ಕಲಬುರಗಿ: ಸೇವಾ ಭದ್ರತೆ ಹಾಗೂ ಸೇವಾ ವಿಲೀನತೆ ಪ್ರಕ್ರಿಯೆಗೆ ಶಾಶ್ವತ ನಿಯಮಾವಳಿ ರಚಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಸಾಂಕೇತಿಕ ಧರಣಿ ನಡೆಸಲಾಯಿತು.
ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ಸಾವಿರಾರು ಅತಿಥಿ ಉಪನ್ಯಾಸಕರು ಬೆಳಗಾವಿ ಚಲೋ ಕೈಗೊಂಡು ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ ಹಾಗೂ ಸತ್ಯಾಗ್ರಹವನ್ನು ಕುಟುಂಬ ಸದಸ್ಯರೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಇಲಾಖೆ ನಿಯಮಾನುಸಾರ ಆಯ್ಕೆಗೊಂಡು ಕನಿಷ್ಠ ಗೌರವಧನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಭದ್ರತೆ ಹಾಗೂ ಸೇವಾ ವಿಲೀನತೆಗಾಗಿ ನಿರಂತರ ಹೋರಾಟ ಮಾಡಿದ್ದರಿಂದ ಡಿ. 4 ರಂದು ಉನ್ನತ ಶಿಕ್ಷಣ ಸಭೆಯಲ್ಲಿ ಸೇವಾ ಭದ್ರತೆಯೊಂದಿಗೆ 25 ಸಾವಿರ ರೂ.ಗಳ ವೇತನ ನೀಡಲು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದು, ಆ ಭರವಸೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಗಾಗಿ ಜೆಒಸಿ ಅಥವಾ ದೆಹಲಿ ಹಾಗೂ ಇತರೆ ರಾಜ್ಯ ಸರ್ಕಾರಗಳ ಮಾದರಿಯಲ್ಲಿ ಕಾಯಂಗೊಳಿಸಲು ನಿರ್ಧರಿಸಿದಂತೆ ಸರ್ಕಾರ ಈಗಾಗಲೇ ಇಲಾಖೆಯ ವತಿಯಿಂದ ವಿಶೇಷ ನಿಯಮಾವಳಿ ರಚಿಸಲು ಇಡೀ ಕಡತವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹಾಗೂ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಚರ್ಚಿತಗೊಂಡ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ವೇತನ ತಿಂಗಳಿಗೆ 25 ಸಾ.ರೂ.ಗಳಿಗೆ ಹೆಚ್ಚಿಸುವುದನ್ನು ಅಧಿವೇಶನದಲ್ಲಿ ಮಂಡಿಸಿ ಅನುಮತಿ ಪಡೆದು ಜಾರಿಗೊಳಿಸುವಂತೆ ಆಗ್ರಹಿಸಿದರು.
ಧರಣಿಯಲ್ಲಿ ಸಮಿತಿ ಅಧ್ಯಕ್ಷ ಜಗಪ್ಪ ತಳವಾರ, ಪ್ರಧಾನ ಕಾರ್ಯದರ್ಶಿ ಅಣವೀರಪ್ಪ ಬೋಳೆವಾಡ, ಸಂಘಟನಾ ಕಾರ್ಯದರ್ಶಿ ರಮೇಶ ಕವಡೆ, ಖಜಾಂಚಿ ಡಾ| ವೀರೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು.