ಹಾವೇರಿ: ಕೋವಿಡ್ ಸೋಂಕಿನಿಂದ ಮೃತಪಟ್ಟ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ವೇಳೆ ಯಡವಟ್ಟು ಮಾಡಿರುವ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ, ಶವವನ್ನು ಅದಲು ಬದಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ನೇಶ್ವಿ ಗ್ರಾಮದ ಶಂಕ್ರಪ್ಪ ಕಾಯಕದ ಎಂಬುವವರ ತಾಯಿ ಗೌರಮ್ಮ ಶವವನ್ನು ಆಲದಕಟ್ಟಿಯ ಮುಸ್ಲಿಂ ಕುಟುಂಬದ 60 ವರ್ಷದ ವೃದ್ಧೆಯ ಶವವೆಂದು ಬೆಳಗ್ಗೆ ಹಸ್ತಾಂತರಿಸಿದ್ದಾರೆ. ಆ ಕುಟುಂಬದವರು ಆ ಮೃತದೇಹವನ್ನೇ ತಮ್ಮ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಸಿದ್ದಾರೆ.
ರಟ್ಟಿಹಳ್ಳಿ ತಾಲೂಕು ನೇಶ್ವಿ ಗ್ರಾಮದ ಗದಿಗೆಮ್ಮ ಕಾಯಕದ(64) ಅವರಿಗೆ ಮಧುಮೇಹವಿತ್ತು. ಹೀಗಾಗಿ, ರಾಣಿಬೆನ್ನೂರನ ಖಾಸಗಿ ಆಸ್ಪತ್ರೆಯಲ್ಲಿ ಕಾಯಂ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರು. ಕೋವಿಡ್ ಪಾಸಿಟಿವ್ ಬಂದ ಕಾರಣ ಜಿಲ್ಲಾಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡಿದ್ದರು. ಪ್ರತಿದಿನ ಮಗ ಬಂದು ಆಸ್ಪತ್ರೆ ಸಿಬ್ಬಂದಿ ಬಳಿ ತಾಯಿ ಆರೋಗ್ಯ ವಿಚಾರಿಸುತ್ತಿದ್ದ. ಅವನ ಜತೆಗೆ ಹಾವೇರಿಯಲ್ಲಿರುವ ಅವರ ಸಂಬಂಧಿಕರು ಸಹ ನಿತ್ಯ ಗದಿಗೆಮ್ಮನ ಆರೋಗ್ಯ ವಿಚಾರಿಸುತ್ತಿದ್ದರು. ಸೋಮವಾರ ಬೆಳಗ್ಗೆ ಶಂಕ್ರಪ್ಪನಿಗೆ ಕರೆ ಮಾಡಿ ನಿಮ್ಮ ತಾಯಿ ಮೃತಪಟ್ಟಿದ್ದಾರೆ. ಬಂದು ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಮಗನನ್ನು ಶವಾಗಾರಕ್ಕೆ ಕರೆದೊಯ್ದ ಸಿಬ್ಬಂದಿ ಅಲ್ಲಿದ್ದ 3 ಶವಗಳನ್ನು ತೋರಿಸಿದ್ದಾರೆ. ಮುಖ ಸರಿಸಿ ನೋಡಿದಾಗ ಅವನ ತಾಯಿಯ ಶವ ಅಲ್ಲಿರಲಿಲ್ಲ. ಇದರಿಂದ ಗಾಬರಿಯಾಗಿ ಇವರು ನಮ್ಮ ತಾಯಿ ಅಲ್ಲ ಎಂದಿದ್ದಾನೆ. ಆಗ ಸಿಬ್ಬಂದಿಯ ಯಡವಟ್ಟು ಬಯಲಾಗಿದೆ. ತಾವು ಮಾಡಿದ ಯಡವಟ್ಟು ಬಯಲಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಉಸ್ತುವಾರಿ ಡಾ|ಎಲ್.ಎಲ್.ರಾಠೊಡ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆಸ್ಪತ್ರೆಯ ಒಳಗೆ ಹೋಗಿ ಗದಿಗೆಮ್ಮಳ ಶವ ಆಲದಕಟ್ಟಿಯ ಮುಸ್ಲಿಂ ಕುಟುಂದವರಿಗೆ ಹಸ್ತಾಂತರಿಸಿರುವ ಹಾಗೂ ಅವರ ಶವ ಇಲ್ಲಿಯೇ ಇರುವ ಮಾಹಿತಿ ಖಚಿತಪಟ್ಟ ನಂತರ ಅಂತ್ಯಸಂಸ್ಕಾರ ಮಾಡಿದ ಶವವನ್ನು ಹೊರತೆಗೆದು, ಶವಾಗಾರದಲ್ಲಿರುವ ಶವವನ್ನು ಒಯ್ದು ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸತ್ತ ಮೇಲೆ ತಾಯಿ ಮುಖ ನೋಡುವ ಭಾಗ್ಯವೂ ಇಲ್ಲದಾಗಿದೆ. ನನಗೆ ತಾಯಿ ಶವ ಬೇಕೇ ಬೇಕು. ನೀವು ಏನು ಮಾಡ್ತೀರೋ ಗೊತ್ತಿಲ್ಲ. ನನಗೆ ನನ್ನ ತಾಯಿ ಶವ ಕೊಡಿ ಎಂದು ಮಗ ಶಂಕ್ರಪ್ಪ ಪಟ್ಟು ಹಿಡಿದು ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಕುಳಿತ ಘಟನೆ ನಡೆದಿದೆ.