Advertisement

15 ವರ್ಷಗಳಿಂದ ಗ್ರಾಮಸ್ಥರಿಂದಲೇ ಹಲಗೆ ಅಳವಡಿಕೆ

08:56 PM Jan 27, 2021 | Team Udayavani |

ವೇಣೂರು: ಗುಂಡೂರಿ ಗ್ರಾಮದ ಪೊಕ್ಕಿ ಬಳಿಯ ಬೆಟ್ಟು ಹಾಗೂ ಬಂಟ್ವಾಳ ತಾಲೂಕಿನ ಬಟ್ಟೇರಿ ಸಂಪರ್ಕದ ಕಿಂಡಿ ಅಣೆಕಟ್ಟಿಗೆ 15 ವರ್ಷಗಳಿಂದ ಉಭಯ ತಾಲೂಕಿನ ಗ್ರಾಮಸ್ಥರೇ ಹಲಗೆ ಅಳವಡಿಸಿ ಜಲ ಸಮೃದ್ಧಿಯ ಮಹತ್ವ ಕಾರ್ಯ ನಡೆಸುತ್ತಿದ್ದಾರೆ.

Advertisement

ಉಭಯ ತಾಲೂಕಿನ ಗ್ರಾಮಸ್ಥರ ಬೇಡಿಕೆ ಯಂತೆ 2005ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಕಿಂಡಿ ಅಣೆಕಟ್ಟು ಮಂಜೂರುಗೊಂಡಿತ್ತು.ಅಂದಿನಿಂದ ನಿರಂತರ 15 ವರ್ಷಗಳಿಂದ ಸ್ಥಳೀಯ ಮುಖಂಡ ಹರೀಶ್‌ ಕುಮಾರ್‌ ನೇತೃತ್ವದಲ್ಲಿ 25ರಿಂದ 30 ಮಂದಿ ಗ್ರಾಮಸ್ಥರುಹಲಗೆ ಅಳವಡಿಸಿ ನೀರನ್ನು ಸಂಗ್ರಹಿಸುತ್ತಿದ್ದು, ಸರಕಾರಿ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಬಳಕೆ ಮಾಡಿಕೊಂಡಿರುವುದು ಮಾದರಿ ಎನಿಸಿಕೊಂಡಿದೆ.

205 ಅಡಿ ಉದ್ದದ ಈ ಕಿಂಡಿ ಅಣೆಕಟ್ಟು 18 ಕಿಂಡಿಗಳನ್ನು ಹೊಂದಿದೆ. 2 ಕಿ.ಮೀ. ಉದ್ದಕ್ಕೆ ನೀರು ಸಂಗ್ರಹಗೊಳ್ಳುತ್ತಿದೆ. ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ಪೊಕ್ಕಿ, ದರ್ಖಾಸು, ಹೇಡೆ¾, ಅಂಪುಂಗೇರಿ, ನಡುಕುಮೇರು, ಬಚ್ಚಿರ್‌ದಡ್ಡ, ಕಜೆ ಹಾಗೂ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬಟ್ಟೇರಿ, ಆನೆದಡ್ಡ, ತಾರಬರಿ, ಕುಜುಂಬೊಟ್ಟು, ಇನ್ನಿತರ ಗ್ರಾಮದ ಕೃಷಿಕರು ಪ್ರಯೋಜನ ಪಡೆಯುತ್ತಿದ್ದಾರೆ. ಬೇಸಿಗೆ ಬಂತೆಂದರೆ ಸಾಕು ನೀರಿನ ಕೊರತೆ ಎದುರಾಗುತ್ತಿದ್ದ ಈ ಪ್ರದೇಶದಲ್ಲಿ ಇದೀಗ ಅಂತರ್ಜಲ ವೃದ್ಧಿಯಿಂದ ಸುತ್ತ ಲಿನ ನೂರಾರು ಕುಟುಂಬಗಳ ಬಾವಿ, ಕೊಳವೆ ಬಾವಿಗಳಲ್ಲಿ ಉತ್ತಮ ನೀರಿದೆ.

