ಚಿತ್ರದುರ್ಗ: ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಉತ್ತಮ ಮಳೆಯಾಗುತ್ತಿದೆ. ಕೆರೆ ಕಟ್ಟೆ, ಚೆಕ್‌ಡ್ಯಾಂಗಳು ಭರ್ತಿಯಾಗುತ್ತಿವೆ. ಮಕ್ಕಳು ನೀರಿನಲ್ಲಿ ಆಟವಾಡಲು ಹೋಗುತ್ತಾರೆ. ಅವರ ಬಗ್ಗೆ ಜಾಗ್ರತೆ ವಹಿಸಬೇಕು. ನೀರಿನಿಂದ ನೆಲಹಾಸು ಕೂಡ ಒದ್ದೆಯಾಗಿ ಜಾರುವ ಸಾಧ್ಯತೆ ಇರುವುದರಿಂದ ವೃದ್ಧರ ಬಗ್ಗೆ ನಿಗಾ ವಹಿಸಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಪಾಳ್ಯ ಮತ್ತು ಮಳಲಿ ಗ್ರಾಮಗಳಲ್ಲಿ ಶನಿವಾರ 2.90 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ. ಸದ್ಯ ಮಳೆ ಸುರಿಯುತ್ತಿರುವುದರಿಂದ ವಾತಾವರಣ ನೋಡಿಕೊಂಡು ಕಾಮಗಾರಿಗಳನ್ನು ರಸ್ತೆ ನಿರ್ಮಾಣ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ವಡ್ಡರಪಾಳ್ಯಕ್ಕೆ 40 ಲಕ್ಷ ರೂ. ಅನುದಾನ ನೀಡಲಾಗಿದೆ. 15 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ, 12 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, 3 ಲಕ್ಷ ರೂ.ದಲ್ಲಿ ಹೈಮಾಸ್ಟ್ ದೀಪ, 5 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಶಾಸಕರ ಅನುದಾನದಲ್ಲಿ 10 ಲಕ್ಷ ರೂ.ಗಳನ್ನು ಎರಡು ದೇವಸ್ಥಾನಗಳ ಅಭಿವೃದ್ಧಿಗೆ ನೀಡಲಾಗಿದೆ. ದೊಡ್ಡ ಹಳ್ಳಿಯಾಗಿರುವುದರಿಂದ ಸಿಸಿ ರಸ್ತೆಗಳ ಅಗತ್ಯವಿದೆ. ಇನ್ನೂ 2 ಕೋಟಿ ರೂ. ನೀಡಿದರೆ ಎಲ್ಲಾ ರಸ್ತೆಗಳು ಪೂರ್ಣವಾಗಲಿವೆ. ಮುಂದಿನ ದಿನದಲ್ಲಿ ಹಣದ ವ್ಯವಸ್ಥೆ ನೋಡಿಕೊಂಡು ಸಿಸಿ ರಸ್ತೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಪಿಆರ್‌ಇಡಿ ಇಲಾಖೆಯ 2.50 ಕೋಟಿ ರೂ. ಅನುದಾನದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಅಮೃತಪುರ ರಸ್ತೆಯಿಂದ ಮಳಲಿವರೆಗೆ ಡಾಂಬರೀಕರಣ, ಸಿಂಗಾಪುರ ರಸ್ತೆ, ತೊಡರನಾಳ್ ರಸ್ತೆಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ವಿಶೇಷವಾಗಿ ಮಳಲಿ ಗ್ರಾಮದ ಜನರು ಅನೇಕ ವರ್ಷಗಳಿಂದ ರಸ್ತೆಗೆ ಬೇಡಿಕೆ ಸಲ್ಲಿಸಿದ್ದರು. ಈಗ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.
ಈ ವೇಳೆ ಜಿಪಂ ಮಾಜಿ ಸದಸ್ಯೆ ಜಯಪ್ರತಿಭಾ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಶರತ್ ಪಾಟೀಲ್, ಸದಸ್ಯರಾದ ಮಂಜುನಾಥ್, ಎನ್. ಪ್ರಕಾಶ್, ರಾಘವೇಂದ್ರ, ಕೆ.ಎಸ್. ಸಿಂಧೂಕುಮಾರಿ, ಗೀತಮ್ಮ, ಸಾಕಮ್ಮ, ಮುಖಂಡರಾದ ರಮೇಶ್, ನವೀನ್, ಕೃಷ್ಣಮೂರ್ತಿ, ರಾಮಣ್ಣ, ಹನುಮಂತಪ್ಪ, ಮಂಜುನಾಥ್, ಪ್ರಭು ಮತ್ತಿತರರು ಇದ್ದರು.