Advertisement

“ಜಾಗ ಸಮಸ್ಯೆ ನಿವಾರಣೆಯಾದಲ್ಲಿ ಕೇಪು ಸಬ್‌ಸ್ಟೇಶನ್‌ ಸ್ಥಾಪನೆ’

08:32 PM Aug 21, 2019 | Team Udayavani |

ವಿಟ್ಲ: ಜಾಗದ ಸಮಸ್ಯೆ ನಿವಾರಣೆಯಾದ ಕೂಡಲೇ ಮೆಸ್ಕಾಂ ಕೇಪು ಸಬ್‌ಸ್ಟೇಶನ್‌ ಸ್ಥಾಪನೆಗೆ ಮುಂದಾಗಲಿದೆ. ಅಪಾಯಕಾರಿ ಮರ ಕಡಿಯುವ ಜವಾಬ್ದಾರಿ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು. ಮೆಸ್ಕಾಂ ಜವಾಬ್ದಾರಿಯಲ್ಲ. ಪೂರಕ ಸಹಕಾರ ಮೆಸ್ಕಾಂ ನೀಡಲಿದೆ. ಕಂಬ ಸ್ಥಳಾಂತರ ಸಮಸ್ಯೆ ಲೋಕೋಪಯೋಗಿ ಹಾಗೂ ಮೆಸ್ಕಾಂ ಗುತ್ತಿಗೆದಾರರ ನಡುವಿನ ವಿಚಾರವಾಗಿದೆ. ಮಾದರಿ ವಿದ್ಯುತ್‌ ಗ್ರಾಮ ಯೋಜನೆ ಬದಲಾಗಿ ಬೇರೆ ಹೊಸ ಯೋಜನೆಗೆ ಕ್ರಮ ಜರಗಿಸಲಾಗುವುದು ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ತಿಳಿಸಿದರು.

Advertisement

ಬುಧವಾರ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆ ನನೆಗುದಿಗೆ
ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಮಾದರಿ ವಿದ್ಯುತ್‌ ಗ್ರಾಮ ಯೋಜನೆ ನನೆಗುದಿಗೆ ಬಿದ್ದಿದೆ. ಕಬಕ-ಸುರತ್ಕಲ್‌ ರಸ್ತೆ ಕಾಮಗಾರಿ ವೇಳೆ ರಸ್ತೆ ಬದಿಯ ವಿದ್ಯುತ್‌ ಕಂಬಗಳನ್ನು ಮೆಸ್ಕಾಂ ಹಾಗೂ ಲೋಕೋಪಯೋಗಿ ಇಲಾಖೆಯ ನಡುವಿನ ಹೊಂದಾಣಿಕೆ ಸಮಸ್ಯೆಯಿಂದ ತೆರವುಗೊಳಿಸಿಲ್ಲ. ಅನಾಹುತ ಮೊದಲೇ ಎಚ್ಚೆತ್ತುಕೊಂಡರೆ ಸಮಸ್ಯೆ ಬರುವುದಿಲ್ಲ ಎಂದು ಸಲಹೆ ನೀಡಿದರು.

ಗ್ರಾಹಕ‌ರಿಗೆ ತೊಂದರೆ
ಮಾಣಿಲ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲು ಮಾತನಾಡಿ, ಮಾಣಿಲ ಗ್ರಾಮವನ್ನು ಕನ್ಯಾನ ಶಾಖೆಗೆ ಸೇರಿಸಲಾಗಿದೆ. ಇದರಿಂದ ಗ್ರಾಹಕ‌ರಿಗೆ ತೊಂದರೆಯಾಗಿದೆ. ತೋಟದ ಮಧ್ಯೆ ತಂತಿಗಳು ಹಾದುಹೋಗುತ್ತಿವೆ. ಅವುಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿ ಹಾಕಬೇಕು ಎಂದು ಆಗ್ರಹಿಸಿದರು.

ಹಳೆ ಎಚ್‌ಟಿ ತಂತಿ
ಪುಣಚ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ ಶೆಟ್ಟಿ ಬೈಲುಗುತ್ತು ಮಾತನಾಡಿ, ಪುಣಚ ಗ್ರಾಮದಲ್ಲಿ ಹಳೆ ಎಚ್‌ಟಿ ತಂತಿ ಇದ್ದು, ಅಪಾಯ ಆಹ್ವಾನಿಸುತ್ತಿದೆ. ಈ ಬಗ್ಗೆ ಗ2 ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

Advertisement

ಶಾಲೆ ಅಂಗಳದಲ್ಲಿ ವಿದ್ಯುತ್‌ ಪರಿವರ್ತಕ
ಕರೋಪಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಆರ್‌. ಶೆಟ್ಟಿ ಅವರು ಕರೋಪಾಡಿ ಗ್ರಾಮದ ಪದ್ಯಾಣ ಶಾಲೆ ಅಂಗಳದಲ್ಲಿ 11 ಕೆವಿ ವಿದ್ಯುತ್‌ ಪರಿವರ್ತಕ, ತಂತಿ ಬದಲಾಯಿಸುವಂತೆ ಮನವಿ ಸಲ್ಲಿಸಿದರು.

