Advertisement

ಚಿಪ್ಸ್‌  ಮಾರಿ ಚಿನ್ನದ ಬೆಳೆ ತೆಗೆದ ಇಳವರಸಿ!

12:08 AM Aug 22, 2021 | Team Udayavani |

ಐದಲ್ಲ ಹತ್ತಲ್ಲ, ಪೂರ್ತಿ 50 ಲಕ್ಷ ಸಾಲ ತಗೊಂಡು ಚಿಪ್ಸ್, ಸಿಹಿ ತಿನಿಸು ಮಾರಾಟ ಕ್ಷೇತ್ರ ಪ್ರವೇಶಿಸಿದೆ. ಸೂಪರ್‌ ಮಾರ್ಕೆಟ್‌ನಲ್ಲಿ ಬಿಸಿನೆಸ್‌ ಆರಂಭಿಸಿದೆ. ಲಾಭ ಕೈ ಹಿಡಿಯುತ್ತಿದೆ ಅಂದುಕೊಳ್ಳುವಾಗಲೇ ಅನಾಹುತವಾಗಿ ಬಿಟ್ಟಿತು. ಅದೊಂದು ರಾತ್ರಿ ಸೂಪರ್‌ ಮಾರ್ಕೆಟ್‌ಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಮಸ್ತವನ್ನೂ ಕದ್ದೊಯ್ದರು. ಮರುಕ್ಷಣವೇ ನಾನು ಬೀದಿಗೆ ಬಿದ್ದೆ ಅಂದರು ಇಳವರಸಿ ಜಯಕಾಂತ್‌. ಅಯ್ಯಯ್ಯೋ, ಆಮೇಲೇನಾಯ್ತು ಮೇಡಂ ಅಂದಾಗ ಅವರು ಹೇಳಿಕೊಂಡ ಕಥೆ ಇದು…

Advertisement

****

ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಉಜಾಲಾಂಪೆಟ್ಟಿ ನಮ್ಮೂರು. ನಮ್ಮ ತಾತ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಹೆಸರು ಮಾಡಿದ್ದರು. ಸುತ್ತಲಿನ ಹತ್ತೂರುಗಳಲ್ಲಿ ಯಾವುದೇ ಶುಭ ಕಾರ್ಯ ವಾದರೂ, ಅಲ್ಲಿನ ಅಡುಗೆಯ ಜವಾ ಬ್ದಾರಿ ಅವರದೇ ಆಗಿರುತ್ತಿತ್ತು. ರುಚಿಕರ ತಿನಿಸು ಗಳನ್ನು ತಯಾರಿಸುವ “ವಿದ್ಯೆ’ ತಾತನಿಂದ ಅಪ್ಪನಿಗೆ, ಅಪ್ಪನಿಂದ ಅಣ್ಣನಿಗೆ ಬಂತು. ನಮ್ಮ ಅಣ್ಣ, ತಿರುಚ್ಚಿ ಯಲ್ಲಿ ಸಿಹಿ ತಿನಿಸುಗಳ ಮಾರಾಟದ ಅಂಗಡಿ ಇಟ್ಟಿ ದ್ದಾನೆ. ಅವರ ಕೆಲಸಗಳನ್ನೇ ಗಮನಿಸುತ್ತಾ ಬೆಳೆದ ಕಾರಣ, ರುಚಿಕರ ತಿನಿಸುಗಳನ್ನು ತಯಾರಿಸುವ ವಿದ್ಯೆ ನನಗೂ ಚೆನ್ನಾಗಿಯೇ ಗೊತ್ತಿತ್ತು.

ಸದಾ ಯಾವುದಾದರೊಂದು ಕೆಲಸ ಮಾಡ್ತಾನೆ ಇರುವುದು ನನ್ನ ಗುಣ. ಮಧುರೈನಿಂದ ಗಂಡನ ಮನೆಯಿದ್ದ ಕೇರಳದ ತೃಶೂರ್‌ಗೆ ಬಂದಾಗ, ಸಿಹಿ ತಿನಿಸುಗಳನ್ನು ತಯಾರಿಸಿ ನೆರೆಹೊರೆಯ ಜನರಿಗೆ ಮಾರಬಾರದೇಕೆ ಅನ್ನಿಸಿತು. ಅದನ್ನೇ ಗಂಡನಿಗೆ ಹೇಳಿದಾಗ-“ನಿನಗೆ ಯಾವ ಕೆಲಸ ಇಷ್ಟವೋ ಅದನ್ನು ಮಾಡು. ನಾನು ಸಪೋರ್ಟ್‌ ಮಾಡ್ತೇನೆ’ ಅಂದರು. ಸಿಹಿ ತಿನಿಸುಗಳ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರಕ್ಕೆ ನಾನು ಎಂಟ್ರಿ ಕೊಟ್ಟಿದ್ದೇ ಹೀಗೆ.

ಶುಚಿ, ರುಚಿ ಮತ್ತು ಕಡಿಮೆ ಬೆಲೆ-ನಮ್ಮ ಉತ್ಪನ್ನದ ವೈಶಿಷ್ಟ್ಯ. ಈ ವ್ಯವಹಾರದಲ್ಲಿ ನನಗೆ ನಿರೀಕ್ಷೆ ಮೀರಿ ಯಶ ಸಿಕ್ಕಿತು. ನೂರಾರು ಕೆ.ಜಿ. ಉತ್ಪನ್ನಕ್ಕೆ ಆರ್ಡರ್‌ ಬರತೊಡಗಿತು. ನಾವು ತಯಾರಿಸುವ ಉತ್ಪನ್ನಕ್ಕೆ ಒಂದು ಹೆಸರಿಡಬೇಕು ಅನಿಸಿದ್ದೇ ಆಗ. ಅಶ್ವತಿ ಅನ್ನುವುದು ನನ್ನ ಕಿರಿಯ ಮಗನ ಜನ್ಮ ನಕ್ಷತ್ರ. ಅದನ್ನೇ ನಮ್ಮ ಉತ್ಪನ್ನಕ್ಕೆ ಇಟ್ಟೆ. ದಿನದಿಂದ ದಿನಕ್ಕೆ ವ್ಯಾಪಾರ ಹೆಚ್ಚಾಗುತ್ತಾ ಹೋಯಿತು. ಸೂಪರ್‌ ಮಾರ್ಕೆಟ್‌ನಲ್ಲಿ ಈ ಬಿಜಿನೆಸ್‌ ಮುಂದುವರಿಸಬೇಕು ಅನಿಸಿದ್ದೇ ಆಗ. ಬ್ಯಾಂಕ್‌ನಿಂದ, ಪರಿಚಿತರಿಂದ 50 ಲಕ್ಷದಷ್ಟು ಸಾಲ ಪಡೆದೆ. 30 ಜನರನ್ನು ಕೆಲಸಕ್ಕೆ ನೇಮಿಸಿಕೊಂಡೆ. ಹೊಸ ಯಂತ್ರಗಳು, ಪಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಿ 2010ರಲ್ಲಿ ಸೂಪರ್‌ ಮಾರ್ಕೆಟ್‌ನಲ್ಲಿ ವ್ಯವಹಾರ ಆರಂಭಿ ಸಿಯೇ ಬಿಟ್ಟೆ. ಉತ್ಪನ್ನದ ತಯಾರಿಕೆ, ನೌಕರರ ಸಂಬಳ, ನೀರು, ವಿದ್ಯುತ್‌ ಶುಲ್ಕ… ಹೀಗೆ ಲಕ್ಷಾಂತರದ ವ್ಯವಹಾರ ಅದು. ಏಳು ತಿಂಗಳ ವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ 2011ರ ಒಂದು ದಿನ, ನಮ್ಮ ಶಾಪ್‌ಗೆ ನುಗ್ಗಿದ ಕಳ್ಳರು, ಅಲ್ಲಿದ್ದ ಸಮಸ್ತವನ್ನೂ ಕದ್ದೊಯ್ದರು.

