವರ ಕುಟುಂಬವಾಗಲಿ ಹಾಲಪ್ಪ ಬಳಿ ಯಾವುದೇ ಸಹಾಯ ಕೇಳಿಲ್ಲ. ಹಾಲಪ್ಪ ಅವರು ಅನಗತ್ಯವಾಗಿ ತಮ್ಮ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಬೇಕು. ಕಾಗೋಡು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಆತಂಕ ಮತ್ತು ಸೋಲಿನ ಭೀತಿಯಿಂದ ಹರತಾಳು ಇಂತಹ ಮಾತು ಆಡುತ್ತಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಗೋಡು ಪುತ್ರಿ ಡಾ. ರಾಜನಂದಿನಿ ಮಾತನಾಡಿ, ನಮ್ಮ ತಂದೆ ರಾಜಕೀಯ ಜೀವನದಲ್ಲಿ ಎಂದಿಗೂ ವೈಯಕ್ತಿಕ ಹಿತಾಸಕ್ತಿ ಬಗ್ಗೆ ಗಮನ ಹರಿಸಿದವರಲ್ಲ. 1972ರಲ್ಲಿ ಅಜ್ಜ ಸಂಜೀವ್‌ರಾವ್ ಅವರು ನಡೆಸಿಕೊಂಡು ಬರುತ್ತಿರುವ ಯುನೈಟೆಡ್ ಟ್ರೇಡಿಂಗ್ ಕಂಪನಿ, ಶಾಂತಾ ಹೋಟೆಲ್ ತಂದೆ ಹೆಸರಿಗೆ ಗಿಫ್ಟ್ ಡೀಡ್ ಮಾಡಿ ಕೊಡಲಾಗಿದೆ. ಸಿಗರೇಟ್ ಸೇವನೆ ಹಾನಿಕಾರಕ ಎಂದು ಪ್ಯಾಕ್ ಮೇಲೆ ಬರೆದಿರುತ್ತಾರೆ. ಶಾಸಕರಿಗೆ ತಾಕತ್ತು ಇದ್ದರೆ ಕೇಂದ್ರದ ಮೇಲೆ ಒತ್ತಡ ತಂದು ಸಿಗರೇಟ್ ಮಾರಾಟ ರದ್ದು ಮಾಡಿಸಲಿ ಎಂದು ಸವಾಲು ಹಾಕಿದರು.
ನಮ್ಮ ತಂದೆಯವರಾಗಲಿ, ನಾವಾಗಲಿ ಬಾರ್ ಲೈಸೆನ್ಸ್‌ಗಾಗಿ ಶಾಸಕರ ಬಳಿ ಯಾವತ್ತೂ ಬೇಡಿಕೆ ಇರಿಸಿಲ್ಲ. ಪರವಾನಿಗೆಯನ್ನು ಅಬ್ಕಾರಿ ಜಿಲ್ಲಾಧಿಕಾರಿ ಮೂಲಕ ತಂದಿದ್ದೇವೆಯೇ ಹೊರತು ಇದರಲ್ಲಿ ಹಾಲಪ್ಪ ಕೊಡುಗೆ ಏನಿಲ್ಲ. ಕಾಗೋಡು ತಿಮ್ಮಪ್ಪ ಅವರು ಯಾವುದೇ ಅಕ್ರಮ ಆಸ್ತಿ ಮಾಡಿಲ್ಲ. ನಮ್ಮ ತಂದೆಯವರ ಆಸ್ತಿ ಎಷ್ಟು, ಹಾಲಪ್ಪ ಅವರ ಆಸ್ತಿ ಎಷ್ಟು ಎನ್ನುವುದನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆ ಮಾಡಲು ನಾವು ಸಿದ್ದರಿದ್ದೇವೆ ಎಂದು ಘೋಷಿಸಿದರು.
ಗೋಷ್ಠಿಯಲ್ಲಿ ಮಂಡಗಳಲೆ ಗಣಪತಿ, ಮಧುಮಾಲತಿ, ಮಹಾಬಲ ಕೌತಿ, ಕೆ.ಹೊಳೆಯಪ್ಪ, ಡಿ.ದಿನೇಶ್, ಗಣಾಧೀಶ್ ಹಾಜರಿದ್ದರು.