ಬೆಂಗಳೂರು: 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ನ.14ರೊಳಗೆ 2 ತಿಂಗಳಿಂದ ವೇತನ ಪಾವತಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿವಿಕೆ ಕಂಪನಿಗೆ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.
108 ಆ್ಯಂಬುಲೆನ್ಸ್ ಸಿಬ್ಬಂದಿಗೆ 2 ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನೌಕರರು ಈ ವಿಚಾರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಡಿ.ರಂದೀಪ್ ಶುಕ್ರವಾರ ಆರೋಗ್ಯ ಸೌಧದದಲ್ಲಿರುವ ತಮ್ಮ ಕಚೇರಿಯಲ್ಲಿ ಜಿವಿಕೆ ಕಂಪನಿ, 108 ಆ್ಯಂಬುಲೆನ್ಸ್ ನೌಕರರ ಜತೆ ಸಭೆ ನಡೆಸಿದರು.
ಸರ್ಕಾರದಿಂದ ಹಣ ಬಿಡುಗಡೆಯಾದರೂ ಆ್ಯಂಬುಲೆನ್ಸ್ ನೌಕರರಿಗೆ 2 ತಿಂಗಳ ವೇತನ ಕೊಡದಿರುವ ಬಗ್ಗೆ ಆಯುಕ್ತರು ಜಿವಿಕೆ ಕಂಪನಿ ಅಧಿಕಾರಿಗಳ ಬಳಿ ಪ್ರಶ್ನಿಸಿದರು.
ಈ ಬಗ್ಗೆ ಆಂಧ್ರ ಪ್ರದೇಶದಲ್ಲಿರುವ ತಮ್ಮ ಮೇಲಧಿಕಾರಿಗಳ ಬಳಿ ವಿಚಾರಿಸಬೇಕಾಗಿದೆ ಎಂದು ಜಿವಿಕೆ ಸಿಬ್ಬಂದಿ ಉತ್ತರಿಸಿದರು. ಬಳಿಕ ಜಿವಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ನ.14ರೊಳಗೆ ನೌಕರರಿಗೆ ವೇತನ ಪಾವತಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟರು.
ನಂತರ ನ.14ಕ್ಕೆ ವೇತನ ಪಾವತಿಸದಿದ್ದರೆ ಸರ್ಕಾರದ ಮೂಲಕ ನಿಮ್ಮ ವೇತನ ಕೊಡಿಸುವುದಾಗಿ ಸಭೆಯಲ್ಲಿದ್ದ ಆ್ಯಂಬುಲೆನ್ಸ್ ನೌಕರರಿಗೆ ಆಶ್ವಾಸನೆ ನೀಡಿದರು ಎಂದು ಸಭೆಯಲ್ಲಿದ್ದ ಆ್ಯಂಬುಲೆನ್ಸ್ ನೌಕರರ ಸಂಘದ ಮುಖಂಡರೊಬ್ಬರು ತಿಳಿಸಿದ್ದಾರೆ.