Advertisement

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸೂಚನೆ

04:12 PM Jul 20, 2022 | Team Udayavani |

ಇಳಕಲ್ಲ: ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರದ ಆದೇಶದ ಮೇರೆಗೆ ಪ್ರತಿ ಮಂಗಳವಾರ ಪ್ರತಿ ತಾಲೂಕಿಗೆ ಭೇಟಿ ಕಾರ್ಯಕ್ರಮ ಪ್ರಯುಕ್ತ ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಹೊಸ ತಾಲೂಕಾದರೂ ಇಲ್ಲಿಯ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸೂಚಿಸಿದರು. ಸಾರ್ವಜನಿಕರ ಮನವಿಯ ಮೇರೆಗೆ ಇಳಕಲ್ಲ ತಾಲೂಕು ಕಚೇರಿಗೆ ತುರ್ತು ಬ್ಯಾಟರಿ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ದಂಡಾಧಿಕಾರಿಗಳಿಗೆ ಸೂಚಿಸಿದರು.

ನಗರಸಭೆಯ ಪೌರಾಯುಕ್ತ ಹಾಗೂ ನಗರಸಭೆ ಅಧಿಕಾರಿಗಳು ಹಾಗೂ ಜಿಲ್ಲಾ ಯೋಜನಾಧಿಕಾರಿಗಳ ಜತೆ ಸಭೆ ನಡೆಸಿದರು. ಪ್ರಗತಿ ಪರಿಶೀಲನಾ ಸಭೆಯ ನಂತರ ಕಚೇರಿಗೆ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಸಮಾಧಾನದಿಂದ ಅರ್ಜಿಗಳನ್ನು ಪರಿಶೀಲಿಸಿದರಲ್ಲದೇ ಸ್ಪಂದಿಸುವ ಭರವಸೆ ನೀಡಿದರು. ಅಲ್ಲದೇ ನಗರಸಭೆಯ ಕಟ್ಟಡಗಳ ಭೂಬಾಡಿಗೆಯನ್ನು ಬೇಗನೆ ವಸೂಲಿ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು.

ಇಳಕಲ್ಲ ನಗರಕ್ಕೆ ಆಗಮಿಸಿದ ತಕ್ಷಣವೇ ಆಶಾದೀಪ ಅಂಗವಿಕಲರ ಸೇವಾ ಸಂಸ್ಥೆಗೆ ಭೇಟಿ ನೀಡಿ ವಿಕಲಚೇತನರ ಸಮಸ್ಯೆ ಆಲಿಸಿದರು. ನಂತರ ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ನವೀಕರಣಗೊಂಡ ತಾಲೂಕು ಆಡಳಿತದ ನೂತನ ಸಭಾಭವನ ಉದ್ಘಾಟಿಸಿದರು.

ನಗರಸಭೆ ಸದಸ್ಯೆ ರೇಶ್ಮಾ ಮಾರನಬಸರಿ ವಾರ್ಡ್‌ನ ಸಮಸ್ಯೆಗಳ ಕುರಿತು ಹಾಗೂ ನಗರದ ಯುವ ನೇಕಾರರ ಬಳಗ ನೇಕಾರರಿಕೆ ಸಮಸ್ಯೆ ಕುರಿತು ಮತ್ತು 500 ಮನೆ ಪ್ಲಾಟ್‌ ಗಳಿಗೆ ಸರ್ವಿಸ್‌ ರಸ್ತೆ ಕುರಿತು ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕಸಾಯಿಖಾನೆ ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ದಂಡಾಧಿಕಾರಿ ಬಸವರಾಜ ಮೆಳವಂಕಿ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next