Advertisement

ಇಂಥದೊಂದು ಸಂದರ್ಭವನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ ಆಗಬಾರದ್ದು ಆಗಿ ಹೋಗಿತ್ತು. ಮಾಡುವುದೇನು? ತತ್‌ಕ್ಷಣ ಪೊಲೀಸ್‌ ಕಂಪ್ಲೆಂಟ್‌ ಕೊಟ್ಟೆ. ಪರಿಚಿತರೇ ಮಾಡಿರುವ ಕೆಲಸ ಇದು ಎಂದು ಪೊಲೀಸರು ಹೇಳಿದರು. ಆದರೆ ಕಳ್ಳರನ್ನು ಪತ್ತೆ ಹಚ್ಚಲು ವಿಫ‌ಲರಾದರು. ಇನ್ಶೂರೆ®Õ… ರೂಪದಲ್ಲಿಯಾದರೂ ಸ್ವಲ್ಪ ಪರಿಹಾರ ಸಿಗಬಹುದು ಅಂದುಕೊಂಡು, 3 ಲಕ್ಷ ರೂ.ಗಳ ಉತ್ಪನ್ನಗಳ ಮಾರಾಟದ ಬಿಲ್‌ ತಗೊಂಡು ಹೋದರೆ, ಅಲ್ಲಿ ಹತ್ತಾರು ಬಗೆಯ ದಾಖಲೆ ಕೇಳಿ, ಏನೇನೋ ಕುಂಟು ನೆಪ ಹೇಳಿ ಕೈ ಚೆಲ್ಲಿ ಬಿಟ್ಟರು. ಪರಿಣಾಮ, ಹಿಂದಿನ ದಿನದ

ವರೆಗೂ ಬಾಸ್‌ ಅನ್ನಿಸಿಕೊಂಡಿದ್ದವಳು, ಈಗ ಭಿಕಾರಿಯಂತಾಗಿದ್ದೆ!

ನನಗೆ, ಕನಸಿನಲ್ಲೂ ಊಹಿಸದಿದ್ದ ಹೊಡೆತ ಬಿದ್ದಿತ್ತು. ಈ ಶಾಕ್‌ನಲ್ಲಿಯೇ ಡಿಪ್ರಶನ್‌ಗೆ ತುತ್ತಾದೆ. ಅದುವರೆಗೂ ತುಂಬು ಆರೋಗ್ಯದಿಂದ ಇದ್ದವಳಿಗೆ ಬಿಪಿ, ಶುಗರ್‌ ಜತೆಯಾಯಿತು. ಎದ್ದು ನಿಲ್ಲಲೂ ಆಗದಷ್ಟು ನಿಶ್ಶಕ್ತಿ ಅಮರಿಕೊಂಡಿತು. ನಾಲ್ಕು ಹೆಜ್ಜೆ ನಡೆಯಲೂ ಕಷ್ಟವಾಗತೊಡಗಿತು. ಪೂರ್ತಿ 6 ತಿಂಗಳ ಕಾಲ ಚಿಕಿತ್ಸೆ ಪಡೆದರೂ ಪ್ರಯೋಜನ ವಾಗಲಿಲ್ಲ. ಊಟ, ಸ್ನಾನದ ಸಂದರ್ಭದಲ್ಲೂ ಮತ್ತೂಬ್ಬರ ನೆರವು ಬೇಕಿತ್ತು. ಅಂದರೆ ನನ್ನ ಸ್ಥಿತಿ ಹೇಗಿತ್ತೋ ಊಹಿಸಿಕೊಳ್ಳಿ.

