Advertisement

ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಸೂಚನೆ

11:32 PM Jul 05, 2019 | Team Udayavani |

ಮಡಿಕೇರಿ: ಏಳನೆಯ ಆರ್ಥಿಕ ಗಣತಿಯನ್ನು ತ್ವರಿತವಾಗಿ ಆರಂಭಿಸುವುದರ ಜೊತೆಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 7 ನೇ ಆರ್ಥಿಕ ಗಣತಿ ನಡೆಸುವ ಸಂಬಂಧ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ ಗಣತಿ ಕಾರ್ಯವನ್ನು ಸರ್ಕಾರದ ನಿರ್ದೇಶನದಂತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ರಮೇಶ್‌ ಅವರು ಏಳನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯಚರಣೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸುವುದು ಗಣತಿಯ ಉದ್ದೇಶವಾಗಿದೆ ಎಂದರು.

ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ಉಪಯೋಗಕ್ಕಲ್ಲದ ಕೃಷಿ ಮತ್ತು ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮುಂತಾದ ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ದಿಮೆಗಳ ಗಣತಿ ಕಾರ್ಯವನ್ನು 7ನೇ ಆರ್ಥಿಕ ಗಣತಿಯಲ್ಲಿ ಕೈಗೊಳ್ಳಲಾಗುವುದು. ಗಣತಿಯು 3 ತಿಂಗಳುಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್‌ ಮಾಹೆಯಲ್ಲಿ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಾಹಿತಿ ನೀಡಿದರು.

Advertisement

ರಾಷ್ಟ್ರೀಯ ಸಾಂಖ್ಯೀಕ ಇಲಾಖೆಯ ಅಧಿಕಾರಿ ವಿವೇಕಾನಂದ ಶೆಣೈ, ಸಾಮಾನ್ಯ ಗಣತಿ ವಿಭಾಗದ ಜಿಲ್ಲಾ ವ್ಯವಸ್ಥಾಪಕರಾದ ಮಹೇಶ್‌, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ರವೀಂದ್ರ, ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ರಮೇಶ್‌, ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಪೌರಾಯುಕ್ತರಾದ ಎಂ.ಎಲ್.ರಮೇಶ್‌, ತಾ.ಪಂ.ಇಒ ಸುನಿಲ್ ಕುಮಾರ್‌, ಸಹಾಯಕ ನಿರ್ದೇಶಕರಾದ ಜೀವನ್‌ ಕುಮಾರ್‌, ಶಿರಸ್ತೆದಾರರಾದ ಪ್ರವೀಣ್‌ ಕುಮಾರ್‌, ಶಿಕ್ಷಣ ಅಧಿಕಾರಿ ಕಾಶಿನಾಥ್‌, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಗಣತಿದಾರರಿಗೆ ತರಬೇತಿ
ಜಿಲ್ಲೆಯಲ್ಲಿನ ಪ್ರತಿ ಕಟ್ಟಡಕ್ಕೆ ಸಮೀಕ್ಷಾಗಾರರು ಭೇಟಿ ನೀಡಿ ಅದರಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದಲ್ಲಿ ಅವುಗಳ ವಿವರಗಳನ್ನು ಗಣತಿ ಕಾರ್ಯದಲ್ಲಿ ಸಂಗ್ರಹಿಸುತ್ತಾರೆ. ಗಣತಿದಾರರಿಗೆ ಸೂಕ್ತವಾದ ತರಬೇತಿ ನೀಡುವ ಜವಾಬ್ದಾರಿ ಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯವರಿಗೆ ವಹಿಸಲಾಗಿದೆ ಎಂದು ರಮೆಶ್‌ ಮಾಹಿತಿ ನೀಡಿದರು. ಪ್ರಸ್ತುತ ಗಣತಿಯು 7ನೇ ಆರ್ಥಿಕ ಗಣತಿಯಾಗಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಆರ್ಥಿಕ ಗಣತಿ ನಡೆಸಲಾಗುತ್ತಿದೆ ಎಂದರು. ಈ ಹಿಂದಿನ ಗಣತಿಗಳನ್ನು ಸರ್ಕಾರಿ/ ಅರೆ ಸರ್ಕಾರಿ ಸಿಬ್ಬಂದಿಯವರಿಂದ ನಡೆಸಲಾಗಿದ್ದು, 2014 ರಲ್ಲಿ ನಡೆದ 6 ನೇ ಆರ್ಥಿಕ ಗಣತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 12,627 ಉದ್ದಿಮೆ ಗುರುತಿಸಲಾಗಿದೆ. 7ನೇ ಆರ್ಥಿಕ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಆಪ್‌ ಮೂಲಕ ಖಾಸಗಿ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಗಣತಿದಾರರು ಪ್ರತಿ ಕಟ್ಟಡಕ್ಕೆ ಭೇಟಿ ನೀಡಿ ಮೊಬೈಲ್ ಆಪ್‌ ಮೂಲಕ ಮಾಹಿತಿ ಸಂಗ್ರಹಿಸುತ್ತಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next