Advertisement

ತತ್‌ಕ್ಷಣ ಚರಂಡಿ ದುರಸ್ತಿಯೇ ಪರಿಹಾರ

09:51 AM Mar 27, 2022 | Team Udayavani |

ಪುತ್ತೂರು: ನಗರದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ, ಚರಂಡಿ ಅಸಮರ್ಪಕತೆಯಿಂದ ಅಲ್ಲಲ್ಲಿ ಕೃತಕ ನೆರೆ ಸಂಭವಿಸುತ್ತಿದ್ದು ಈ ಬಾರಿಯ ಮಳೆಗಾಲ ಪೂರ್ತಿಯಾಗಿ ಆವರಿಸಿಕೊಳ್ಳುವ ಮೊದಲೇ ಚರಂಡಿ ದುರಸ್ತಿ ನಡೆಸಿ ಸನ್ನದ್ಧವಾಗುವುದು ಸೂಕ್ತ.

Advertisement

ಈ ಬಾರಿ ಮಳೆಯ ಆಗಮನವಾಗಿದ್ದು ಇದು ಚಂಡ ಮಾರುತದ ಲಕ್ಷಣವಾಗಿದ್ದರೂ ನಗರದ ಚರಂಡಿ ದುರಸ್ತಿಗೆ ಎಚ್ಚರಿಕೆ ಗಂಟೆಯು ಆಗಿದೆ. ಕರಾವಳಿಗೆ ಮುಂಗಾರು ಮಾರುತ ಕಾಲಿಡುವ ಸಂದರ್ಭದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಸಿದ್ಧವಾಗಿದ್ದರೆ ಸಂಭಾವ್ಯ ಅಪಾಯ ತಡೆಗಟ್ಟಲು ಸಾಧ್ಯವಿದೆ.

ಕೃತಕ ಪ್ರವಾಹದ ಭೀತಿ

ಪ್ರತೀ ವರ್ಷವು ಮಳೆಗಾಲದಲ್ಲಿ ಪುತ್ತೂರು ನಗರವಾಸಿಗಳು ಕೃತಕ ನೆರೆಯ ಆತಂಕವನ್ನು ಒಡಲಲ್ಲಿ ಇರಿಸುಕೊಂಡೇ ದಿನ ದೂಡುತ್ತಾರೆ. ಉಪ್ಪಿನಂಗಡಿ ಪಟ್ಟಣ ಸಂಗಮ ಪ್ರದೇಶವಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿಯ ತಪ್ಪಲಲ್ಲೇ ಇದ್ದು ಇಲ್ಲಿ ಪ್ರತೀ ವರ್ಷ ಪ್ರವಾಹ ಉಂಟಾಗುತ್ತಿದ್ದ ಕಾರಣ 1927ರಲ್ಲಿ ಪುತ್ತೂರು ತಾಲೂಕು ಕೇಂದ್ರವನ್ನು ಉಪ್ಪಿನಂಗಡಿ ಯಿಂದ ಪುತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಪುತ್ತೂರು ಎತ್ತರ ಪ್ರದೇಶದಲ್ಲಿದ್ದರೂ ಮಳೆಯ ನೀರು ಹರಿದು ಇಳಿದು ಹೋಗುವಂಥ ಭೌಗೋಳಿಕತೆಯಿದೆ. ಆದರೆ ದಶಕದಿಂದ ಕಟ್ಟಡಗಳ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದಕ್ಕೆ ತಕ್ಕಂತೆ ಚರಂಡಿ ವ್ಯವಸ್ಥೆ ಆಗಿಲ್ಲ. ಇದರ ಪರಿಣಾಮವಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತದೆ.

ತೋಡಾಗುವ ಭೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ

Advertisement

ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿಯು ಚರಂಡಿ ನಿರ್ವಹಣೆ ಅಷ್ಟಕಷ್ಟಿದೆ. ಸಂಪ್ಯದಲ್ಲಿ ಭಾರೀ ಪ್ರಮಾಣದ ನೀರು ಹೆದ್ದಾರಿಗೆ ನುಗ್ಗುವ ವಿದ್ಯಮಾನ ಪ್ರತೀ ವರ್ಷವು ಸಂಭವಿಸುತ್ತಿದೆ. ಇಲ್ಲಿನ ಮೋರಿ ಮತ್ತು ತೋಡು ಸಣ್ಣದಾಗಿರುವುದು ಇದಕ್ಕೆ ಕಾರಣವಾಗಿತ್ತು. ಹೆದ್ದಾರಿ ಅಗಲೀಕರಣ ಸಂದರ್ಭ ಕೆಆರ್‌ ಡಿಸಿಎಲ್‌ನವರು ಇಲ್ಲಿ ಹೊಸ ಮೋರಿ ನಿರ್ಮಿಸದೆ ಹಳೆಯ ಮೋರಿಯನ್ನೇ ಮುಂದುವರಿಸಿದ್ದು ಸಮಸ್ಯೆ ಉಂಟಾಗಿದೆ. ಈ ಪ್ರದೇಶ ನಗರಸಭೆ ಮತ್ತು ಆರ್ಯಾಪು ಗ್ರಾ.ಪಂ. ಗಡಿ ಪ್ರದೇಶದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವ್ಯಾಪ್ತಿಗೆ ಸೇರಿದೆ. ಈ ಬಾರಿಯು ಕೃತಕ ನೆರೆಯ ಭೀತಿಯ ಆತಂಕವೂ ಇದೆ.