ಪರಿಸ್ಥಿತಿ ಹೀಗಿದ್ದಾಗಲೇ ನಮಗೆ ಸಾಲ ಕೊಟ್ಟಿದ್ದ ಬ್ಯಾಂಕ್‌ ಅಧಿಕಾರಿಗಳು ಮನೆ ಜಪ್ತಿಗೆ ಬಂದರು. ಸಾಲ ಕೊಟ್ಟಿದ್ದ ಜನ ಮನೆಯ ಬಳಿ ಬಂದು ಗಲಾಟೆ ಮಾಡತೊಡಗಿದ್ದರು. “ಎಲ್ಲಿದ್ದಾಳೆ ನಿಮ್ಮಮ್ಮ? ಮನೆಯಿಂದ ಆಚೆ ಬರಲು ಹೇಳು ಅವಳಿಗೆ’ ಎಂದು ನನ್ನ ಮಕ್ಕಳಿಗೆ ತಾಕೀತು ಮಾಡುತ್ತಿದ್ದರು. “ಅಮ್ಮ ಆಸ್ಪತ್ರೆಯಲ್ಲಿದ್ದಾರೆ. ಅವರು ಯಾವ ಸಂದರ್ಭದಲ್ಲೂ ಮೊಬೈಲ್‌ ಸ್ವಿಚ್‌ ಆಫ್ ಮಾಡಲ್ಲ. ಬೇಕಾದ್ರೆ ಅವರಿಗೆ ಕಾಲ್‌ ಮಾಡಿ ಚೆಕ್‌ ಮಾಡಿ’ ಎಂದು ನನ್ನ ಗಂಡ- ಮಕ್ಕಳು ಸ್ಪಷ್ಟನೆ ಕೊಟ್ಟರೂ ಅದನ್ನು ಜನ, ಅಧಿಕಾರಿಗಳು ನಂಬ ಲಿಲ್ಲ.”ತಮಿಳುನಾಡಿನ ನೀವು ರಾತೋರಾತ್ರಿ ಇಲ್ಲಿಂದ ಪರಾರಿಯಾದ್ರೆ ನಮ್ಮ ದುಡ್ಡಿನ ಗತಿಯೇನು?’ ಎಂದು ಪ್ರಶ್ನೆ ಹಾಕಿದರು. ಕೆಟ್ಟ ಮಾತುಗಳಿಂದ ನಿಂದಿಸಿದರು. ಇದರ ನೇರ ಪರಿಣಾಮ ನನ್ನ ದೊಡ್ಡ ಮಗನ ಮೇಲಾಯಿತು. ಮಾನಸಿಕವಾಗಿ ಕುಗ್ಗಿ ಹೋದ ಅವನು ಆ ವರ್ಷ ಫೇಲ್‌ ಆದ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾವು ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಿದ್ದಾಗ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಬದಲಿಗೆ, ಹಂಗಿಸಿ ಮಾತಾಡಿದರು. “ಭಾರೀ ಕೊಬ್ಬು ಅವಳಿಗೆ, ತುಂಬಾ ಮೆರೀತಿದ್ಲು, ಈಗ ಅನುಭವಿಸಲಿ…’ ಅಂದರು. ಹೆಂಡ್ತಿ ಹೇಳಿದ್ದಕ್ಕೆಲ್ಲ ಕತ್ತು ಆಡಿಸಿದ್ರೆ ಆಗೋದೇ ಹೀಗೆ ಎಂದು ನನ್ನ ಗಂಡನಿಗೆ ಬುದ್ಧಿ ಹೇಳಿದರು. ಈ ಸಂದರ್ಭದಲ್ಲಿ, ನಮ್ಮಲ್ಲಿದ್ದ ಒಡವೆ, ವಸ್ತುಗಳನ್ನೆಲ್ಲ ಮಾರಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇದನ್ನೆಲ್ಲ ನೋಡಿ ನಾನೊಂದು ನಿರ್ಧಾರಕ್ಕೆ ಬಂದೆ. ಗಂಡನ ಎದುರು ನಿಂತು- “ಈಗ ಆಗಿರುವ ಅಷ್ಟೂ ಅನಾಹುತಕ್ಕೆ ನಾನೇ ಜವಾಬ್ದಾರಿ. ಸಾಲದ ಮೊತ್ತ ದಿನೇ ದಿನೆ ಬೆಳೆಯುತ್ತಲೇ ಇದೆ. ಅದನ್ನು ತೀರಿಸುವುದಕ್ಕಾದ್ರೂ ನಾನು ದುಡಿಯಲೇ ಬೇಕು. ನಾನು ಮಾಡಿರುವ ತಪ್ಪಿಗೆ ನೀವು- ಮಕ್ಕಳು ಸಲ್ಲದ ಮಾತು ಕೇಳ್ಳೋದು ಬೇಡ. ನನಗೆ ಗೊತ್ತಿರೋದು ತಿಂಡಿ ತಯಾರಿಕೆಯ ಕೆಲಸ ಮಾತ್ರ. ಎಲ್ಲೂ ಸಾಲ ತಗೋಳಲ್ಲ. ಚಿಕ್ಕ ಮೊತ್ತ ಇಟ್ಕೊಂಡು ಕೆಲಸ ಶುರು ಮಾಡ್ತೇನೆ. ವ್ಯಾಪಾರ ಕೈ ಹಿಡಿದ್ರೆ ಸಾಲ ತೀರಿಸೋಣ. ಅಕಸ್ಮಾತ್‌ ಮತ್ತೆ ಲಾಸ್‌ ಆದ್ರೆ ಬೇರೆ ಯೋಚನೆ ಮಾಡೋಣ’ ಅಂದೆ. ನನ್ನ ಗಂಡ ಈ ಮಾತಿಗೂ ಒಪ್ಪಿಕೊಂಡ.

