Advertisement

ನೌಕಾದಳ ಸೇರ್ಪಡೆಗೆ ಯುವ ಸಮೂಹಕ್ಕೆ ಪ್ರೇರಣೆ

11:22 PM May 03, 2019 | Team Udayavani |

ಮಡಿಕೇರಿ: ಭಾರತೀಯ ನೌಕಾದಳದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿತ ಭಾರತ ದರ್ಶನ ಕಾರ್ಯಕ್ರಮದಡಿ ಐಎನ್‌ಎಸ್‌ ಶಿವಾಜಿ ನೌಕೆಯ 14 ಮಂದಿ ಅಧಿಕಾರಿಗಳ ತಂಡ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡಿತು.

Advertisement

ಐಎನ್‌ಎಸ್‌ ಶಿವಾಜಿ ತಂಡದ ನೇತೃತ್ವವನ್ನು ಕಮಾಂಡರ್‌ ವಿ.ಸೀತಾರಾಂ ವಹಿಸಿದ್ದು, ಕಮಾಂಡರ್‌ಗಳಾದ ಗೌರವ್‌ ಸೇಥ್‌, ಅಭಿಮನ್ಯು ದಲಾಲ್, ಶ್ಯಾಂ ಕುಮಾರ್‌ ಕೆ., ಲೆಫ್ಟಿನೆಂಟ್ ಕಮಾಂಡರ್‌ಗಳಾದ ಸತೀಶ್‌ ಕುಮಾರ್‌ ಮತ್ತು ಜಿ.ಜಗನ್ನಾಥ್‌, ಲೆಫ್ಟಿನೆಂಟ್‌ಗಳಾದ ಸುದೀಪ್‌ ಭಟ್ಟಾರಾಯಿ ಮತ್ತು ಎಂ.ಕೆ.ಗೌತಮ್‌, ಅಖೀಲ್, ಹೆಚ್.ದಹಿಯ, ಮಂದೀಪ್‌ ಸಿಂಗ್‌, ಆರ್‌. ಆರ್‌.ಚೌಹಾಣ್‌, ಇ.ಸಿ.ಪಾಲಾಸ್ಕರ್‌ ಮತ್ತು ಎಲ್ವಿಸ್‌ ಮ್ಯಾಥ್ಯೂ ತಂಡದ ಸದಸ್ಯರುಗಳಾಗಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ನಗರದ ಸನ್ನಿಸೈಡ್‌ನ‌ ಜನರಲ್ ಕೆ.ಎಸ್‌.ತಿಮ್ಮಯ್ಯ ಸ್ಮಾರಕ ಭವನಕ್ಕೆ ಶಿವಾಜಿ ತಂಡದ ಅಧಿಕಾರಿಗಳು ಭೇಟಿ ನೀಡಿದ್ದಲ್ಲದೆ, ಬಳಿಕ ಕೂಡಿಗೆಯ ಸೈನಿಕ ಶಾಲೆ, ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳಿಗೂ ಭೇಟಿ ನೀಡಿತು. ಈ ಎಲ್ಲಾ ಭೇಟಿಯ ಪ್ರಮುಖ ಉದ್ದೇಶ, ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಳ್ಳಲು ಯುವ ಸಮೂಹಕ್ಕೆ ಪ್ರೇರಣೆ ನೀಡುವುದೇ ಆಗಿತ್ತು.

45 ದಿನಗಳ ಕಾರ್ಯಕ್ರಮ- ಐಎನ್‌ಎಸ್‌ ಶಿವಾಜಿ ನೌಕೆಯ ತಂಡ ಭಾರತ ದರ್ಶನ ಕಾರ್ಯಕ್ರಮದಡಿ ಒಟ್ಟು 45 ದಿನಗಳ ಕಾಲ ರಾಷ್ಟ್ರದ ವಿವಿಧ ಭಾಗಗಳಿಗೆ ತೆರಳಿ ಯುವ ಸಮೂಹದಲ್ಲಿ ನೌಕಾದಳ ಸೇರ್ಪಡೆಗೆ ಪ್ರೇರಣೆ ನೀಡಲಿದೆ ಎಂದು ತಂಡದ ನೇತೃತ್ವ ವಹಿಸಿರುವ ಕಮಾಂಡರ್‌ ವಿ. ಸೀತಾರಾಂ ಅವರು ತಿಳಿಸಿದರು.

ಭಾರತ ದರ್ಶನ ಕಾರ್ಯಕ್ರಮಕ್ಕೆ ಇದೇ ಫೆಬ್ರವರಿಯಲ್ಲಿ ಮುಂಬೈನಲ್ಲಿ ಮತ್ತು ಮಾರ್ಚ್‌ನಲ್ಲಿ ಲೋನಾವಾಲದಿಮದ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಂತೆ ದೆಹಲಿ, ವಿಶಾಖಪಟ್ಟಣಂ, ಕೊಚ್ಚಿನ್‌ಗೆ ತೆರಳಿ ಅಲ್ಲಿಂದ ಮರಳಿ ಇದೇ ಮೇ 9ಕ್ಕೆ ಲೋನಾವಾಲಕ್ಕೆ ಹಿಂತಿರುಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಐಎನ್‌ಎಸ್‌ ಶಿವಾಜಿ ತಂಡದೊಂದಿಗೆ ಇದ್ದು ಅವರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು. ಈ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ತಂಡ ಭೇಟಿ ನೀಡಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ತರಬೇತಿಗೊಳಿಸಿ ನೌಕಾದಳಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ತಂಡದ ಉದ್ದೇಶವಾಗಿದೆಯೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next