ಲಂಡನ್ : ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಇಯಾನ್ ಮಾರ್ಗನ್‌ಗೆ ತನ್ನ ತಂಡ ಫೈನಲ್ ಪ್ರವೇಶಿಸಿರುವುದು ಒಂದು ಕನಸಿನಂತೆ ಕಾಣಿಸುತ್ತಿದೆಯಂತೆ. 2015ರ ಕೂಟದಲ್ಲಿ ಆರಂಭದ ಸುತ್ತಿನಲ್ಲೇ ತಂಡ ಹೊರಬಿದ್ದ ಬಳಿಕ ಇನ್ನೆಂದಾದರೂ ಇಂಗ್ಲೆಂಡ್‌ಗೆ ಫೈನಲ್ ತನಕ ಸಾಗುವ ಅವಕಾಶ ಸಿಕ್ಕೀತು ಎಂಬುದನ್ನು ಊಹಿಸಲೂ ಅವರಿಂದ ಸಾಧ್ಯವಿರಲಿಲ್ಲ. ಆದರೆ ಈಗ ಅನೂಹ್ಯ ವಾದದ್ದು ಸಂಭವಿಸಿ ಇಡೀ ಇಂಗ್ಲೆಂಡ್ ರೋಮಾಂಚನದಲ್ಲಿ ತೇಲಾಡುತ್ತಿದೆ.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದ ಬಳಿಕ ಆಂಗ್ಲರಲ್ಲಿ ಕಪ್ ನಮ್ಮದೇ… ಎಂಬ ತುಡಿತ ಜೋರಾಗಿದೆ. ಇಡೀ ದೇಶ ಮಾರ್ಗನ್ ಪಡೆ ಗೆದ್ದು ಬರಲಿ, ಆ ಮೂಲಕ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಗೆಲ್ಲಲಾಗಲಿಲ್ಲ ಎಂಬ ಕಳಂಕ ದೂರವಾಗಲಿ ಎಂದು ಪ್ರಾರ್ಥಿಸುತ್ತಿದೆ.
ಫೈನಲ್ ಪ್ರವೇಶದಲ್ಲಿ ಮಾರ್ಗನ್ ಅವರ ಅಜೇಯ 45 ರನ್ ಕೊಡು ಗೆಯೂ ಇದೆ. ನಮ್ಮಲ್ಲಿ ಬದ್ಧತೆಯ ಕೊರತೆಯಿರಲಿಲ್ಲ, ಯೋಜನೆಯನ್ನು ಸಿದ್ಧಮಾಡಿಟ್ಟುಕೊಂಡಿದ್ದೆವು ಮತ್ತು ಆ ದಿನ ನಮ್ಮದಾಗಿತ್ತು. ಮೈದಾನದಲ್ಲಿ ರುವವರು ಮಾತ್ರವಲ್ಲದೆ ಡ್ರೆಸ್ಸಿಂಗ್ ರೂಮ್‌ನಲ್ದಿದ್ದವರೂ ಪ್ರತಿಯೊಂದು ಎಸೆತವನ್ನು ಆನಂದಿಸಿದರು ಎಂದು ತಂಡದ ಗೆಲುವಿಗೆ ಪ್ರತಿಕ್ರಿಯಿಸಿದ್ದಾರೆ ಮಾರ್ಗನ್.
ಹಿಂದಿನ ವಿಶ್ವಕಪ್‌ನ ಹೀನಾಯ ನಿರ್ವಹಣೆಯ ಬಳಿಕ ತಂಡದ ಸ್ಥೈರ್ಯ ಕಳೆಗುಂದಿತ್ತು. ಈ ಸಂದರ್ಭದಲ್ಲಿ ಮಾರ್ಗನ್ ಎದೆಗುಂದಬೇಡಿ, ನಮ ಗೂ ಒಂದು ದಿನ ಬರಬಹುದು ಎಂದು ಹುರಿದುಂಬಿಸಿದ್ದರು. ಇದರಿಂದ ನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಾಯಿತು.
ರವಿವಾರವೂ ತಂಡ ಇದೇ ರೀತಿಯ ಸ್ಫೂರ್ತಿಯಿಂದ ಆಡಬೇಕೆನ್ನುವುದು ಮಾರ್ಗನ್ ಬಯಕೆ. ಕಪ್‌ನಿಂದ ನಾವು ಒಂದೇ ಹೆಜ್ಜೆ ದೂರ ಇದ್ದೇವೆ. ಇದು ಗರಿಷ್ಠ ಸಾಮರ್ಥ್ಯವನ್ನು ತೋರಿಸುವ ದಿನ. ಅಂತೆಯೇ ಪಂದ್ಯವನ್ನು ಆನಂದಿಸಬೇಕು ಎಂದು ತಂಡದವರಿಗೆ ಕಿವಿ ಮಾತು ಹೇಳಿದ್ದಾರೆ.
ಫೈನಲ್‌ನಲ್ಲಿ ಕಠಿನ ಹೋರಾಟ
ಲೀಗ್ ಹಂತದಲ್ಲಿ ನ್ಯೂಜಿಲ್ಯಾಂಡನ್ನು 119 ರನ್‌ಗಳಿಂದ ಮಣಿಸಿದ್ದರೂ ಫೈನಲ್‌ನಲ್ಲಿ ತಂಡ ಕಠಿನ ಹೋರಾಟ ನಡೆಸಬಹುದು ಎಂಬ ಎಚ್ಚರಿಕೆ ಮಾರ್ಗನ್ ಪಡೆಯಲ್ಲಿದೆ. ಲೀಗ್ ಹಂತದ ಹೋರಾಟವೇ ಬೇರೆ, ಫೈನಲ್ ಹಣಾಹಣಿಯೇ ಬೇರೆ. ಯಾವುದೇ ತಂಡವಾದರೂ ಇಲ್ಲಿ ಗರಿಷ್ಠ ಸಾಮರ್ಥ್ಯದಿಂದ ಆಡುತ್ತದೆ. ಹೀಗಾಗಿ ಲೀಗ್ ಫಲಿತಾಂಶ ನೋಡಿಕೊಂಡು ಮೈಮರೆಯುವ ಸಮಯ ಇದಲ್ಲ ಎನ್ನುತ್ತಾರೆ ಮಾರ್ಗನ್.