ಕಾತುರಕ್ಕೆ ತೆರೆಬೀಳುವ ದಿನ ಬಂದೇ ಬಿಟ್ಟಿದೆ. ಅದು “ಇನ್ಸ್ಪೆಕ್ಟರ್ ವಿಕ್ರಂ’ ತೆರೆಕಾಣುವ ಮೂಲಕ. ಹೌದು, ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡಾ ಸೇರಿದೆ. ಇಷ್ಟು ದಿನ ನೀವು ನೋಡಿರದ ಪ್ರಜ್ವಲ್ ದೇವರಾಜ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಒಂದು ಕಡೆ ಪೊಲೀಸ್ ಆಫೀಸರ್ ಆದರೆ, ಇನ್ನೊಂದು ಕಡೆ ಲವರ್ಬಾಯ್. ಹೀಗೆ ಭಿನ್ನ ಗೆಟಪ್ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ದೊಡ್ಡ ಗ್ಯಾಪ್ ಬಳಿಕ ದರ್ಶನ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಇನ್ನು ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿದೆ. ಟ್ರೇಲರ್ ನೋಡಿದವರಿಗೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನರ್ ಎಂಬುದು ಗೊತ್ತಾಗುತ್ತದೆ. ಟ್ರೇಲರ್ನ ಆರಂಭದಲ್ಲೇ
“ಖಾಕಿ ಹಾಕ್ಕೊಂಡು ಖಡಕ್ ಆಗಿ ಎಂಟ್ರಿ ಕೊಡೋಕೆ, ನೀನೇನು ಡೈನಾಮಿಕ್ ಹೀರೋ ದೇವರಾಜೇನೋ…’, “ಅಲ್ಲಾ, ಅವರ ಮಗ ಪ್ರಜ್ವಲ್ ದೇವರಾಜ್ ಅಂದ್ಕೋ… ಅಲ್ಲಾ, ಅಪ್ಪ ಹೊಡೆದ್ರೆ ಲಾಕಪ್ ಡೆತ್, ಮಗ ಹೊಡೆದ್ರೆ ಸ್ಪಾಟ್ ಡೆತ್..’ ಎಂಬ ಮಾಸ್ ಡೈಲಾಗ್ ನೊಂದಿಗೆ ಆರಂಭವಾಗುವ ಈ ಟ್ರೇಲರ್ನಲ್ಲಿ ಫನ್ನಿ ಲವ್ಸ್ಟೋರಿಯೊಂದರ ಸೂಚನೆ ಕೂಡಾ ಇದೆ.
ಪ್ರಜ್ವಲ್ ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಕಥೆ ಹೇಳಿದಾಗಲೇ ಈ ಸಿನಿಮಾ ಹೇಗೆ ಮೂಡಿಬರಬಹು ದೆಂಬ ಕಲ್ಪನೆ ಇತ್ತು. ಆದರೆ, ಸಿನಿಮಾ ಮಾತ್ರ ನನ್ನ ಕಲ್ಪನೆಗಿಂತಲೂ ಚೆನ್ನಾಗಿ ಮೂಡಿಬಂದಿದೆ. ಹೊಸ ವರ್ಷದಲ್ಲಿ ಪ್ರೇಕ್ಷಕರಿಗೆ ಇದೊಂದು ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾವಾಗಿ ರಂಜಿಸಲಿದೆ’ ಎನ್ನುವುದು ಪ್ರಜ್ವಲ್ ದೇವರಾಜ್ ಮಾತು.
ಈ ಚಿತ್ರವನ್ನು ವಿಖ್ಯಾತ್ ನಿರ್ಮಿಸಿದ್ದಾರೆ. ಹೊಸ ವರ್ಷದ ಮೊದಲ ಸ್ಟಾರ್ ಸಿನಿಮಾವಾಗಿ “ಇನ್ಸ್ಪೆಕ್ಟರ್ ವಿಕ್ರಂ’ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ ಎಂಬುದು ನಿರ್ಮಾಪಕ ವಿಖ್ಯಾತ್ ಮಾತು. ಇನ್ನು, ಈ ಚಿತ್ರ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಭಾವನಾ ನಾಯಕಿ. ಅವರ ಪಾತ್ರಕ್ಕೊಂದು ಟ್ವಿಸ್ಟ್ ಇದ್ದು, ಅದು ತೆರೆಮೇಲೆಯೇ ನೋಡಬೇಕು ಎಂಬುದು ಚಿತ್ರತಂಡದ ಮಾತು.
ನರಸಿಂಹ ಈ ಚಿತ್ರದ ನಿರ್ದೇಶಕರು. ಅವರು ಈ ಕಥೆ ಬರೆಯುವಾಗಲೇ ಪ್ರಜ್ವಲ್ ಅವರನ್ನು ಮನಸ್ಸಲಿಟ್ಟುಕೊಂಡಿದ್ದರಂತೆ. ಅದರಂತೆ ಪ್ರಜ್ವಲ್ ಕೂಡಾ ಕಥೆ ಕೇಳಿ ಖುಷಿಪಟ್ಟಿದ್ದಾರೆ. “ಇದು ಥ್ರಿಲ್ಲರ್ ಸಿನಿಮಾ ಅಲ್ಲ. ಇಡೀ ಸಿನಿಮಾದಲ್ಲಿ ತುಂಬಾ ಮಜಾವಾದ ಅಂಶಗಳಿವೆ. ಹಾಗಾಗಿ, ಸಿನಿಮಾದ ಕಥೆ ಬಿಟ್ಟುಕೊಡು ವಂತಿಲ್ಲ. ನಗಿಸಿ, ರಂಜಿಸಿ, ಖುಷಿ ಪಡಿಸಿ ಈ ಚಿತ್ರ ಪ್ರೇಕ್ಷಕರನ್ನು ಆಚೆ ಕಳುಹಿಸುತ್ತದೆ’ ಎಂಬ ವಿಶ್ವಾಸ ನಿರ್ದೇಶಕರಿಗಿದೆ.