ಬೆಂಗಳೂರು: “ನನ್ನ ಬಾಲ್ಯವೆಲ್ಲಾ ಆಸ್ಪತ್ರೆಯ ಹಾಸಿಗೆ ಮೇಲೆ ನೋವಿನಿಂದ ಕಳೆದೆ. ಹೀಗಾಗಿ ಅಪ್ಪ, ಅಮ್ಮ, ಅಣ್ಣ, ತಂಗಿಯರ ಪ್ರೀತಿಯ ಅಪ್ಪುಗೆ ಸಿಗಲೇ ಇಲ್ಲ’ ಎಂದು ಹೇಳುತ್ತಲೇ ಅಂತಾರಾಷ್ಟ್ರೀಯ ಕ್ರೀಡಾಪಟು, ಪ್ಯಾರಾ ಅಥ್ಲಿಟ್ ಮಾಲತಿ ಹೊಳ್ಳ ಭಾವುಕರಾದರು.
ನಯನ ಸಭಾಂಗಣದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ತಮ್ಮ ಬದುಕಿನ ನೋವು-ನಲಿವುಗಳನ್ನು ಹಂಚಿಕೊಂಡರು.
ಅಂಗವೈಕಲ್ಯ ಯಾವತ್ತೂ ನನ್ನ ಗುರಿ ಸಾಧನೆಗೆ ಅಡ್ಡಿ ಬರಲಿಲ್ಲ. ಆ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿ ಕ್ರೀಡಾ ಕ್ಷೇತ್ರದಲ್ಲಿ ಅರಳಿದೆ. ಕಾಲೃಏಜು ಹಂತದಲ್ಲಿ ಸಹಪಾಠಿಗಳು ತೋರಿದ ಕನಿಕರಕ್ಕೆ ನೊಂದು ಓದು ನಿಲ್ಲಿಸುವ ನಿರ್ಧಾರಕ್ಕೆ ಬಂದೆ ಆದರೆ, ಆಗ ಅಪ್ಪ ಆಡಿದ ಮಾತುಗಳು ನನ್ನನನು ಮತ್ತೆ ಶಿಕ್ಷಣದ ಹಳಿಗೆ ಹಚ್ಚಿದವು ಎಂಬ ಆತ್ಮ ವಿಶ್ವಾಸದ ನುಡಿಗಳನ್ನಾಡಿದರು.
ಹುಟ್ಟಿದ 15 ತಿಂಗಳಿಗೆ ನಾನು, ಪೋಲಿಯೋ ರೋಗಕ್ಕೆ ಒಳಗಾದೆ. ಎರಡು ವರ್ಷಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡೆ. ವೈದ್ಯರ ಸಲಹೆ ಮೇರೆಗೆ ಚೆನ್ನೈನ ಆಸ್ಪತ್ರೆಯಲ್ಲಿ 15 ವರ್ಷಗಳ ಕಾಲ ಚಿಕಿತ್ಸೆಪಡೆದೆ. ಓದು ಕೂಡ ಚಿಕಿತ್ಸೆ ಜತೆಗೇ ಸಾಗಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗೇ ಬರೆದು ಪ್ರಥಮ ರ್‍ಯಾಂಕ್ ಪಡೆದಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರು.
ಕಾಲೇಜು ತೊರೆವ ನಿರ್ಧಾರ: ಪ್ರೌಢಶಾಲೆ ಶಿಕ್ಷಣ ಮುಗಿಸಿದ ನಂತರ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿಗೆ ಸೇರಿದೆ. ಪ್ರಾರಂಭದಲ್ಲಿ ಸಹಪಾಠಿಗಳು ಹಾಗೂ ಶಿಕ್ಷಕರು ತೋರಿಸುತ್ತಿದ್ದ ಕನಿಕರ ನನ್ನ ಮನಸಿಗೆ ನೋವು ತರಿಸಿತು. ಈ ದೃಷ್ಟಿಯಿಂದಲೇ ಒಂದು ಹಂತದಲ್ಲಿ ಕಾಲೇಜು ಬಿಡಬೇಕೆಂದು ನಿರ್ಧರಿಸಿದೆ. ಆದರೆ ಅಪ್ಪನ ಮಾತುಗಳಿಂದ ಪ್ರೇರಣೆಗೊಂಡು ವಿದ್ಯಾಭ್ಯಾಸ ಮುಂದುವರಿಸಿದೆ ಎಂದು ಸ್ಮರಿಸಿದರು.
ಖುಷಿಗಾಗಿ ಕ್ರೀಡೆ: “ಖುಷಿಗಾಗಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದೆ. ಆ ಕ್ರೀಡೆಯಲ್ಲಿ ಎರಡು ಚಿನ್ನದ ಪದಕ ಗೆದ್ದೆ. ಈ ಗೆಲುವಿನ ಸ್ಫೂರ್ತಿಯಿಂದಾಗಿ ಕ್ರೀಡೆಯನ್ನೇ ನನ್ನ ಆಸಕ್ತಿ ಕ್ಷೇತ್ರವನ್ನಾಗಿ ಆಯ್ದುಕೊಂಡು ಬೆಳೆದೆ. ಪರಿಶ್ರಮ ಪಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇಲ್ಲಿಯವರೆಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ 397 ಚಿನ್ನ, 27 ಬೆಳ್ಳಿ, 5 ಕಂಚಿನ ಪದಕ ಗಳಿಸಿದ್ದೇನೆ,’ ಎಂದು ಹೇಳಿದರು.
ನಾನು 30ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಪ್ರತಿ ಚಿಕಿತ್ಸೆ ನಂತರ ವೈದ್ಯಾಧಿಕಾರಿಗಳು ಒಂದು ತಿಂಗಳು ವಿರಾಮಕ್ಕೆ ಸೂಚಿಸುತ್ತಾರೆ. ಆದರೆ, ನಾನು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯನ್ನು ನಂಬುವವಳು. ಹೀಗಾಗಿ, ಬೆಳಗ್ಗೆ 4.30ಕ್ಕೆ ಕೆಲಸ ಪ್ರಾರಂಭಿಸಿದರೆ ರಾತ್ರಿ 11.30ರವರೆಗೆ ನಿರಂತರ ಚಟುವಟಿಕೆಗಳಲ್ಲಿ ತೊಡುಗುತ್ತೇನೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿ ಬನಶಂಕರಿ ಅಂಗಡಿ ಉಪಸ್ಥಿತರಿದ್ದರು.