Advertisement

ಮಹಿಳೆಯರ ಸವಾಲುಗಳ ಸ್ವರೂಪ ಬದಲು

12:38 PM Mar 24, 2019 | Lakshmi GovindaRaju |

ಬೆಂಗಳೂರು: ಎಲ್ಲರ ತಾತ್ವಿಕ ನಿಲುವುಗಳು ಒಳ್ಳಗೊಳ್ಳುವ ರೀತಿಯಲ್ಲಿ ಪತ್ರಕರ್ತೆಯರ ಸಂಘ ಮುನ್ನಡೆಯಬೇಕು ಎಂದು ಹಿರಿಯ ಪತ್ರಕರ್ತೆ ಡಾ.ವಿಜಯಾ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಪತ್ರಕರ್ತೆಯರ ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಪತ್ರಕರ್ತೆಯರೊಳಗೆ ಓರ್ವ ಹೋರಾಟಗಾರ್ತಿ ಇರುತ್ತಿದ್ದಳು. ಅವಳನ್ನು ಎಲ್ಲ ಪತ್ರಿಕೆಗಳು ಒಪ್ಪಿಕೊಳ್ಳಬೇಕು ಎಂದ ಅವರು, ಅಂದಿನ ಕಾಲದ ಪತ್ರಿಕೋದ್ಯಮಕ್ಕೆ ಹೋಲಿಸಿಕೊಂಡರೆ ಇಂದಿನ ಕಾಲದ ಪತ್ರಿಕೋದ್ಯಮದಲ್ಲಿ ಹೆಣ್ಣು ಮಕ್ಕಳ ಸವಾಲುಗಳ ಸ್ವರೂಪ ಬದಲಾಗಿವೆ.

ಅವತ್ತಿಗಿಂತ ಇವತ್ತು ಪತ್ರಕರ್ತೆಯರು ತಮ್ಮ ವೃತ್ತಿ ಜೀವನದಲ್ಲಿ ವಿವಿಧ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಪತ್ರಕರ್ತೆಯರ ಸಂಘದ ಕಚೇರಿಗೆ ಪ್ರಸ್‌ಕ್ಲಬ್‌ನಲ್ಲಿ ಜಾಗ ನೀಡಬೇಕು ಎಂದು ಮನವಿ ಮಾಡಿದರು.

ಸಂಘಕ್ಕೆ ಶೀಘ್ರವಾಗಿ ಬೈಲಾ ಸಿದ್ಧಪಡಿಸಿ, ಸದಸ್ಯತ್ವ ಶುಲ್ಕ ನಿಗದಿಪಡಿಸಿ ರಾಜ್ಯದ ಎಲ್ಲ ಪತ್ರಕರ್ತೆಯರನ್ನು ಒಳಗೊಳ್ಳಬೇಕು. ಯಾವುದೇ ವೈಯುಕ್ತಿಕ ತಾತ್ವಿಕ ನಿಲುವುಗಳನ್ನು ಸಂಘದ ಮೇಲೆ ಹೇರಬಾರದು. ಸಂಘದ ನಿಲುವುಗಳು ಮತ್ತು ಜವಾಬ್ದಾರಿಗಳು ಎಲ್ಲ ಪತ್ರಕರ್ತೆಯರನ್ನು ಒಳಗೊಂಡಿರಬೇಕು ಎಂದು ತಿಳಿಸಿದರು.

ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮಾ ಮಾತನಾಡಿ, ಮಹಿಳೆ ಎಲ್ಲ ಕ್ಷೇತ್ರದಲ್ಲಿ ಸಾಧನೆ ಸಾಹಸ ಮಾಡುತ್ತಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಸಮಸ್ಯೆ ಮುಂಚೂಣಿಗೆ ಬರದಿರುವುದು ವಿಪರ್ಯಾಸ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನದೆಯಾದ ಸಮಸ್ಯೆಗಳಿಂದ ನಲುಗುತ್ತಿರುತ್ತಾಳೆ.

Advertisement

ಅದೇ ರೀತಿ ಮಾಧ್ಯಮ ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ಪದೋನ್ನತಿ, ವೇತನ ಹೆಚ್ಚಳಕ್ಕೆ ಪ್ರತಿ ಕ್ಷಣ ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ ಎಂದರು. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ. ಉಷಾರಾಣಿ ನಾರಾಯಣ್‌ ಮಾತನಾಡಿ,

ಒಂದು ಶತಮಾನದ ಹಿಂದೆ ಕನ್ನಡದ ಪ್ರಥಮ ಮಹಿಳಾ ಪತ್ರಕರ್ತೆ ನಂಜನಗೂಡು ತಿರುಮಲಾಂಬಾ ಯಾವ ಸಮಸ್ಯೆಗಳನ್ನು ಎದುರಿಸಿದ್ದರೂ ಅವು ಇಂದಿಗೂ ಜೀವಂತವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸ್ತ್ರೀ ದೃಷ್ಟಿಕೋನದಲ್ಲಿ ಸುದ್ದಿ ವಿಶ್ಲೇಷಣೆ ಮಾಡುವ ಬಗೆಯೇ ಇಲ್ಲ. ಮಹಿಳೆಯರನ್ನು ನಿರ್ಣಾಯಕ ಮತ್ತು ಮಹತ್ತರ ಹುದ್ದೆಗಳಿಂದ ದೂರವಿಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ಪತ್ರಕರ್ತೆಯರ ಸಂಘದ ಲೋಗೋ ಹಾಗೂ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಪುಟವನ್ನು ಅನಾವರಣ ಮಾಡಲಾಯಿತು. ಹಿರಿಯ ಪತ್ರಕರ್ತೆ ನಾಗಮಣಿ ಎಸ್‌.ರಾವ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌.ಭೃಂಗೀಶ್‌, ಬೆಂಗಳೂರು ಪ್ರಸ್‌ಕ್ಲಬ್‌ನ ಅಧ್ಯಕ್ಷ ಸದಾಶಿವ ಶೆಣೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next