Advertisement

ನಗರ ಸ್ಥಳೀಯ ಸಂಸ್ಥೆ ಮೀಸಲು ಬದಲು

06:00 AM Sep 08, 2018 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ಮೂರೇ ದಿನಗಳಲ್ಲಿ 40ಕ್ಕೂ ಹೆಚ್ಚು ಕಡೆ ಮೀಸಲಾತಿ ಬದಲಾವಣೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿರುವ 266 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 38 ಕಡೆಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ. ವಿಶೇಷವೆಂದರೆ, 38 ಬದಲಾವಣೆಗಳ ಪೈಕಿ ಇತ್ತೀಚೆಗೆ ಚುನಾವಣೆ ನಡೆದು ಫ‌ಲಿತಾಂಶ ಹೊರಬಿದ್ದಿರುವ 25 ಕಡೆ ಮೀಸಲಾತಿ ಬದಲಿಸಿ ಆದೇಶ ಹೊರಡಿಸಲಾಗಿದೆ. ಫ‌ಲಿತಾಂಶದ ದಿನ ಪ್ರಕಟವಾದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಮೂರೇ ದಿನಗಳಲ್ಲಿ ಬದಲಾವಣೆ ಮಾಡಿರುವುದರ ಹಿಂದೆ ಆಡಳಿತ ಪಕ್ಷಗಳ ಹುನ್ನಾರವಿದೆ ಎಂಬ ಆರೋಪ ಕೇಳಿಬಂದಿದೆ.

ಫ‌ಲಿತಾಂಶ ಹೊರಬಿದ್ದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಿಜೆಪಿ ಅಧಿಕಾರಕ್ಕೆ ಬಂದಿರುವ 8 ನಗರ ಸ್ಥಳೀಯ ಸಂಸ್ಥೆಗಳು, ಪಕ್ಷೇತರರ ನೆರವಿನೊಂದಿಗೆ ಬಿಜೆಪಿ ಅಧಿಕಾರ ಪಡೆಯಲು ಅವಕಾಶವಿರುವ 2 ಕಡೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವ 5, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರ ನಡೆಸಲು ಸಾಧ್ಯತೆ ಇರುವ 4, ಜೆಡಿಎಸ್‌ ಅಧಿಕಾರಕ್ಕೆ ಬಂದಿರುವ 2 (ಸಕಲೇಶಪುರ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಮೀಸಲು ಬದಲಾಗಿದೆ) ಪಕ್ಷೇತರರು ಅಧಿಕಾರಕ್ಕೆ ಬಂದಿರುವ 1 ಮತ್ತು ಎಸ್‌ಡಿಪಿಐ ಬೆಂಬಲದೊಂದಿಗೆ ಅಧಿಕಾರ ಹೊಂದಲು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅವಕಾಶವಿರುವ ಬಂಟ್ವಾಳ ನಗರ ಸ್ಥಳೀಯ ಸಂಸ್ಥೆಗಳ ಮೀಸಲು ಬದಲಾವಣೆ ಮಾಡಲಾಗಿದೆ.

ಸಹಜವಾಗಿಯೇ ಇದು ಪ್ರತಿಪಕ್ಷ ಬಿಜೆಪಿ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ನಡೆಸಲು ಕಾರಣವಿರುವ ಕಡೆ ಜೆಡಿಎಸ್‌ಗೆ ಅವಕಾಶವಾಗುವಂತೆ ಮೀಸಲು ಬದಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪ ತಳ್ಳಿಹಾಕಿರುವ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ರೋಸ್ಟರ್‌ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸುವಾಗ ಕೆಲವೊಂದು ಲೋಪಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.



Advertisement

Udayavani is now on Telegram. Click here to join our channel and stay updated with the latest news.

Next