Advertisement

ವಿದ್ಯುತ್‌ ಸಮಸ್ಯೆ ಪರಿಹರಿಸಲು ಶಾಸಕರ ಸೂಚನೆ

09:49 AM Jul 09, 2019 | Suhan S |

ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗಗಳ ವಿದ್ಯುತ್‌ ಪೂರೈಕೆ ಅವ್ಯವಸ್ಥೆ, ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ, ಅನಿಯಮಿತ ಸಾರಿಗೆ ಅವಸ್ಥೆಗಳು ಸೇರಿದಂತೆ ಗ್ರಾಮೀಣ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಶಾಸಕ ಸುನೀಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ಕಾರಣವಾಯಿತು.

Advertisement

ತಾಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯ ಆರಂಭದಲ್ಲೇ, ಗ್ರಾಪಂ ಅಧ್ಯಕ್ಷರುಗಳಿಗೆ ಆಹ್ವಾನಿಸಲಾಗುತ್ತಿದೆ. ಆದರೆ ಎಲ್ಲಿ ಕುಳಿತುಕೊಳ್ಳುವುದು ಎಂದು ತಿಳಿಯುವುದಿಲ್ಲ ಎಂದು ಬಳ್ಕೂರು ಗ್ರಾಪಂ ಅಧ್ಯಕ್ಷ ಕೇಶವ ನಾಯ್ಕ ಆಕ್ಷೇಪಿಸಿದರು.

ಇದಕ್ಕೆ ದನಿಗೂಡಿಸಿದ ಜಿಪಂ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ, ದೀಪಕ್‌ ನಾಯ್ಕ ಮಂಕಿ, ಪುಷ್ಪಾ ನಾಯ್ಕ ಬಳ್ಕೂರು ಇವರು, ಸಭೆಗೆ ಆಹ್ವಾನಿಸುವ ನೋಟಿಸ್‌ ಕಳುಹಿಸುವವರಿಗೆ ಜಿಪಂ ಸದಸ್ಯರ ವಿಳಾಸವೇ ತಿಳಿದಿಲ್ಲ. ತಪ್ಪು ವಿಳಾಸ ನೀಡಿ ಕಳುಹಿಸುವುದರಿಂದ ಎಲ್ಲರಿಗೂ ನೋಟಿಸ್‌ ತಲುಪುವುದಿಲ್ಲ. ಕೆಡಿಪಿ ಸಭೆ ಹೇಗೆ ಮಾಡ್ತೀರಿ, ಆಡಳಿತ ಹೇಗೆ ನಡೆಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತರುವಾಯ ತಾಪಂ ಇಒ ಪ್ರತಿಕ್ರಿಯಿಸಿ ಇನ್ನುಮುಂದೆ ಹೀಗಾಗದಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿ ಅಂಬ್ಯುಲೆನ್ಸ್‌ ನಿರ್ವಹಣೆ ತುರ್ತು ಸಂದರ್ಭಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಶಾಸಕ ಸುನೀಲ್ ನಾಯ್ಕ ಎಚ್ಚರಿಸಿದರು.

Advertisement

ವಿದ್ಯುತ್‌ ಇಲಾಖೆಗೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಮಂಕಿ, ಹೆರಂಗಡಿ, ಗೇರಸೊಪ್ಪಾ, ಮಾವಿನಕುರ್ವಾ ಭಾಗಗಳಲ್ಲಿ ಕಳೆದ ಐದಾರು ದಿನಗಳಿಂದ ವಿದ್ಯುತ್‌ ಪೂರೈಕೆ ಇಲ್ಲದಿರುವ ಕುರಿತು ಪ್ರಸ್ತಾಪವಾದ ವೇಳೆ, ಮಳೆಗಾಲದ ಆರಂಭದಲ್ಲಿ ಗಾಳಿ ಮಳೆಯಿಂದ ಮರಗಳು ಉರುಳಿ ಬಿದ್ದು ವಿದ್ಯುತ್‌ ಮಾರ್ಗ ತುಂಡಾಗುತ್ತಿದೆ. ಸಂಭವಿಸಬಹುದಾದ ಅನಾಹುತ ತಪ್ಪಿಸಲು ವಿದ್ಯುತ್‌ ವಿತರಣಾ ಘಟಕದಿಂದಲೇ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಕಾಡಿನ ಮಾರ್ಗಗಳಲ್ಲಿ ಉರುಳಿಬಿದ್ದ ಮರಗಳನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೆಸ್ಕಾಂ ಅಧಿಕಾರಿ ವಿವರಣೆ ನೀಡಿದರು.

ಇದಕ್ಕೆ ಪ್ರತಿಯಾಗಿ ಜಿಪಂ ಸದಸ್ಯೆ ಪುಷ್ಪಾ ನಾಯ್ಕ, ಕಳೆದ ಜೂನ್‌ ತಿಂಗಳು ಮಳೆಗಾಲದ ಆರಂಭಕ್ಕಿಂತ ಮುನ್ನವೇ ಮೆಟ್ಟಿನಗದ್ದೆ ಪ್ರದೇಶಗಳಲ್ಲಿ ಕರೆಂಟ್ ಇಲ್ಲ. ಬಳ್ಕೂರು ಇಡಗುಂಜಿ ಮಾರ್ಗದ ಮಧ್ಯೆ ಗಟಾರದಲ್ಲಿ ವಿದ್ಯುತ್‌ ಕಂಬ ಹುಗಿದು ಕಂಬ ಈಗ ತಂತಿ ಜೋಡಣೆಯ ಬಲದ ಮೇಲೆ ನಿಂತು ತೂಗಾಡಲಾರಂಭಿಸಿ ಅಪಾಯಕಾರಿ ಆಗಿದೆ ಎಂದು ಆಕ್ಷೇಪಿಸಿದರು.

