ಮುದ್ದೇಬಿಹಾಳ: ಪಟ್ಟಣದ ಎರಡು ತಾಲೂಕು ಮಟ್ಟದ ಪರೀಕ್ಷಾ ಕೇಂದ್ರಗಳಲ್ಲಿ ಸೆ.27 ಮತ್ತು 29ರಂದು ಎಸ್ಸೆಸ್ಸೆಲ್ಸಿಯ ಪೂರಕ ಪರೀಕ್ಷೆಗಳು ನಡೆಯಲಿವೆ. ಇವುಗಳನ್ನು ಕೋವಿಡ್ -19 ನಿಯಮಗಳನ್ನು ಪಾಲಿಸಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ಇಲ್ಲದಂತೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಿತಿಯ ಅಧ್ಯಕ್ಷ, ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಸೂಚಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಣಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಸಿಬ್ಬಂದಿ ಕೂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.
ಬಿಇಒ ವೀರೇಶ ಜೇವರಗಿ ಮಾತನಾಡಿ, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳನ್ನು ಶಿಕ್ಷಣ ಇಲಾಖೆ ಒಳಗೊಂಡಿರುವ ಕಾರಣ ಮುದ್ದೇಬಿಹಾಳ ತಾಲೂಕು ಕೇಂದ್ರದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಎಂಜಿಎಂಕೆ ಕೇಂದ್ರಕ್ಕೆ ಮುಖ್ಯಾಧ್ಯಾಪಕ ಎಂ.ಎಸ್. ಕವಡಿಮಟ್ಟಿ, ಜ್ಞಾನ ಭಾರತಿ ಕೇಂದ್ರಕ್ಕೆ ಮುಖ್ಯಾಧ್ಯಾಪಕ ಎಚ್.ಎನ್. ಇಟಗಿ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಎರಡೂ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 224 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು 164 ಇದ್ದು ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 60 ಇದ್ದಾರೆ. ಎಂಜಿಎಂಕೆ ಕೇಂದ್ರವನ್ನು ಶಾಲಾ ವಿದ್ಯಾರ್ಥಿಗಳಿಗೆ, ಜ್ಞಾನ ಭಾರತಿ ಕೇಂದ್ರವನ್ನು ಖಾಸಗಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ತಲಾ 2 ತಾಲೂಕು ಜಾಗೃತ ದಳದ ಅಧಿಕಾರಿಗಳು, ಮುಖ್ಯ ಅಧೀಕ್ಷಕರು, ಸಾಮಾಜಿಕ ಅಂತರ ನೋಡಿಕೊಳ್ಳುವ ಸಿಬ್ಬಂದಿ, ಮೊಬೈಲ್ ಸ್ವಾ ಧೀನಾಧಿ ಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತಲಾ 4 ಪೊಲೀಸ್ ಇಲಾಖೆಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಹಾಗೂ ಓರ್ವ ಮಾರ್ಗಾ ಧಿಕಾರಿ, 30 ಕೊಠಡಿ ಮೇಲ್ವಿಚಾರಕರು ಸೇರಿ ಒಟ್ಟು 53 ಸಿಬ್ಬಂದಿಗಳು ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪರೀಕ್ಷೆಯ ನೋಡಲ್ ಅ ಧಿಕಾರಿ ಶಿಕ್ಷಣ ಸಂಯೋಜಕ ಎಚ್.ಎ. ಮೇಟಿ ಮಾತನಾಡಿ, ಎಲ್ಲ ಪರೀಕ್ಷಾ ಸಿಬ್ಬಂದಿಗೆ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಕ್ರಮವಹಿಸಲಾಗಿದೆ. ಎರಡೂ ಕೇಂದ್ರಗಳು ಅವಶ್ಯಕ ಮೂಲಭೂತ ಸೌಲಭ್ಯ ಹೊಂದಿದ್ದು ಸ್ಯಾನಿಟೆ„ಜ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎರಡೂ ಕೇಂದ್ರಗಳಲ್ಲಿ ಆರೋಗ್ಯ ಕೌಂಟರ್ ತೆರೆಯಲಾಗುತ್ತದೆ. ಪ್ರತಿ ಕೇಂದ್ರದಲ್ಲಿ 2 ಕೊಠಡಿಗಳನ್ನು ಕೋವಿಡ್-19ಗೆ
ಸಂಬಂಧಿಸಿದಂತೆ ಕಾಯ್ದಿರಿಸಲಾಗಿದೆ. ಕೋವಿಡ್-19 ವಿಷಯ ಸ್ಥಿತಿ ನಿಭಾಯಿಸಲು 1 ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕಾಗಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.