Advertisement

ನೆರೆ ಸಂತ್ರಸ್ತ ಗ್ರಾಮಗಳಿಗೆ ಬಸ್‌ ಬಿಡಲು ಸೂಚನೆ

10:59 AM Aug 11, 2019 | Suhan S |

ನವಲಗುಂದ: ನೆರೆ ಹಾವಳಿಯಿಂದ ತಾಲೂಕಿನಲ್ಲಿ ಯಾವುದೇ ಜೀವಹಾನಿಯಾಗದಂತೆ ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಿದ ತಾಲೂಕು ಅಧಿಕಾರಿಗಳ ಪ್ರಯತ್ನ, ಶ್ರಮ ಹೆಚ್ಚಿಗೆ ಇದೆ. ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಆದಷ್ಟು ಬೇಗ ಪ್ರಾರಂಭಿಸಿ. ವಿದ್ಯಾರ್ಥಿಗಳು ಹಾಗೂ ರೈತರು ತಮ್ಮ ದೈನಂದಿನ ಕೆಲಸಕ್ಕೆ ಹಾಜರಾಗುತ್ತಾರೆಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

Advertisement

ತಾಲೂಕಾ ಸಭಾಭವನದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. 2009ಕ್ಕಿಂತ ಈ ಭಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವುದರಿಂದ ರಸ್ತೆ, ಸೇತುವೆ, ಶಾಲೆಗಳಿಗೆ ಬಹಳ ಹಾನಿಯಾಗಿದೆ. ತಾಲೂಕು ಯಥಾಸ್ಥಿತಿಗೆ ಬರಬೇಕೆಂದರೆ ಮೊದಲು ಬಸ್‌ ಸಂಚಾರ ಪ್ರಾರಂಭವಾಗಬೇಕು. ವಾಹನಗಳು ಹೋಗುವಂತ ಸ್ಥಳಗಳಲ್ಲಿ ಬಸ್‌ ಸಂಚಾರವನ್ನು ಕೂಡಲೇ ಪ್ರಾರಂಭಿಸಬೇಕು. ಸೇತುವೆ, ರಸ್ತೆಗಳನ್ನು 10 ದಿನದೊಳಗಾಗಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇವುಗಳ ಅಂದಾಜು ಯೋಜನೆ ತಯಾರಿಸಿ ನೀಡಬೇಕು. ನೆರೆಹಾವಳಿ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ತಾಲೂಕಿನಲ್ಲಿ ನೆರೆಹಾವಳಿಗೆ ತುತ್ತಾದ ಮೊರಬ, ಗೊಮ್ಮಗೋಳ, ಶಿರೂರ ಇತರೆ ಗ್ರಾಮದಲ್ಲಿ ಸ್ಥಳಾಂತರಕ್ಕೆ ಸಂತ್ರಸ್ತರ ಒಪ್ಪಿಗೆ ಕುರಿತು ಅಧಿಕಾರಿಗಳು ದೃಢಪಡಿಸಿಕೊಂಡು ನನಗೆ ತಿಳಿಸಿದರೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಇನ್ನೂ ಮಳೆರಾಯ ನಿಂತಿಲ್ಲ.

ಆದರೆ ಪ್ರವಾಹ ಕಡಿಮೆಯಾಗಿದ್ದರಿಂದ ಜನರು ನಿಟ್ಟುಸಿರು ಬಿಟ್ಟು ತಮ್ಮ ಮನೆಗಳನ್ನು ಸ್ವಚ್ಛ ಮಾಡುತ್ತಿದ್ದಾರೆ ಎಂದರು.

ಹಾನಿ ವಿವರ ನೀಡಿದ ಅಧಿಕಾರಿಗಳು: ತಾಲೂಕಿನಲ್ಲಿ ಒಟ್ಟು 57 ಕುರಿಗಳು, ಅಣ್ಣಿಗೇರಿ ಭಾಗದ ನಲವಡಿಯಲ್ಲಿ 43 ಕುರಿಗಳು ಹಳ್ಳಕ್ಕೆ ಆಹುತಿಯಾಗಿವೆ. ಅವುಗಳಿಗೆ ಯೋಗ್ಯ ಪರಿಹಾರ ನೀಡಲಾಗುವುದು. ನಾಲ್ಕು ಅಂಗನವಾಡಿ ಕಟ್ಟಡಗಳು ಜಖಂಗೊಂಡಿವೆ. 17 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಬಿಟ್ಟು ಉಳಿದವುಗಳನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತನಾಡಿ, ಮೊರಬ-ಗುಮ್ಮಗೋಳ 40 ಲಕ್ಷ, ಶಿರಕೋಳ-ಹನಸಿ 100 ಲಕ್ಷ, ಬಳ್ಳೂರ-ಜಾವೂರ 12 ಲಕ್ಷ, ತಿರ್ಲಾಪುರ-ಬ್ಯಾಹಟ್ಟಿ 10 ಲಕ್ಷ, ಅಣ್ಣಿಗೇರಿ-ಶಿಶ್ವಿ‌ನಹಳ್ಳಿ ರಸ್ತೆ ಕಾಮಗಾರಿಗೆ 5 ಲಕ್ಷ ರೂ. ಅಗತ್ಯವಿದೆ ಎಂದು ತಿಳಿಸಿದರು.

ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸ್ಥಳದಲ್ಲಿ ಅಧಿಕಾರಿಗಳು ಪರಿಹಾರದ ಚೆಕ್‌ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಗ್ರಾಮಲೆಕ್ಕಾಧಿಕಾರಿ, ಗ್ರಾಮಸಹಾಯಕರು ಬಿದ್ದ ಮನೆಗಳ ವರದಿ ನೀಡಿದ ಮೇಲೆ ಅವರಿಗೆ ಯೋಗ್ಯ ಪರಿಹಾರವನ್ನು ನೀಡಲಾಗುವುದೆಂದು ಹೇಳಿದರು.

ತಹಶೀಲ್ದಾರ್‌ ನವೀನ ಹುಲ್ಲೂರ, ಶೋಭಿತಾ ಆರ್‌., ತಾಪಂ ಇಒ ಪವಿತ್ರಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next