2012ರಲ್ಲಿ, ತೃಶೂರ್‌ನ ರೈಲು ನಿಲ್ದಾಣದ ಒಂದು ಚಿಕ್ಕ ಅಂಗಡಿಯಲ್ಲಿ ಬಾಳೆಕಾಯಿ ಚಿಪ್ಸ್  ಮಾರಾಟದ ಮೂಲಕ ನನ್ನ ಬಿಸಿನೆಸ್‌ನ ಎರಡನೇ ಇನ್ನಿಂಗ್ಸ್ ಆರಂಭವಾಯಿತು. ಅವತ್ತು ಹಾಕಿದ ಬಂಡವಾಳ ಬರೀ 300 ರೂಪಾಯಿ. ರೈಲು ಪ್ರಯಾಣಿಕರು, ಕಡಿಮೆ ಬೆಲೆಗೆ ಸಿಗುವ ರುಚಿಕರ ತಿನಿಸನ್ನು ಇಷ್ಟಪಡ್ತಾರೆ.  ಶುಚಿ-ರುಚಿಯ ಉತ್ಪನ್ನ ವನ್ನು ಮುಗಿಬಿದ್ದು ಖರೀದಿಸು ತ್ತಾರೆ ಎಂಬ ನಂಬಿಕೆ ನನಗಿತ್ತು. ಅದು ಸುಳ್ಳಾಗಲಿಲ್ಲ. ಸಂಜೆಯ ವೇಳೆಗೆ ದುಪ್ಪಟ್ಟು ಲಾಭವಾಗಿತ್ತು. ಮರುದಿನ ಇನ್ನಷ್ಟು ಹುಮ್ಮಸ್ಸಿನೊಂದಿಗೆ, ಚಿಪ್ಸ್ ಜತೆಗೆ ಬೋಂಡಾ, ವಡೆ, ಬಜ್ಜಿಯನ್ನೂ ತಯಾರಿಸಿ ವ್ಯಾಪಾರಕ್ಕೆ ನಿಂತೆ. ಸಂಜೆಯ ಹೊತ್ತಿಗೆ ಅಷ್ಟೂ ಖಾಲಿ! ಮರುದಿನದಿಂದ ರೈಲು ಪ್ರಯಾಣಿಕರು  ತಿನಿಸುಗಳಿಗಾಗಿ ಸಾಲುಗಟ್ಟಿ ನಿಲ್ಲ ತೊಡಗಿದರು. ಕಡಿಮೆ ಬೆಲೆಗೆ ಸೂಪರ್‌  ಟೇಸ್ಟಿ ನ ತಿಂಡಿ ಸಿಗುತ್ತೆ ಎಂದು ಮೆಚ್ಚುಗೆಯ ಮಾತಾಡಿದರು. ಈ ಬಗೆಯ ಮೌತ್‌ ಪಬ್ಲಿಸಿಟಿಯಿಂದ ನೂರಾರು ಹೊಸ ಗ್ರಾಹಕರು ಸಿಕ್ಕರು. “ಈ ತಿನಿಸುಗಳಿಗೋಸ್ಕರ 3 ಕಿ.ಮೀ. ದೂರದಿಂದ ಬರ್ತೀವಮ್ಮ, ನಮ್ಮ ಏರಿಯಾದಲ್ಲೂ ಬ್ರಾಂಚ್‌ ಶುರು ಮಾಡಿ’ ಎಂದು ಒತ್ತಾಯಿಸಿದರು. ಒಂದು ರಿಸ್ಕ್  ತಗೊಳ್ಳೋಣ ಅಂದು ಕೊಂಡು ತೃಶೂರ್‌ ಸಿಟಿಯೊಳಗೆ, ಅಶ್ವತಿ ಹಾಟ್‌ ಚಿಪ್ಸ್‌ನ ಬ್ರಾಂಚ್‌ ಶುರು ಮಾಡಿದೆ. ಚಿಪ್ಸ್, ಪಪ್ಸ್, ಖಾರಾ, ಹಲ್ವಾ, ಕೇಕ್‌, ಸಲಾಡ್‌… ಹೀಗೆ 30ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿದೆ. ಜನ ಅಂಗಡಿಯ ಮುಂದೆ ಸಾಲುಗಟ್ಟಿ ನಿಂತರು. ನಮ್ಮ ಬಿಸಿನೆಸ್‌ ರಾಕೆಟ್‌ ವೇಗದಲ್ಲಿ ಮೇಲೇರ ತೊಡಗಿತು. ಈ ಬಾರಿ ನನ್ನ ಯಶಸ್ಸು ಯಾವ ಮಟ್ಟಕ್ಕಿತ್ತು ಅಂದರೆ- ಹಿಂದೊಮ್ಮೆ ನಮ್ಮ ಮನೆಯನ್ನು ಜಪ್ತಿ ಮಾಡಲು ಬಂದಿದ್ದ ಬ್ಯಾಂಕ್‌ ಮ್ಯಾನೇಜರ್‌, ಶಾಪ್‌ಗೆ ಬಂದು- “ನನಗೆ ರಿಟೈರ್ಡ್‌ ಆಯ್ತಮ್ಮಾ. ನಿಮ್ಮ ಶಾರ್ಪ್‌ನಲ್ಲಿ ಕ್ಯಾಷಿಯರ್‌ ಕೆಲಸಕ್ಕೆ ನಾನು ಬರಬಹುದಾ?’ ಎಂದು ಕೇಳಿದರು!

