Advertisement

ಸಭೆಗೆ ಸಂಪೂರ್ಣ ಮಾಹಿತಿ ತರಲು ಅಧಿಕಾರಿಗಳಿಗೆ ಸೂಚನೆ

03:53 PM Jul 20, 2019 | Suhan S |

ರಾಯಬಾಗ: ಪಟ್ಟಣದ ತಾಲೂಕು ಪಂಚಾಯತ್‌ ಸಭಾಭವನದಲ್ಲಿ ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶ್ರವಣ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

Advertisement

ತಾಲೂಕು ಅನುಷ್ಠಾನಾಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಅಧ್ಯಕ್ಷರು ಸೂಚಿಸಿದರು. ಅಂಗನವಾಡಿ ಕೇಂದ್ರ ಗಳಲ್ಲಿ ಚಿಕ್ಕಮಕ್ಕಳು ಇರುವುದರಿಂದ ಅವರತ್ತ ಹೆಚ್ಚು ಗಮನ ಹರಿಸಬೇಕು. ಅಡುಗೆಗೆ ಶುದ್ಧ ನೀರು ಬಳಕೆ, ಹಾಗೂ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಡಿಪಿಒ ಅವರಿಗೆ ಸೂಚಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ ಅವರು, ತಾಲೂಕಿನಲ್ಲಿ ಜು. 15ರಿಂದ 27ರವರೆಗೆ ಕ್ಷಯರೋಗ ತಡೆ ಕುರಿತು ಅರಿವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗ ಕುರಿತು ಆಶಾ ಕಾರ್ಯಕರ್ತೆರ ಮೂಲಕ ಜಾಗೃತಿ ಜಾಥಾ ಆಂದೋಲನ ಆಯೋಜಿಸಿ, ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ, ಸುಸಜ್ಜಿತಗೊಳಿಸಲಾಗಿದೆ ಎಂದರು.

ಸಿರಿಧಾನ್ಯ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಸಭೆಗೆ ತಿಳಿಸಿದರು. ತಾಲೂಕಿನಲ್ಲಿ ವಾಟರ್‌ ಸಪ್ಲೈಯ ಇಲಾಖೆಯಿಂದ ಹೊಸ ಶುದ್ಧ ನೀರಿನ ಘಟಕ ಸ್ಥಾಪಿಸಲು ಪ್ರಸ್ತುತ ವರ್ಷ ಯಾವುದೇ ಹೊಸ ಅನುದಾನ ಬಂದಿರುವುದಿಲ್ಲ ಎಂದು ಸಂತೋಷಕುಮಾರ ತಿಳಿಸಿದರು.

ಸಾಮಾಜಿಕಅರಣ್ಯ ವಲಯದವರು ತಾಲೂಕಿನ ಎಲ್ಲ ಶಾಲಾ ಆವರಣಗಳಲ್ಲಿ ಸಸಿಗಳನ್ನು ನೆಡುವಂತೆ ಅಧ್ಯಕ್ಷ ಶ್ರವಣ ಕಾಂಬಳೆ ಅವರು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗೆ ಸೂಚಿಸಿದರು.

Advertisement

ಕಪ್ಪಲ್ಲಗುದ್ದಿ ಗ್ರಾಮಕ್ಕೆ ಸರಿಯಾಗಿ ಬಸ್‌ ಇರುವುದಿಲ್ಲ. ಈಗಿರುವ ಒಂದೆರೆಡು ಬಸ್‌ಗಳನ್ನು ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ ಕಪ್ಪಲ್ಲ ಗುದ್ದಿಯಲ್ಲಿ ನಿಲುಗಡೆ ಮಾಡಬೇಕು. ರಾಯಬಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕಪ್ಪಲ್ಲಗುದ್ದಿ ಸದಸ್ಯರು ಆರೋಪಿಸಿದರು.

ಸಭೆಯಲ್ಲಿ ಪ್ರಭಾರಿ ತಾ.ಪಂ ಇಒ ಸುದೀಪ ಚೌಗಲಾ, ಬಿಇಒ ಎಚ್.ಎ. ಭಜಂತ್ರಿ, ತಾ.ಪಂ ಯೋಜನಾಧಿಕಾರಿ ಎಸ್‌.ಎ. ಮಾನೆ, ಆರ್‌.ಎಸ್‌. ಪಾಟೀಲ, ಎಸ್‌.ಎಸ್‌. ಪಾಟೀಲ, ಎಂ.ಆರ್‌. ಕಳ್ಳಿಮನಿ, ಕೆ.ಟಿ. ಕಾಂಬಳೆ, ಮಹೇಶ ಕುಂಬಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next