ಹೂಳು ತೆರವಿಗೆ ಸಕಾಲ

ನೆಲ್ಲಿಕಟ್ಟೆ, ಮಹಾಲಿಂಗೇಶ್ವರ ದೇಗುಲದ ಗದ್ದೆ ವಠಾರ, ಸೂತ್ರಬೆಟ್ಟು ಪರಿಸರ,ಏಳ್ಮುಡಿ,ತೆಂಕಿಲದ ಕೆಲವು ಭಾಗಗಳು, ದರ್ಬೆ ಮೊದಲಾದೆಡೆ ಕಡೆ ಕೃತಕ ನೆರೆ ಕಾಣಿಸಿಕೊಳ್ಳುತ್ತದೆ. ಮುಖ್ಯ ರಸ್ತೆ ಮತ್ತು ಉಪ ರಸ್ತೆಗಳ ಪ್ರಮುಖ ಚರಂಡಿಗಳಲ್ಲಿ ಹೂಳು ತುಂಬುವುದು, ಚರಂಡಿಗಳು ಇಕ್ಕಟ್ಟಾಗಿರುವುದು, ಮನೆ, ವಾಣಿಜ್ಯ ಕಟ್ಟಡಗಳಿಂದ ಚರಂಡಿಗೆ ಕಸ ತುಂಬಿಸುವುದು ಮುಂತಾದ ಕಾರಣಗಳಿಂದ ಮಳೆ ನೀರು ಸರಾಗವಾಗಿ ಹರಿಯದೆ ಜನವಸತಿ ಪ್ರದೇಶದತ್ತ ನುಗ್ಗುತ್ತದೆ. ಹಾಗಾಗಿ ಬೇಸಗೆಯಲ್ಲೇ ಹೂಳು, ಕಸ ಕಡ್ಡಿ, ಪೊದೆ ತೆರವು ಮಾಡಿದರೆ ಸಮಸ್ಯೆ ಆಗದು. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪದ ನೆಲ್ಲಿಕಟ್ಟೆ ಶಾಲೆ ರಸ್ತೆಯಲ್ಲಿ ನೀರು ಹರಿದು ಬಂದು ಬಸ್‌ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಬೀಡು ಬಿಡುತ್ತದೆ. ಈ ಸಮಸ್ಯೆ ತಪ್ಪುತಿಲ್ಲ. ಕೆಲವು ತಗ್ಗು ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಾದ ಕಾರಣ ಮಳೆ ನೀರು ಹರಿಯದೆ ಕೃತಕ ತೋಡಿನ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಚರಂಡಿ ದುರಸ್ತಿಗೆ 40 ಲಕ್ಷ ರೂ

ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ಮತ್ತು 31 ವಾರ್ಡ್‌ಗಳಲ್ಲಿರುವ ಚರಂಡಿಯ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಲು ಅನುದಾನ ಮೀಸಲಿರಿಸಲಾಗಿದೆ. ಇಲ್ಲಿ ಹೂಳೆತ್ತಿ ಮಳೆಗಾಲಕ್ಕೆ ಮುನ್ನ ಸಿದ್ಧಗೊಳಿಸುವ ಉದ್ದೇಶದಿಂದ 40 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ರಾಜಕಾಲುವೆಗೆ 10 ಲಕ್ಷ, 1ರಿಂದ 5ನೇ ವಾರ್ಡ್‌ವರೆಗೆ 4.30 ಲಕ್ಷ, 6ರಿಂದ 9ನೇ ವಾರ್ಡ್‌ ವರೆಗೆ 4.45 ಲಕ್ಷ, 10ರಿಂದ 14ನೇ ವಾರ್ಡ್‌ವರೆಗೆ 4.96 ಲಕ್ಷ, 15ರಿಂದ 18ನೇ ವಾರ್ಡ್‌ವರೆಗೆ 4.39 ಲಕ್ಷ 19ರಿಂದ 23ನೇ ವಾರ್ಡ್‌ ವರೆಗೆ 4.45 ಲಕ್ಷ, 34ರಿಂದ 28ರವರೆಗೆ 4.25 ಲಕ್ಷ, 29ರಿಂದ 31ನೇ ವಾರ್ಡ್‌ವರೆಗೆ 3.20 ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಿದ್ದು ತತ್‌ಕ್ಷಣ ಕಾಮಗಾರಿ ನಡೆಸಿದರೆ ಎಲ್ಲರಿಗೂ ಒಳ್ಳೆಯದೆ. ಕಳೆದ ವರ್ಷ ಮಳೆ ಪ್ರಾರಂಭಗೊಂಡಿದ್ದರೂ ಕೆಲವು ವಾರ್ಡ್‌ಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next