****

ಈಗ ಏನಾಗಿದೆ ಗೊತ್ತೆ? ಅಶ್ವತಿ ಹಾಟ್‌ ಚಿಪ್ಸ್‌ ಅನ್ನುವುದು ಒಂದು ಬ್ರಾಂಡ್‌ ನೇಮ್‌ ಆಗಿದೆ. ತೃಶೂರ್‌ನಲ್ಲಿ ಒಟ್ಟು ನಾಲ್ಕು ಶಾಪ್‌ ಹೊಂದಿರುವ ಇಳವರಸಿ, 80 ಜನರಿಗೆ ಕೆಲಸ ಕೊಟ್ಟಿದ್ದಾರೆ. ಅಲ್ಲೀಗ 60ಕ್ಕೂ ಹೆಚ್ಚು ಬಗೆಯ ಸಿಹಿ-ಖಾರಾ ತಿನಿಸುಗಳು ತಯಾರಾಗುತ್ತಿವೆ. ಕತಾರ್‌, ದುಬಾೖ ರಾಷ್ಟ್ರಗಳು ಇಳವರಸಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ ನೀಡಿವೆ. ಕೇರಳ ಸರಕಾರ, ವರ್ಷದ ಸಾಧಕಿ ಎಂದು ಕರೆದು ಗೌರವಿಸಿದೆ.

