ಚಾಮರಾಜನಗರ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಮತ ಬ್ಯಾಂಕ್ ಗಾಗಿ, ಜನಪ್ರಿಯತೆಗಾಗಿ ಹಣ ಕೊಡುತ್ತಿದೆ. ಹಣದ ಬದಲಾಗಿ ಸರ್ಕಾರ ರೈತರಿಂದ ಅಕ್ಕಿ, ರಾಗಿ, ಜೋಳ ಖರೀದಿಸಿ ಜನರಿಗೆ ವಿತರಣೆ ಮಾಡಬೇಕು ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋಹತ್ಯೆ ನಿಷೇಧ ಕಾನೂನು ಉಳಿಸಿ, ಅನ್ನಭಾಗ್ಯ ಯೋಜನೆಗೆ ರೈತರಿಂದ ಅಕ್ಕಿ, ರಾಗಿ ಸಿರಿಧಾನ್ಯ ಖರೀದಿಸಿ ಮತ್ತು ಕಾಡಂಚಿನ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ಎಂಬ ವಿಷಯಗಳ ಕುರಿತ ರೈತರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಅಕ್ಕಿ ಇಲ್ಲ ಎಂದಿದೆ ನಿಜ. ನಾವು ರೈತರು ಕೊಡುವುದಿಲ್ಲ ಎಂದು ಹೇಳಿದ್ದೇವೆಯೇ? ರಾಜ್ಯದ ರೈತರು 25 ಲಕ್ಷ ಟನ್‌ಗಳಷ್ಟು ಅಕ್ಕಿ ಬೆಳೆಯುತ್ತಾರೆ. ರಾಗಿ, ಜೋಳವನ್ನೂ ಬೆಳೆಯುತ್ತಾರೆ. ಬೇರೆ ರಾಜ್ಯಕ್ಕೂ ಕೊಡುತ್ತಿದ್ದಾರೆ. ರೈತರಿಂದ ಅಕ್ಕಿ, ರಾಗಿ, ಜೋಳ ಖರೀದಿಸಿ. ಪಡಿತರ ಕಾರ್ಡ್‌ದಾರರಿಗೆ ಅಕ್ಕಿ ಜೊತೆಗೆ ಧಾನ್ಯಗಳನ್ನೂ ಕೊಡಬೇಕು. ಸಿದ್ದರಾಮಯ್ಯ ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ರದ್ದು ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗೋವನ್ನು ಕೊಲ್ಲಬಾರದು ಎಂದು ಬಸವಣ್ಣ ಹೇಳಿದ್ದರು. ಅಂಬೇಡ್ಕರ್ ಕೂಡ ಗೋವುಗಳನ್ನು ಕೊಲ್ಲಬಾರದು ಎಂದಿದ್ದಾರೆ. ಗಾಂಧೀಜಿ ನಿಲುವೂ ಇದೇ ಆಗಿತ್ತು. ಗೋವು ರೈತರ ಜೀವನಾಡಿ. ಅದನ್ನು ಕೊಲ್ಲುವ ಕೆಲಸ ಮಾಡಬಾರದು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆಘಾತ ನೀಡಿದೆ. ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆಗಳ ಹಂಚಿಕೆಯಲ್ಲಿ 10 ಸಾವಿರ ಕೋಟಿ ಯಷ್ಟು ಕಡಿತ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಪ್ರೋತ್ಸಾಹ ಕೊಟ್ಟು ರೈತರನ್ನು ನಿರ್ಣಾಮ ಮಾಡಿದ್ದಾರೆ ಎಂದು ಶಾಂತಕುಮಾರ್ ದೂರಿದರು.
ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ರಾಜ್ಯಾದ್ಯಂತ ಸಮಾವೇಶ ಮಾಡುತ್ತಿದ್ದೇವೆ. ಕೊನೆಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಿದ್ದರಾಮಯ್ಯ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ›.ಎಸ್. ಶಿವರಾಜಪ್ಪ ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ದೇವರಾಜು, ಚಾಮರಾಜನಗರ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿಗಳಾದ ಮಹದೇವಸ್ವಾಮಿ, ಮೆಲ್ಲಹಳ್ಳಿ ಚಂದ್ರಶೇಖರ್, ಕಿರಗಸೂರು ಶಂಕರ್, ಪದಾಧಿಕಾರಿಗಳಾದ ಸಿದ್ದೇಶ್, ಹರೀಶ್ ಇತರರು ಇದ್ದರು.