Advertisement

ನದಿ ಪಾತ್ರದ ಗ್ರಾಮಗಳಲ್ಲಿ ಪರಿಶೀಲನೆ

09:46 PM Aug 16, 2019 | Team Udayavani |

ಚಾಮರಾಜನಗರ: ಪ್ರವಾಹದಿಂದ ಸಂತ್ರಸ್ತಗೊಂಡಿದ್ದ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಸಾರ್ವಜನಿಕ ಉದ್ದಿಮೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ನೆರೆ ನಿರ್ವಹಣೆ ಕುರಿತ ನೋಡಲ್‌ ಅಧಿಕಾರಿ ಡಾ.ಜಿ. ಕಲ್ಪನಾ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪ್ರವಾಹಕ್ಕೆ ತುತ್ತಾಗಿದ್ದ ಹಳೇ ಅಣಗಳ್ಳಿ, ದಾಸನಪುರ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿ, ಮನೆಗಳ ಕುಸಿತ, ಕಾಲುವೆಗಳು, ರಸ್ತೆಗಳನ್ನು ವೀಕ್ಷಿಸಿದರು. ಈ ವೇಳೆ ಗ್ರಾಮಸ್ಥರ ಮನವಿ ಆಲಿಸಿ, ವಾಸ್ತವ ಪರಿಸ್ಥಿಯ ಮಾಹಿತಿ ಪಡೆದುಕೊಂಡರು. ಪ್ರವಾಹದಿಂದ ಹಾನಿಗೀಡಗಿರುವ ಬೆಳೆ ಹಾಗೂ ಕುಸಿತಕ್ಕೆ ಒಳಗಾಗಿರುವ ಮನೆಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ನೀಡುವಂತೆ ಗ್ರಾಮದ ಜನತೆ ಮನವಿ ಮಾಡಿದರು.

ವೆಸ್ಲಿ ಸೇತುವೆ ಮೇಲೆ ಸಂಚಾರ ನಿಷೇಧ: ಭರಚುಕ್ಕಿ ಪ್ರದೇಶದ ವ್ಯಾಪ್ತಿಯಲ್ಲಿರುವ ವೆಸ್ಲಿ ಸೇತುವೆಯನ್ನು ವೀಕ್ಷಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರವಾಹ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮೇಲಿನ ಓಡಾಟ, ಸಂಚಾರವನ್ನು ನಿಷೇಧಿಸಿರುವ ಕುರಿತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದರು.

ಪ್ರವಾಹ ಸಂತ್ರಸ್ತರಿಗಾಗಿ ಕೊಳ್ಳೇಗಾಲ ಪಟ್ಟಣದ ವರ್ಗೀಕೃತ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಅಲ್ಲಿನ ಅಡುಗೆ ಕೋಣೆ, ಆಹಾರ ಪದಾರ್ಥಗಳ ದಾಸ್ತಾನು, ಊಟದ ಹಾಲ್‌, ವಾಸ್ತವ್ಯ ಕೊಠಡಿಗಳನ್ನು ಪರಿಶೀಲಿಸಿದರು. ಯಾವುದೇ ದೂರುಗಳಿಗೆ ಅವಕಾಶವಾಗದಂತೆ ಊಟ, ಉಪಾಹಾರವನ್ನು ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಂತ್ರಸ್ತರೊಂದಿಗೆ ಮಾತುಕತೆ: ಪರಿಹಾರ ಕೇಂದ್ರಗಳಲ್ಲಿ ಇದ್ದ ಸಂತ್ರಸ್ತರೊಂದಿಗೆ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ನಿಮಗೆ ನೀಡಲಾಗುತ್ತಿರುವ ಆಹಾರ ಉತ್ತಮವಾಗಿದೆಯೆ?, ಪರಿಹಾರ ಕೇಂದ್ರದಲ್ಲಿ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

Advertisement

ಸಮರ್ಪಕ ವರದಿ ಸಲ್ಲಿಸಿ: ಪರಿಶೀಲನೆ ಬಳಿಕ ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿಯವರು, ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮಗಳಲ್ಲಿ ಆಗಿರುವ ಬೆಳೆ, ಮನೆ ಹಾನಿ ಇನ್ನಿತ್ತರ ಪರಿಸ್ಥಿತಿ ಕುರಿತು ಸಮರ್ಪಕವಾಗಿ ವಿಸ್ತತ ವರದಿಯನ್ನು ನೀಡಬೇಕು. ಪರಿಹಾರ ಕ್ರಮಗಳಿಗೆ ಮುಂದಾಗಬೇಕಿರುವ ಹಿನ್ನೆಲೆಯಲ್ಲಿ ಅತ್ಯಂತ ಹೊಣೆಗಾರಿಕೆಯಿಂದ ವರದಿಯನ್ನು ತುರ್ತಗಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾ ಕುಮಾರಿ, ಉಪವಿಭಾಗಾಧಿಕಾರಿ ನಿಖೀತಾ, ತಹಶೀಲ್ದಾರ್‌ ಕೆ.ಕುನಾಲ್‌, ಪ್ರವಾಹ ನಿರ್ವಹಣೆ ನೋಡಲ್‌ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಂತ್ರಸ್ತ ಗ್ರಾಮಗಳಲ್ಲಿ ವ್ಯವಸ್ಥೆ ಕಲ್ಪಿಸಿ: ಸಂತ್ರಸ್ತ ಗ್ರಾಮಗಳಲ್ಲಿ ಆರೋಗ್ಯ ಪೂರಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಯಾವುದೇ ಸೊಂಕು, ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಳ್ಳಬೇಕು. ಗ್ರಾಮಗಳಿಗೆ ವೈದ್ಯರು ತೆರಳಿ ಆರೋಗ್ಯ ಸಂಬಂಧಿ ತಪಾಸಣೆ, ಸಲಹೆ ಹಾಗೂ ಅರಿವು ಮೂಡಿಸಲು ಮುಂದಾಗಬೇಕು ಎಂದು ಸಾರ್ವಜನಿಕ ಉದ್ದಿಮೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ. ಕಲ್ಪನಾ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next