ಹಳೆಯ ದಿನಗಳನ್ನು ನೆನಪಿಸಿಕೊಂಡು ಇಳವರಸಿ ಹೇಳುತ್ತಾರೆ: ನನ್ನ ಯಜಮಾನರು ಕೃಷಿಕರು. ಅಕಸ್ಮಾತ್‌  ಅವರು ಬೇರೆ ಕೆಲಸದಲ್ಲಿ ಇದ್ದಿದ್ರೆ ನಾನು ಈ ವ್ಯವಹಾರಕ್ಕೆ ಕೈ ಹಾಕ್ತಾನೇ ಇರಲಿಲ್ಲವೇನೋ. ನಾನು ಎರಡನೇ ಬಾರಿ ಬಿಸಿನೆಸ್‌ ಶುರು ಮಾಡಿದಾಗ ಆಡಿಕೊಂಡವರು ಒಬ್ಬಿಬ್ಬರಲ್ಲ. “ನಿಮ್ಮ ಇಡೀ ಕುಟುಂಬಕ್ಕೆ ಬಿಸಿನೆಸ್‌ನ ಹಿನ್ನೆಲೆ ಇಲ್ಲ. ಇಲ್ಲಿನ ಜನರ ಮೆಂಟಾಲಿಟಿ ಗೊತ್ತಿದೆ ಅನ್ನೋಕೆ ನೀನು ಈ ಊರಿನವಳೂ ಅಲ್ಲ. ಮತ್ತೆ ಲಾಸ್‌ ಆದ್ರೆ ತಡ ಕೊಳ್ಳುವಂಥ ಆರ್ಥಿಕ ಬೆಂಬಲವೂ ನಿಮಗಿಲ್ಲ. ಈಗಾಗ್ಲೇ ಒಮ್ಮೆ ಲಕ್ಷಾಂತರ ಕಳಕೊಂಡಿ ದ್ದೀಯ, ಹಾಗಿದ್ರೂ ನಿನಗೆ ಬುದ್ಧಿ ಬಂದಿಲ್ಲವಲ್ಲ, ಬೋಂಡಾ ಮಾರಿ ಬದುಕೋಕಾಗುತ್ತಾ? ನಮ್ಮ ಥರಾ ಅಡುಗೆ ಮಾಡಿಕೊಂಡು ತೆಪ್ಪಗಿರು…’  ಎಂದು ಜತೆಗಿದ್ದ ಹೆಂಗಸರೇ ಹೇಳಿದ್ದರು. ಈಗ ಅದೇ ಜನ, ನನ್ನನ್ನು, ನನ್ನ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ.