ಈ ನಡುವೆ ಶಾಸಕರು ಮಾತನಾಡಿ, 24×7ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ವಿಧಾನಸೌಧದಲ್ಲಿ ಧರಣಿ ಕುಳಿತು ಮುರ್ಡೇಶ್ವರ ಹಾಗೂ ಕಾಸರಕೋಡ, ಹೊನ್ನಾವರ ಪ್ರವಾಸಿತಾಣವೆಂದು ಮನಗಾಣಿಸಿ ಪುನಃ 24×7 ಪೂರೈಕೆ ಮಂಜೂರಿ ಮಾಡಿಸಿಕೊಂಡು ಬಂದಿದ್ದೇನೆ. ವಾರದೊಳಗೆ ತಾಲೂಕಿನ ಎಲ್ಲ ವಿದ್ಯುತ್‌ ಸಮಸ್ಯೆ ನಿವಾರಣೆ ಆಗಬೇಕು. ಇಲ್ಲದಿದ್ದರೆ ನಿಮ್ಮ ಕಚೇರಿ ಎದುರು ಬಂದು ಧರಣಿ ಕುಳಿತುಕೊಳ್ಳುತ್ತೇನೆ. ನಿಮಗೆ ರಾತ್ರಿಯಾದರೂ ಮನೆಗೆ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಚಿತ್ತಾರ ಗ್ರಾಪಂ ವ್ಯಾಪ್ತಿಯ ಅಸ್ಸಿಕೇರಿಯಲ್ಲಿನ ಶಾಲೆಯಲ್ಲಿ ಸರಕಾರಿ ಶಿಕ್ಷಕರೇ ಇಲ್ಲ. ಊರಿನವರೇ ಸೇರಿ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆ ನಡೆಸುತ್ತಿದ್ದಾರೆ.ಸರಕಾರಿ ಶಿಕ್ಷಕರಿಲ್ಲದೇ ಯಾವುದೇ ಯೋಜನೆಗಳು ಇಲ್ಲಿ ಅಳವಡಿ ಆಗುತ್ತಿಲ್ಲ. ಅಲ್ಲದೇ ವಿದ್ಯಾರ್ಥಿಗಳ ಟಿ.ಸಿ.ಕೊಡಲು ಸಹ ಅತಿಥಿಶಿಕ್ಷಕರಿಗೆ ಅಕಾರವಿಲ್ಲ.ಶಿಕ್ಷಣ ಇಲಾಖೆ ನಿಷ್ಕಾಳಜಿವಹಿಸಿದೆ ಎಂದು ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ ಗಮನಸೆಳೆದರು. ಇದೇ ರೀತಿ ಹುಡಗೋಡ ಶಾಲೆಯಲ್ಲೂ ಮುಂದುವರಿದಿರುವ ಬಗ್ಗೆ ತಾ.ಪಂ.ಅಧ್ಯಕ್ಷ ಉಲ್ಲಾಸ್‌ ನಾಯ್ಕ ಆಕ್ಷೇಪಿಸಿದರು.

ಮೂರುವರ್ಷದ ಅಧಿಕಾರ ಪೂರ್ಣಗೊಂಡಿದ್ದರೂ ಸಿಆರ್‌ಪಿಗಳು ಅದೇ ಹುದ್ದೆಯಲ್ಲಿ ಮುಂದುವರಿದ ಬಗ್ಗೆ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಪ್ರಸ್ತಾಪಿಸಿದ ವೇಳೆ ಶಾಸಕರು, ಶಿಕ್ಷಕರ ಕೊರತೆ ಇರುವಲ್ಲಿ ಸರಕಾರಿ ಶಿಕ್ಷಕರನ್ನು ನಿಯೋಜಿಸುವಂತೆ ಹಾಗೂ ಅಧಿಕಾರಾವಧಿ ಪೂರ್ಣಗೊಂಡ ಸಿಆರ್‌ಪಿಗಳಿಗೆ ಅವರ ಮೂಲ ಹುದ್ದೆಗೆ ನಿಯೋಜಿಸುವಂತೆ ಹಾಗೂ ಶಿಕ್ಷಕರು ಪಾಠಮಾಡುವ ಜೊತೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಆದ್ಯತೆ ವಹಿಸುವಂತೆ ಸೂಚಿಸಿದರು. ತಾ.ಪಂ. ಸದಸ್ಯ ಆರ್‌.ಪಿ.ನಾಯ್ಕ, ತಾ.ಪಂ.ಉಪಾಧ್ಯಕ್ಷೆ ಲಲಿತಾ ನಾಯ್ಕ, ವಿವಿಧ ಇಲಾಖಾಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next