ಸುರಪುರ: ತಾಲೂಕಿನಾದ್ಯಂತ ಇ-ಕೆವೈಸಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತಿಯೊಬ್ಬ ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರ (ಹೆಬ್ಬೆರಳಿನ ಗುರುತು) ಇ-ಕೆವೈಸಿ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಜ. 10ರೊಳಗೆ ಪೂರ್ಣಗೊಳಿಸಬೇಕು ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಸೂಚಿಸಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ನ್ಯಾಯಬೆಲೆ ಅಂಗಡಿ ಡೀಲರ್ ಗಳ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಪಾರದರ್ಶಕ ಪಡಿತರ ವಿತರಣೆಗೆ ಸರ್ಕಾರ ಪ್ರತಿಯೊಬ್ಬರ ಜೀವ ಮಾಪನ ದತ್ತಾಂಶ ಕಡ್ಡಾಯಗೊಳಿಸಿದೆ. ಕಾರಣ ಪಡಿತರ ಚೀಟಿಯಲ್ಲಿ ಹೆಸರಿರುವ ಮತ್ತು ಭಾವಚಿತ್ರ ಹೊಂದಿರುವ ಪ್ರತಿಯೊಬ್ಬ ಸದಸ್ಯರು ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಹೆಬ್ಬೆರಳು ಗುರುತು ನೀಡಿ ಇ-ಕೆವೈಸಿ ಮಾಡಿಕೊಳ್ಳಬೇಕು. ಹೆಬ್ಬೆರಳು ಗುರುತು ನೀಡದಿರುವ ಸದಸ್ಯರಿಗೆ ಪಡಿತರ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇ-ಕೆವೈಸಿ ಕಾರ್ಯದಲ್ಲಿ ಅಂಗಡಿ ಮಾಲೀಕರ ಕರ್ತವ್ಯ ಮುಖ್ಯವಾಗಿದೆ. ಈ ಕುರಿತು ಗ್ರಾಮದಲ್ಲಿ ಡಂಗೂರ ಹಾಕಿಸಿ ಕಾರ್ಡ್‌ದಾರರಲ್ಲಿ ಜಾಗೃತಿ ಮೂಡಿಸಬೇಕು. ಸಾಧ್ಯವಾದಷ್ಟು ಎಲ್ಲಾ ಸದಸ್ಯರನ್ನು ಇ-ಕೆವೈಸಿಗೆ ಒಳಪಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಪಡಿತರದಾರರು ಕಟುಂಬದಲ್ಲಿ ಯಾರಾದರು ಒಬ್ಬರ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆದು ಇ-ಕೆವೈಸಿ ಮಾಡಬೇಕು ಎಂದು ಸಲಹೆ ನೀಡಿದರು.
ನಾವು ಕೆಲಸ ಮಾಡಲು ಸಿದ್ದರಿದ್ದೇವೆ, ಆದರೆ ಜ. 10ರೊಳಗೆ ಪೂರ್ಣಗೊಳಿಸುವುದು ಕಷ್ಟ. ಕಾರಣ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಬುಹುತೇಕ ಡೀಲರ್ ಗಳು ತಹಶೀಲ್ದಾರ್ ಗಮನಕ್ಕೆ ತಂದರು. ತಹಶೀಲ್ದಾರ್ ಮಾತನಾಡಿ, ಸರ್ವರ್ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲಾಗುವುದು ಎಂದು ತಿಳಿಸಿದರು.
ಪಡಿತರ ಚೀಟಿ ಝರಾಕ್ಸ್ ಪ್ರತಿ ಮೇಲೆ ಜಾತಿ ಮತ್ತು ಕಟುಂಬದ ಮುಖ್ಯಸ್ಥೆ ಮಹಿಳೆಯ ತಾಯಿ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಸಂಗ್ರಹಿಸಲು ಸೂಚಿಸಲಾಗಿತ್ತು. ಇದು ಶೇ. 70ರಷ್ಟು ಸಾಧನೆ ಮಾಡಲಾಗಿದೆ. ಉಳಿದ 30ರಷ್ಟು ಸಂಗ್ರಹಿಸಿ ಗ್ರಾಮ ಲೆಕ್ಕಿಗರಿಗೆ ಅಥವಾ ಕಂದಾಯ ನಿರೀಕ್ಷಕರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಆಹಾರ ನಿರೀಕ್ಷಕರಾದ ಅಪ್ಪಯ್ಯ ಹಿರೇಮಠ, ಅಮರೇಶ ಶೆಳ್ಳಗಿ, ವಿತರಕರಾದ ತಿರುಪತಿಗೌಡ ಚಿಗರಿಹಾಳ, ರಮೇಶ ದೊರೆ, ಕೃಷ್ಣಪ್ಪ ಜೇವರ್ಗಿ, ಮೋಹನ ರಫುಗಾರ, ಹಣಮಂತ್ರಾಯ ಮಹಾರಾಯ ಹಾಲಗೇರಿ, ಮಲ್ಲಿಕಾರ್ಜುನ, ಮಲ್ಲಣಗೌಡ, ದತ್ತು ನಾಯಕ, ವೆಂಕಟೇಶ ದೇವತ್ಕಲ್, ಸಂಗಣ್ಣ ಎಕೆಳ್ಳಿ, ನಿಂಗಪ್ಪ ದೇವಾಪುರ, ಮಾನಪ್ಪ ಇಸ್ಲಾಂಪುರ, ಮಾನಪ್ಪ ಕಟ್ಟಿಮನಿ, ಪರಮಣ್ಣ, ಶಿವಪ್ಪ, ಪ್ರವೀಣ, ನಿಖೀಲ್, ನಾಗರೆಡ್ಡಿ ರತ್ತಾಳ, ಮೌನೇಶ, ನಿಂಗಣ್ಣಗೌಡ ದೇವಿಕೇರಿ, ರಾಘವೇಂದ್ರ, ರಾಜಗೋಪಾಲ, ದೇವಿಂದ್ರ, ನಬೀರಸೂಲ್, ರಾಚಪ್ಪ ಜಕಾತಿ, ಬಸವರಾಜ, ಶೇಖಪ್ಪ ಸಜ್ಜನ್, ಹಣಮಂತ ಇತರರಿದ್ದರು.