ಡಿಪ್ರಶನ್‌ಗೆ ಸಿಕ್ಕಿದ್ದೆನಲ್ಲ; ಆ ಸಂದರ್ಭದಲ್ಲಿ ನನಗೆ ಕ್ಷಣಕ್ಕೊಂದು ಯೋಚನೆ ಬರುತ್ತಿತ್ತು. ಕಷ್ಟಗಳಿಂದ ಪಾರಾಗುವ ದಾರಿ ತಿಳಿಯದೆ ಬಿಕ್ಕಿಬಿಕ್ಕಿ ಅಳುತ್ತಿದ್ದೆ. ಕೆಲವೊಮ್ಮೆ, ಇದ್ದಕ್ಕಿದ್ದಂತೆಯೇ ಸತ್ತು ಹೋದರೆ ಸಾಕಪ್ಪಾ ಅನಿಸುತ್ತಿತ್ತು. ಮರುಕ್ಷಣವೇ ಮಕ್ಕಳ ನೆನಪಾಗುತ್ತಿತ್ತು. ನಾನೇನಾದ್ರೂ ಸತ್ತುಹೋದರೆ ಮಕ್ಕಳು ತಬ್ಬಲಿ ಆಗ್ತಾರೆ. ಅವರಿಗೋಸ್ಕರ ಆದ್ರೂ ನಾನು ಬದುಕಲೇಬೇಕು ಎಂಬ ಭಾವ ಜತೆಯಾಗು ತ್ತಿತ್ತು. ಈಗ ಸಾಲವೆಲ್ಲ ತೀರಿದೆ. ನನ್ನ ಗಂಡ ಈಗಲೂ ಕೃಷಿಯಲ್ಲಿಯೇ ಖುಷಿ ಕಾಣುತ್ತಿದ್ದಾರೆ.  ಅಶ್ವತಿ ಹಾಟ್‌ ಚಿಪ್ಸ್‌ ನ ಉತ್ಪನ್ನಗಳು ಕೆನಡಾ, ಅಮೆರಿಕ, ದುಬಾೖ, ಕತಾರ್‌ಗೆ ರಫ್ತಾಗುತ್ತವೆ. ನನ್ನ ಸಂಪಾದನೆ ಒಂದು ತಿಂಗಳಿಗೆ 5 ಲಕ್ಷ ರೂ.ಗಳನ್ನೂ ದಾಟುತ್ತದೆ! ನಂಬ್ತೀರಾ? ರಾಹುಲ್‌ ಗಾಂಧಿ, ಚಿತ್ರನಟ ದಿಲೀಪ್‌ ನಮ್ಮ ಉತ್ಪನ್ನಗಳ ಗ್ರಾಹಕ ರಾಗಿದ್ದಾರೆ. ಇದನ್ನೆಲ್ಲ ಹೇಳಿಕೊಳಕ್ಷೆು ನನಗೆ ಖುಷಿ, ಹೆಮ್ಮೆ.

“ಯಾವುದೇ ಉತ್ಪನ್ನ ಜನರಿಗೆ ಇಷ್ಟ ಆಗ ಬೇಕಾದರೆ ಅದರಲ್ಲಿ ಕ್ವಾಲಿಟಿ ಇರಬೇಕು. ಕೈಗೆಟಕುವ ಬೆಲೆ ಇರಬೇಕು. ಆಗ ಮಾತ್ರ ಯಶಸ್ಸು ಕೈಹಿಡಿಯುತ್ತೆ. ಈ ಮಾತಿಗೆ ನಾನೇ, ನನ್ನ ಬದುಕೇ ಉದಾಹರಣೆ. ಟೀಕೆಗಳಿಗೆ ಕಿವಿಗೊಡದೆ, ಸೋಲು ಗಳಿಗೆ ಅಂಜದೆ ಶ್ರದ್ಧೆಯಿಂದ ಕೆಲಸ ಮಾಡ್ತಾ ಹೋದರೆ, ಯಶಸ್ಸು ತಂತಾನೇ ಜತೆಯಾಗುತ್ತೆ…’ ಉದ್ಯಮಿ ಆಗಲು ಹೊರಟವರಿಗೆ ಇದೇ ನನ್ನ ಕಿವಿಮಾತು ಎನ್ನುತ್ತಾ ಮಾತು ಮುಗಿಸಿದರು ಇಳವರಸಿ.  ಚಿಪ್ಸ್  ಮಾರುತ್ತಲೇ ಚಿನ್ನದ ಬೆಳೆ ತೆಗೆದ ಈ ಸಾಹಸೀ ಹೆಣ್ಣುಮಗಳಿಗೆ ಅಭಿನಂದನೆ ಹೇಳಲು-

elavarasi168@gmail.com

 

ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next