ತಡೆಗೋಡೆ ಬೇಡಿಕೆ :

ಈ ಕಿಂಡಿ ಅಣೆಕಟ್ಟಿಗೆ ಬಂಟ್ವಾಳ ತಾ|ನ ಇಕ್ಕೆಲದಲ್ಲಿ ಕೃಷಿಭೂಮಿಗೆ ತೊಂದರೆಯಾಗದ ರೀತಿಯಲ್ಲಿ ಸುಮಾರು 1 ಕಿ.ಮೀ. ಉದ್ದದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಬೆಳ್ತಂಗಡಿ ತಾ|ನ ಇಕ್ಕೆಲದಲ್ಲಿ ತಡೆಗೋಡೆ ನಿರ್ಮಾಣ ಆಗಿಲ್ಲ. ಕೃಷಿ ಭೂಮಿಗೆ ತೊಂ ದರೆ ಆಗಿದೆ ಎಂಬುದು ರೈತರ ಅಳಲು.

Advertisement

ಹರೀಶ್‌ ಕುಮಾರ್‌ ಅವರ ಮುತುರ್ವಜಿಯಿಂದ 15 ವರ್ಷಗಳಿಂದ ನಿರಂತರ ಹಲಗೆ ಅಳವಡಿಸುತ್ತಿದ್ದೇವೆ. ಸಣ್ಣ ನೀರಾವರಿ ಇಲಾಖೆಯಿಂದ ಹಲಗೆ ಒದಗಿಸಿದ್ದು, ಇದೀಗ ಹಾಳಾಗಿರುವ ಹಲಗೆಗೆ ಬದಲು ಒದಗಿಸುವುದಾಗಿ ಎಂಜಿನಿಯರ್‌ ಪ್ರಸನ್ನ ಕುಮಾರ್‌ ಭರವಸೆ ನೀಡಿದ್ದಾರೆ ಎಂದು ಪ್ರಗತಿಪರ ಕೃಷಿಕ  ವಿಶ್ವನಾಥ ಕುಲಾಲ್‌ ತಾರಬರಿ ತಿಳಿಸಿದ್ದಾರೆ.

ಬೇರೆ ಕಡೆ ಪ್ರಸ್ತಾವ ಸಲ್ಲಿಕೆಯಾಗಿದ್ದ ಅಣೆಕಟ್ಟನ್ನು ಅಲ್ಲಿನ ಜನತೆಯ ವಿರೋಧದ ಹಿನ್ನೆಲೆಯಲ್ಲಿ ತನ್ನ ಪಟ್ಟಾ ಜಾಗದಲ್ಲಿ ದಿ| ಪದ್ಮ ಪೂಜಾರಿ ಹಾಗೂ ಬಟ್ಟೇರಿಯ ರಾಜವರ್ಮ ಬಳ್ಳಾಲ್‌ ಅವಕಾಶ ಮಾಡಿಕೊಟ್ಟಿರುವುದು ಪ್ರಯೋಜನ ಆಗಿದೆ ಎನ್ನುತ್ತಾರೆ ಸ್ಥಳೀಯರು.

ನದಿಯಲ್ಲಿ ಕಟ್ಟಗಳ ನಿರ್ಮಾಣದಿಂದ ಕೆಳಗಿನ ಭಾಗದ ಜನತೆಗೆ ನೀರು ಲಭಿಸುವುದಿಲ್ಲ ಎಂಬ ಅಪನಂಬಿಕೆ ಅನೇಕರಲ್ಲಿದೆ. ಆದರೆ ಹರಿದುಹೋಗುವ ನೀರನ್ನು ನಿಲ್ಲಿಸುವುದರಿಂದ ಕೆಳಭಾಗದ ಕೃಷಿಕರಿಗೂ ಬಹಳಷ್ಟು ಪ್ರಯೋಜನ ಆಗಲಿದೆ. ಸತತ ಮೂರು ವರ್ಷಗಳ ಕಟ್ಟ ನಿರ್ಮಾಣದ ಬಳಿಕ ಸ್ವತಃ ಕೃಷಿಕರಿಗೆ ಇದರ ಅನುಭವವಾಗುತ್ತದೆ.-ಹರೀಶ್‌ ಕುಮಾರ್‌ ಪೊಕ್ಕಿ, ಪ್ರಗತಿಪರ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next