Advertisement

ವಿದ್ಯಾರ್ಥಿಗಳಿಗೆ ಇಬ್ಬಗೆ ಶುಲ್ಕದ ಬಿಸಿ

12:52 AM Feb 11, 2022 | Team Udayavani |

ಬೆಂಗಳೂರು: ವೈದ್ಯಕೀಯ ಪದವಿ ಆಕಾಂಕ್ಷಿಗಳಿಗೆ ಹೊಸ ಆತಂಕ ಎದುರಾಗಿದೆ. ಎಂಜಿನಿಯರಿಂಗ್‌ ಸೀಟು ಉಳಿಸಿಕೊಂಡಿರುವ ವಿದ್ಯಾರ್ಥಿಗಳು ಆ ಕೋರ್ಸ್‌ ಶುಲ್ಕ ಪಾವತಿಸ ಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ. ಹೀಗಾಗಿ ಅವರು ಮೆಡಿಕಲ್‌, ಎಂಜಿನಿಯರಿಂಗ್‌ -ಎರಡೂ ಶುಲ್ಕ ತೆರಬೇಕಿದೆ. ಎಂಬಿಬಿಎಸ್‌ಗೆ ಮುನ್ನವೇ ಎಂಜಿನಿ ಯರಿಂಗ್‌ ಪ್ರವೇಶ ಪ್ರಕ್ರಿಯೆ ಪೂರ್ಣ ಗೊಳಿಸಿದ್ದೇ ಇದಕ್ಕೆ ಕಾರಣ.

Advertisement

ವೈದ್ಯಕೀಯ ಪ್ರವೇಶ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದ್ದು, ಪ್ರಕ್ರಿಯೆ ವಿಳಂಬವಾಗಿತ್ತು. ಹಲವರು ವೈದ್ಯ ಸೀಟು ಸಿಗದಿದ್ದರೆ ಎಂದು ಎಂಜಿ ನಿಯರಿಂಗ್‌ ಸೀಟು ಉಳಿಸಿಕೊಂಡಿದ್ದರು. ಈಗ ವೈದ್ಯ ಸೀಟು ಸಿಕ್ಕಿರುವುದರಿಂದ ಎಂಜಿನಿಯರಿಂಗ್‌ ಸೀಟ್‌ ವಾಪಸ್‌ ನೀಡಲು ಸಿದ್ಧರಿದ್ದಾರೆ.

ವೈದ್ಯ ಸೀಟು ಸಿಕ್ಕಿದೆ. ಕಾಲೇಜು ಪ್ರವೇಶಕ್ಕಾಗಿ 1,41,196 ರೂ. ಪಾವತಿಸ ಬೇಕಿದೆ. ಆದರೆ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಹೋದರೆ ಎರಡೂ ಕೋರ್ಸ್‌ಗಳ ಶುಲ್ಕ ಪಾವತಿಸುವಂತೆ ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಒಟ್ಟು 2,24,722 ರೂ. ಪಾವತಿಸಬೇಕು. ಫೆ. 14ರೊಳಗೆ ಪ್ರವೇಶ ಪಡೆದು ಕೊಳ್ಳ ಬೇಕಿದೆ. ಮೊದಲ ಸುತ್ತಿನಲ್ಲಿ ಸುಮಾರು 1,500ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ನಮ್ಮದಲ್ಲದ ತಪ್ಪಿಗೆ ನಾವೇಕೆ ಎರಡೆರಡು ಶುಲ್ಕ ಪಾವತಿಸಬೇಕು ಎಂದು ವೈದ್ಯ ಸೀಟು ಆಕಾಂಕ್ಷಿಯೊಬ್ಬರು ಪ್ರಶ್ನಿಸಿದ್ದಾರೆ.

ಪ್ರತೀ ವರ್ಷದಂತೆ ಈ ವರ್ಷವೂ ಪ್ರವೇಶ ಪ್ರಕ್ರಿಯೆ ನಡೆದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸರಕಾರ ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆ ಮುಗಿಸಿದೆ. ಒಂದು ವೇಳೆ ವೈದ್ಯ ಸೀಟು ಕೂಡ ಸಿಗದಿದ್ದರೆ 1 ವರ್ಷ ಕಾಯ ಬೇಕಾಗಿತ್ತು. ಸರಕಾರದ ಎಡವಟ್ಟಿನಿಂದ ನಾವು ಶುಲ್ಕ ಭಾರ ಹೊರಬೇಕಾಗಿದೆ ಎಂದಿದ್ದಾರೆ.

ಇತರ ವಿದ್ಯಾರ್ಥಿಗಳಿಗೆ ನಷ್ಟ: ಕೆಇಎ
ಸರಕಾರ ಸೂಚಿಸಿದಂತೆ ಮತ್ತು ಸಿಇಟಿ ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಯಂತೆ ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ವೈದ್ಯ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೀಟು ಉಳಿಸಿ ಕೊಂಡಿರುವುದರಿಂದ ಮತ್ತು ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಕಾಲೇಜುಗಳಿಗೆ 1 ಸೀಟು ನಷ್ಟವಾಗುತ್ತದೆ.

Advertisement

ವಿದ್ಯಾರ್ಥಿಗಳು ಸೀಟನ್ನು ಉಳಿಸಿಕೊಳ್ಳದಿದ್ದರೆ ಬೇರೆ ವಿದ್ಯಾರ್ಥಿಗಳು ಪಡೆಯುತ್ತಿದ್ದರು. ಆದರೆ ಈಗ ಸೀಟು ಉಳಿಯುವ ಜತೆಗೆ ಬೇರೆ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಿದೆ. ಸೀಟು ಉಳಿಸಿ ಕೊಂಡು ವಿದ್ಯಾರ್ಥಿಗಳು ತಪ್ಪು ಮಾಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ರೀತಿ ಸೀಟು ಉಳಿಸಿಕೊಂಡಿದ್ದರೆ ಸೀಟು ಬ್ಲಾಕ್‌ ಮಾಡಿದ್ದಾರೆ ಎಂದು ಶುಲ್ಕದ 5 ಪಟ್ಟು ದಂಡ ವಿಧಿಸಲಾಗುತ್ತಿತ್ತು. ಆದರೆ ಈ ವರ್ಷ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕನಿಷ್ಠ ಒಂದು ವರ್ಷದ ಶುಲ್ಕ ಪಾವತಿಸಲೇ ಬೇಕು ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.

ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ ಸೀಟ್‌ ಬಗ್ಗೆ ಆಕಾಂಕ್ಷಿಗಳು ಸ್ಪಷ್ಟತೆ ಹೊಂದಿರ ಬೇಕು. ನಿಯಮ ಪ್ರಕಾರ ಎರಡೂ ಕೋರ್ಸ್‌ ಶುಲ್ಕ ಪಾವತಿಸಲೇಬೇಕು. ಶುಲ್ಕ ಮರು ಪಾವತಿ ಅಧಿಕಾರ ಪರೀಕ್ಷಾ ಪ್ರಾಧಿಕಾರಕ್ಕೆ ಇಲ್ಲ. ಸರಕಾರ ನಿರ್ಧರಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆ.
– ರಮ್ಯಾ,
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next