ಚಿತ್ರದುರ್ಗ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ ಹೇಳಿದರು.
ಸ್ಲಂ ಜನಾಂದೋಲನ-ಕರ್ನಾಟಕ ಜಿಲ್ಲಾ ಸಮಿತಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಸೋಮವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾನೂನು ಮತ್ತು ಯೋಜನೆಗಳ ಅರಿವು ಕುರಿತ ಶಿಬಿರ ಉದ್ಘಾಟಿಸಿ ಅವರು
ಮಾತನಾಡಿದರು. ವರ್ಷದಲ್ಲಿ 90 ದಿನ ಸತತವಾಗಿ ಕೆಲಸ ಮಾಡಿದವರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಲಾಗುವುದು. 18 ರಿಂದ 60 ವರ್ಷದೊಳಗಿನ ಕಟ್ಟಡ ಕಾರ್ಮಿಕರು ತಪ್ಪದೆ ಹೆಸರು ನೋಂದಾಯಿ ಸಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯಗಳಿಂದವಂಚಿತರಾಗುತ್ತಿರಿ. ಕಾರ್ಮಿಕರ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದರೆ ಪ್ರೋತ್ಸಾಹಿಸಿ ಹಣದ ನೆರವು ನೀಡಲಾಗುವುದು ಎಂದರು.
ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕಾರ್ಮಿಕರ ಪರವಾಗಿರುವ ಕಾನೂನು ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಶ್ರೀಮಂತರಿಗೆ ಲಾಭ ಮಾಡಲು ಹೊರಟಿರುವುದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶದ ಪ್ರತಿ ಬಡವರಿಗೂ ಊಟ, ವಸತಿ, ಬಟ್ಟೆ ಅತ್ಯಗತ್ಯ. ಸಂಘಟಿತಮತ್ತು ಅಸಂಘಟಿತ ವಲಯದಲ್ಲಿ ಇಡೀ ದೇಶದಲ್ಲಿ ನಲವತ್ತು ಕೋಟಿ ಕಾರ್ಮಿಕರು ಜೀವನ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಇದಾವುದನ್ನು ಲೆಕ್ಕಿಸದೆ ದೇಶದ ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ ಹಿತ ಕಾಯುವ ಕಾನೂನು ಸಡಿಲಗೊಳಿಸುತ್ತಿರುವ ಬಗ್ಗೆ ನಾವು ಸದಾ ಜಾಗೃತರಾಗಿರಬೇಕು ಎಂದು ಹೇಳಿದರು.
ಸ್ಲಂ ಜನಾಂದೋಲನ-ಕರ್ನಾಟಕಜಿಲ್ಲಾ ಸಂಚಾಲಕ ಟಿ.ಮಂಜಣ್ಣ, ಉಪಾಧ್ಯಕ್ಷೆ ಮಾಲತಿ, ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಮತ್ತಿತರರಿದ್ದರು.