ಮುಂಬಯಿ, ಜೂ. 10: ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (ಎಂಎಂಆರ್‌ಡಿಎ) ಮಳೆಗಾಲಕ್ಕಾಗಿ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ನಿಯಂತ್ರಣ ಕೊಠಡಿಯು ಮಳೆ ಸಂಬಂಧಿತ ದೂರುಗಳ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದೆ,
ರಾಜ್ಯ ಸರಕಾರ, ಬಿಎಂಸಿ, ಪೊಲೀಸ್ ಮುಂತಾದ ವಿವಿಧ ವಿಪತ್ತು ನಿಯಂತ್ರಣ ಸಂಸ್ಥೆಗಳೊಂದಿಗೆ ಸಂವಹನ ನಡೆಸಲಿದೆ ಹಾಗೂ ಮಾಹಿತಿ ಮತ್ತು ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲಿದೆ. ನಿಯಂತ್ರಣ ಕೊಠಡಿ ಅಕ್ಟೋಬರ್ 15 ರವರೆಗೆ ಕಾರ್ಯನಿರ್ವಹಿಸಲಿದೆ. ನಿಯಂತ್ರಣ ಕೊಠಡಿಯು ಮೂರು ಶಿಫ್ಟ್ ಳೊಂದಿಗೆ ದಿನದ 24 ತಾಸು ಸೇವೆಗೆ ಲಭ್ಯವಾಗಲಿದೆ. ಪ್ರಾಧಿಕಾರವು ಜಾರಿಗೆ ತರುತ್ತಿರುವ ವಿವಿಧ ಯೋಜನಾ ಸ್ಥಳಗಳಲ್ಲಿ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎಂಎಂಆರ್ ಡಿಎ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ನಿಯಂತ್ರಣ ಕೊಠಡಿಯ ಅಧಿಕಾರಿಗಳು ವಿವಿಧ ಯೋಜನಾ ಸ್ಥಳಗಳಲ್ಲಿ ಮಳೆನೀರು ಸುಗಮವಾಗಿ ಹರಿಯುವಂತೆ ನೋಡಿಕೊಳ್ಳಲ್ಲಿದ್ದಾರೆ.
ಗುತ್ತಿಗೆದಾರರಿಗೆ ಸೂಚನೆ : ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಬ್ಯಾರಿಕೇಡಿಂಗ್, ಹಾನಿಗೊಳಗಾದ ರಸ್ತೆಗಳು ಮತ್ತು ಕಾಮಗಾರಿಗಳನ್ನು ಪುನಃ ಸ್ಥಾಪಿಸುವುದು, ರಸ್ತೆಗಳಲ್ಲಿರುವ ಅವಶೇಷಗಳನ್ನು ತೆರವುಗೊಳಿಸುವುದು ಮತ್ತು ವಿಲೇವಾರಿ ಮಾಡುವವರೆಗೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಳ್ಳಲಾಗಿದೆ. ಪ್ರವಾಹ ನೀರಿನ ಚರಂಡಿಗಳಿಗೆ ಯಾವುದೇ ಸಂಪರ್ಕವಿಲ್ಲದ ಮತ್ತು ನೀರು ಜಮಾವಣೆಯಾಗುವಂತಹ ಸ್ಥಳಗಳಲ್ಲಿ ಸಾಕಷ್ಟು ಸಾಮರ್ಥ್ಯದ ನೀರಿನ ಪಂಪ್ ಗಳನ್ನು ಅಳವಡಿಸುವಂತೆಯೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಎಂಎಂಆರ್‌ಡಿಎಯ ಮಹಾನಗರ ಆಯುಕ್ತ ಆರ್. ಎ. ರಾಜೀವ್ ಅವರು ಹೇಳಿದ್ದಾರೆ. ಮುಂಬಯಿಗರಿಗೆ ಈ ನಿಯಂತ್ರಣ ಕೊಠಡಿಯಿಂದ ವಿವಿಧ ಅಂಶಗಳ ಬಗ್ಗೆ ಸಹಾಯ ಪಡೆಯಲು ಸಾಧ್ಯವಾಗಲಿದೆ ಎಂದವರು ತಿಳಿಸಿದ್ದಾರೆ. ಎಂಎಂಆರ್ ಡಿಎ ವ್ಯಾಪ್ತಿಯಲ್ಲಿ ಮರಗಳನ್ನು ಕಿತ್ತುಹಾಕುವುದು, ನೀರು ಜಮಾವಣೆ, ಅಪಘಾತಗಳು, ಸಂಚಾರ ಸಮಸ್ಯೆಗಳು, ರಸ್ತೆ, ಗುಂಡಿಗಳು ಮುಂತಾದ ಸಮಸ್ಯೆಗಳ ಬಗ್ಗೆ ಇದರಲ್ಲಿ ವರದಿ ಮಾಡಬಹುದಾಗಿದೆ.
ದೂರವಾಣಿ ಸಂಖ್ಯೆಗಳು : ಅಸಾಮಾನ್ಯ ಘಟನೆಗಳು ಅಥವಾ ಸನ್ನಿಹಿತ ಅಪಾಯಗಳ ಬಗ್ಗೆ ಮಾಹಿತಿಯನ್ನು ಕೂಡ ನಿಯಂತ್ರಣ ಕೊಠಡಿಯ ಅಧಿಕಾರಿಗಳು ಸ್ವೀಕರಿಸಲಿದ್ದಾರೆ. ನಿಯಂತ್ರಣ ಕೊಠಡಿಯು ರೈಲ್ವೇ, ಮಹಾನಗರ ಪಾಲಿಕೆ, ಸಂಚಾರ ಪೊಲೀಸ್, ಬೆಸ್ಟ್, ಅಗ್ನಿಶಾಮಕ ದಳ ಮತ್ತು ಇತರ ಏಜೆನ್ಸಿಗಳ ಜತೆಗೂಡಿ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಡೈರೆಕ್ಟ್ ಲೈನ್ ( 022-26591241), ಇಂಟರ್ಕಾಮ್ (022-26594176), ಮೊಬೈಲ್ ಸಂಖ್ಯೆ (8657402090)