ವಿದ್ಯುತ್‌ ಸಮಸ್ಯೆಗಳಿಗೆ ಸಂಬಂಧಿಸಿ ವಿವಿಧ ಗ್ರಾಮಗಳ ಬಳಕೆದಾರರು ದೂರು, ಅಹವಾಲು ಸಲ್ಲಿಸಿದರು. ಜಿ.ಪಂ. ಸದಸ್ಯ ಎಂ.ಎಸ್‌.ಮಹಮ್ಮದ್‌, ವಿಟ್ಲ ಪ.ಪಂ. ಅಧ್ಯಕ್ಷೆ ದಮಯಂತಿ, ಬಂಟ್ವಾಳ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಚಂದ್ರ, ವಿಟ್ಲ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿ ಯರ್‌ ಪ್ರವೀಣ್‌ ಜೋಷಿ ಉಪಸ್ಥಿತರಿದ್ದರು.

ಕಂದಾಯ ಇಲಾಖೆ – ಗೇರು ನಿಗಮದ ಜಾಗ
ಸಾಮಾಜಿಕ ಕಾರ್ಯಕರ್ತ ರಾಮಣ್ಣ ಶೆಟ್ಟಿ ಪಾಲಿಗೆ ಮಾತನಾಡಿ, ಕೇಪು ಸಬ್‌ಸ್ಟೇಶನ್‌ ನಿರ್ಮಾಣ ಆಗಲಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಕೆಪಿಟಿಸಿಎಲ್‌ ಅಧೀಕ್ಷಕ ರವಿಕಾಂತ್‌ ಕಾಮತ್‌, ಈ ಜಾಗ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ್ದು, ನಮ್ಮ ಬೇಡಿಕೆ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ. ಬೇರೆ ಜಾಗ ತೋರಿಸಿಕೊಟ್ಟರೆ ಮಾಡಲು ಸಿದ್ಧ ಎಂದು ತಿಳಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಕೃಷಿಕ ಜಯಶ್ಯಾಂ ನೀರ್ಕಜೆ, ಇದು ಅರಣ್ಯ ಇಲಾಖೆಯ ಜಾಗವಲ್ಲ. ಕಂದಾಯ ಇಲಾಖೆ ಹಾಗೂ ಗೇರು ನಿಗಮದ ಜಾಗವಾಗಿದ್ದು, ಸ್ವಲ್ಪ ಜಾಗ ಮಾತ್ರ ಮೂವರು ವ್ಯಕ್ತಿಗಳ ಕುಮ್ಕಿಯಾಗಿದೆ. ಸಂಬಂಧಿತ ಭೂ ದಾಖಲೆಗಳೊಂದಿಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ

ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಇತ್ಯರ್ಥ ಮಾಡಿದರೆ ಸಮಸ್ಯೆ ಮುಗಿಯುತ್ತದೆ ಎಂದು ತಿಳಿಸಿದರು.

ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ, ಮೆಸ್ಕಾಂ ಗೇರು ನಿಗಮಕ್ಕೆ ಹಣ ಪಾವತಿಸಿದರೆ ಜಾಗವನ್ನು ನೀಡಲು ಅವರು ತಯಾರಿದ್ದಾರೆ ಎಂದು ನಿಗಮ ತಿಳಿಸಿದೆ. ಈ ಬಗ್ಗೆ ಮೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದರು. ರಾಜೀವ ಭಂಡಾರಿ ಕೇಪು ಮಾತನಾಡಿ, ಕೇಪು ಗ್ರಾಮದಲ್ಲಿ ಸಬ್‌ ಸ್ಟೇಶನ್‌ ಅಗತ್ಯವಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಅದು ಆಗದಿರಲು ಇರುವ ಕಾರಣದ ಬಗ್ಗೆ ಸರಕಾರದ ಜತೆ ಮಾತುಕತೆ ನಡೆಸಿ ಇತ್ಯರ್ಥ ಮಾಡಲಾಗುವುದು ಎಂದರು.

ಅಧೀಕ್ಷಕ ಮಂಜಪ್ಪ ಮಾತನಾಡಿ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ, ಜಾಗದ ಗೊಂದಲ ನಿವಾರಿಸಬೇಕು
ಎಂದು ಸೂಚಿಸಿದರು.

ನಿರಂತರ ಸ್ಪಂದನೆ
ಮೆಸ್ಕಾಂ ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಿದೆ. ಒಂದು ಜನಸಂಪರ್ಕ ಸಭೆಯಲ್ಲಿ ಬಂದ ದೂರುಗಳು ಮುಂದಿನ ಸಭೆಗೆ ಈಡೇರಿಕೆಯಾಗಬೇಕು.
– ಮಂಜಪ್ಪ, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next