ಹೈಸ್ಕೂಲಿಗೆ ಬರುವವರೆಗೂ, ಪೊಲೀಸ್ ಕಾನ್‌ಸ್ಟೆಬಲ್ ಆಗಲೇಬೇಕೆಂದು ಪಣತೊಟ್ಟಿದ್ದೆ. ಪೊಲೀಸ್ ಆಗಲು ಗಟ್ಟಿಮುಟ್ಟಾದ ದೇಹ ಬೇಕು ಅಂತ ನಮ್ಮ ಜಮೀನಿನವರೆಗೂ ಪ್ರತಿದಿನ ಬೆಳಗ್ಗೆಯೇ ಓಡುತ್ತಾ ಹೋಗಿ ಅಲ್ಲಿ ಲಾಂಗ್‌ಜಂಪ್, ಹೈ ಜಂಪ್ ಅಭ್ಯಾಸ ಮಾಡುತ್ತಿದ್ದೆ…
ತೀರಾ ಬಡತನದ ಕುಟುಂಬದಲ್ಲಿ ಜನಿಸಿದವನು ನಾನು. ಮೂರು ಹೊತ್ತಿನ ಊಟದ ಹೊರತು, ಇನ್ಯಾವುದೇ ಸೌಕರ್ಯಗಳಿಗೂ ಆಸೆಪಡದಂತಹ ಪರಿಸ್ಥಿತಿ ಮನೆಯಲ್ಲಿತ್ತು. ನಾನು ಚೆನ್ನಾಗಿ ಓದಿ, ಸರ್ಕಾರಿ ನೌಕರಿ ಪಡೆದರೆ ಮಾತ್ರ, ಮನೆಯ ಪರಿಸ್ಥಿತಿ ಸುಧಾರಿಸಲು ಸಾಧ್ಯವೆಂದು ಅನಿಸುತ್ತಿತ್ತು. ಆ ದಿನಗಳಲ್ಲಿ ಪೊಲೀಸ್ ಅಂದರೆ, ಎಲ್ಲರಿಗೂ ಭಯ ಮತ್ತು ಗೌರವ. ಈಗಿಂದಲೇ ಚೆನ್ನಾಗಿ ಓದಬೇಕು. ಮುಂದೊಂದು ದಿನ, ಪೊಲೀಸ್ ಆಗಿ ಎಲ್ಲರಿಂದ ಗೌರವ ಪಡೆಯಬೇಕು ಎಂಬ ಆಸೆ, ಚಿಕ್ಕಂದಿನಲ್ಲಿಯೇ ಮನಸ್ಸು ಹೊಕ್ಕಿತು.
“ಪೊಲೀಸ್ ಆಗಲು ಗಟ್ಟಿಮುಟ್ಟಾದ ದೇಹ ಬೇಕು. ಚೆನ್ನಾಗಿ ಓಡಬೇಕು, ಹೈಜಂಪ್, ಲಾಂಗ್ ಜಂಪ್ ಚೆನ್ನಾಗಿ ಮಾಡ್ಬೇಕು…’ ಎಂದೆಲ್ಲಾ ಕೆಲವು ಹಿರಿಯರು ಸಲಹೆ ನೀಡಿದ್ದರು. ಹಾಗಾಗಿ, ಮನೆಯಿಂದ ಒಂದು ಕಿಲೋಮೀಟರ್ ದೂರವಿದ್ದ ನಮ್ಮ ಜಮೀನಿನವರೆಗೂ, ಪ್ರತಿದಿನ ಬೆಳಗ್ಗೆಯೇ ಓಡುತ್ತಾ ಹೋಗುತ್ತಿದ್ದೆ. ಅಲ್ಲಿಯ ನೆಲವನ್ನು ನನಗೆ ತೋಚಿದಂತೆ ಅಗೆದು, ಮೆದು ಮಾಡಿಕೊಂಡು, ಅಲ್ಲಿಯೇ ಹೈಜಂಪ್, ಲಾಂಗ್‌ಜಂಪ್ ಅಭ್ಯಾಸ ಮಾಡುತ್ತಿದ್ದೆ. ಪುನಃ ಅಲ್ಲಿಂದ ಮನೆಯವರೆಗೆ ಓಡಿ ಬರುತ್ತಿದ್ದೆ.
ಹೈಸ್ಕೂಲಿಗೆ ಬಂದಮೇಲೆ, ನಿಧಾನವಾಗಿ ಪೊಲೀಸರ ಕಷ್ಟಗಳು ಅರ್ಥವಾದವು. ಕೆಲವು ಭ್ರಷ್ಟ ಪೊಲೀಸರನ್ನು ನೋಡಿ, ಎದುರಿಗೆ ಹೆದರಿದಂತೆ ಮಾಡುವ ಜನರು, ಹಿಂದಿನಿಂದ ಬೈಯುವ ರೀತಿಯೂ ಗೊತ್ತಾಯಿತು. ಅದರ ಜೊತೆಗೇ, ಹೈಸ್ಕೂಲಿನಲ್ಲಿ ಅನೇಕ ಶಿಕ್ಷಕರು ಬೀರಿದ ಪ್ರಭಾವದಿಂದಾಗಿ, ಮುಂದೆ ನಾನು ಪೊಲೀಸ್ ಆಗುವ ಬದಲು, ಶಿಕ್ಷಕ ಆಗಬೇಕು ಅನಿಸಿತು.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ. ಸರ್ಫ್‌ರಾಜ್ ಚಂದ್ರಗುತ್ತಿಯವರ ಪ್ರಭಾವಕ್ಕೊಳಗಾದ ಮೇಲಂತೂ, ಉಜ್ವಲ ಪ್ರಜೆಗಳನ್ನು ಸೃಷ್ಟಿಸುವ ಶಿಕ್ಷಕರ ಹುದ್ದೆಯೇ ಶ್ರೇಷ್ಠ ಅನ್ನಿಸಿತು.
ಆನಂತರದಲ್ಲಿ, ನನ್ನ ಮನಸ್ಸನ್ನು ಸಂಪೂರ್ಣವಾಗಿ ಶಿಕ್ಷಕನಾಗುವ ಕಡೆಗೆ ತಿರುಗಿಸಿಕೊಂಡೆ. ಈಗ, ಹೈಸ್ಕೂಲಿನಲ್ಲಿ ಆಂಗ್ಲಭಾಷಾ ಶಿಕ್ಷಕನಾಗಿರುವೆ. ಹತ್ತು ವರ್ಷಗಳ ಸೇವೆಯನ್ನು ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದೇನೆಂಬ ಹೆಮ್ಮೆಯಿದೆ. ಈ ಹುದ್ದೆಯಿಂದ ಸಂತೃಪ್ತಿ, ಸಮಾಧಾನ ಮತ್ತು ಗೌರವ- ಎಲ್ಲವೂ ದೊರಕಿದೆ.
* ರಾಘವೇಂದ್ರ ಈ. ಹೊರಬೈಲು